ಆತ್ಮಸಖ್ಯಕ್ಕೆ ಸಂದ ಕೇಳುಗ ಮಹಾಪ್ರಭುಗಳು

BanuliPayana 1ನಾನು ಕೆಲಸಕ್ಕೆ ಸೇರಿದ ದಿನ ನಿಲಯ ನಿರ್ದೇಶಕರಾದ ಶ್ರೀ ಎಚ್. ವಿ. ರಾಮಚಂದ್ರ ರಾಯರು ಹೇಳಿದ ಕಿವಿಮಾತುಗಳಲ್ಲಿ ಒಂದು, “ನೀನು ಮಾಡುವ ತಪ್ಪು ಲಕ್ಷಾಂತರ ಜನರನ್ನು ತಲುಪುತ್ತದೆ. ಮಾಡಿದ ತಪ್ಪನ್ನು ಹಿಂದಕ್ಕೆ ಪಡೆಯುವಂತಿಲ್ಲ. ಆದುದರಿಂದ ತಪ್ಪು ಮಾಡುವ ಮೊದಲೇ ಎಚ್ಚರವಿರಬೇಕು”. ಆ ಕಾರಣದಿಂದಲೋ ಏನೋ ನಮ್ಮ ಕೇಳುಗರೆಲ್ಲಾ ನಮ್ಮ ತಪ್ಪನ್ನು ಹಿಡಿಯಲೆಂದೇ ಬಲೆ ಬೀಸಿ ಕಾದಿರುವರು ಎಂಬ ತಪ್ಪು ಕಲ್ಪನೆಯ ಒಂದು ಚಿತ್ರ ನನ್ನ ಮನಸ್ಸಿನ ಮೂಲೆಯಲ್ಲಿ ಸ್ಥಾಯಿಯಾಗಿ ಕುಳಿತುಬಿಟ್ಟಿತ್ತು. ಆಗಿನ ಸಹಾಯಕ ನಿಲಯ ನಿರ್ದೇಶಕರಾಗಿದ್ದ ಶ್ರೀ ಕೆ. ಪಿ. ಕೆ. ನಂಬಿಯಾರರು “ಮೈಕ್ರೋಫೋನನ್ನು ಪ್ರೇಮಿಯ ಕಿವಿಯೆಂದು ತಿಳಿಯಬೇಕು”ಎಂಬ ಸಲಹೆ ಕೊಟ್ಟಿದ್ದರೂ ಪ್ರೀತಿ, ಪ್ರೇಮ ಇತ್ಯಾದಿಗಳ ಬಗ್ಗೆ ಬಾಲ್ಯದಿಂದಲೇ ರೂಢಿಗತವಾಗಿದ್ದ “ಅದು ಮರ್ಯಾದಸ್ಥರಿಗೆ ಸಲ್ಲದ ವಿಚಾರ ” ಎಂಬ ಮಡಿವಂತಿಕೆಯಿಂದಲೋ ಏನೋ ನನ್ನ ಮೇಲೆ ಆ ಸಲಹೆಯೂ ಹೆಚ್ಚಿನ ಪರಿಣಾಮ ಬೀರಿರಲಿಲ್ಲ. ಆದರೆ ಕ್ರಮೇಣ ಕೇಳುಗ ಮಹಾ ಪ್ರಭುಗಳಿಗೆ ನಾನು ಒಲಿದದ್ದು, ಅವರೂ ನನ್ನ ಆತ್ಮಸಖ್ಯಕ್ಕೆ ಸಂದದ್ದು ನನಗರಿವಿಲ್ಲದೇ ನಡೆದು ಹೋಯಿತು. ಬಹುಶ: ಅದಕ್ಕೆ ಕಾರಣಗಳನ್ನು ಹುಡುಕಲು ಹೋದರೆ ಮೊದಲು ನನಗೆ ನೆನಪಾಗುವುದು ನನ್ನ ಮಗನ ಬಾಲ್ಯ. ಅವನು ಚಿಕ್ಕವನಿದ್ದಾಗ ಕಛೇರಿಯಿಂದ ಅವನನ್ನು ಸಂಪರ್ಕಿಸುವ ದೂರವಾಣಿ ನಮ್ಮ ಮನೆಯಲ್ಲಿ ಆಗ ಇಲ್ಲದಿದ್ದ ಆ ಕಾಲದಲ್ಲಿ, ಅಳುವ ಮಗುವನ್ನು ಸಂತೈಸಲು ಆತನನ್ನು ನೋಡಿಕೊಳ್ಳುವಾಕೆ “ಅಮ್ಮ ರೇಡಿಯೋದಲ್ಲಿ ಮಾತಾಡುವುದು ಕೇಳು” ಅಂತ ನನ್ನ ಧ್ವನಿಯನ್ನು ಅವನಿಗೆ ಕೇಳಿಸಿ ಸಮಾಧಾನಿಸುತ್ತಿದ್ದ ಸಂಗತಿ ನನಗೆ ಗೊತ್ತಿತ್ತು. ಬೆಳಗ್ಗೆ, ಸಂಜೆಯೆನ್ನದೆ ನನ್ನನ್ನು ಅವ ರೇಡಿಯೋ ಮೂಲಕ ಕೇಳುತ್ತಾನೆಂಬ ಧ್ಯಾಸದಲ್ಲಿ ನನ್ನ ಧ್ವನಿಯಲ್ಲಿ ನಾನು ತಂದುಕೊಳ್ಳಲು ಪ್ರಯತ್ನಿಸಿದ ಮಾರ್ದವತೆ, ಆತ್ಮೀಯತೆ ಹಾಗೂ ವಾತ್ಸಲ್ಯದ ಟಚ್ – ಇವು ನನ್ನ ಮಾತುಗಳಿಗೊಂದು ಮೃದುತ್ವದ ಕಾಯಕಲ್ಪ ಕೊಟ್ಟವು. ಇದು ಕೇವಲ ನನ್ನ ಉದ್ಘೋಷಣೆಗಷ್ಟೇ ಅಲ್ಲ ನನ್ನ ವ್ಯಕ್ತಿಗತ ಸಂಬಂಧಗಳಿಗೂ ಆತ್ಮೀಯತೆಯ ಲೇಪವನ್ನು ಕೊಟ್ಟವು.

 Banuli2501ಕೇಳುಗರ ಜೊತೆಗಿನ ನನ್ನ ಸಂಬಂಧವನ್ನು ಸುಮಧುರವಾಗಿಸುವಲ್ಲಿ ನನಗೆ ನೆರವಾದ ಇನ್ನೊಂದು ಅಂಶವೆಂದರೆ ಪ್ರೊ. ರಮೇಶ ಕೆದಿಲಾಯರು ಬಾನುಲಿ ಬಗ್ಗೆ ಪತ್ರಿಕೆಯಲ್ಲಿ ಬರೆದ ಒಂದು ಲೇಖನ. ಅದರಲ್ಲಿ ಅವರು ರೇಡಿಯೋ ಕೇಳುವ ಅನಾಮಿಕ, ಅಜ್ಞಾತ ಶ್ರೋತೃವಿನ ಬಗ್ಗೆ ಮಾಡಿದ ಉಲ್ಲೇಖ ನನ್ನ ಕಣ್ಣು ತೆರೆಯಿಸಿತು. ಆ ಬಳಿಕ ನಾನು ಪ್ರಸಾರದ ಕೊಠಡಿಯಲ್ಲಿ ಏಕಾಂಗಿಯಾಗಿ ಕುಳಿತು ಮುಂಜಾವದ ಪ್ರಶಾಂತ ಸಮಯವಿರಬಹುದು, ರಾತ್ರಿಯ ನೀರವ ಕ್ಷಣಗಳಿರಬಹುದು, ಮಾತನಾಡುವ ಆ ಘಳಿಗೆಯಲ್ಲಿ ನಾನು ನನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿದ್ದುದು ನಮ್ಮಂತೆ ಏಕಾಂಗಿಯಾಗಿ ತನ್ನ ಮನೆಯ ನಾಲ್ಕು ಗೋಡೆಗಳ ನಡುವೆ ಇಲ್ಲವೇ ಮನೆಯ ತಾರಸಿಯ ಮೇಲೆ ಮಲಗಿಯೋ ಕುಳಿತೋ ನಮ್ಮನ್ನು ಕೇಳಿಸಿಕೊಳ್ಳುತ್ತಿರುವ ಒಬ್ಬ ಅನಾಮಿಕ ಶ್ರೋತೃವನ್ನು. ಕೇವಲ ಒಂದು ಜೊತೆ ಕಿವಿಗಳಿಗಾಗಿ, ಆ ಕಿವಿಗಳ ಶ್ರವಣಾನಂದಕ್ಕಾಗಿ, ಆ ಒಂಟಿ ಹೃದಯದ ಜೊತೆ ಒಂದು ಜುಗಲ್ ಬಂದಿ ಬೆಸೆಯಲಿಕ್ಕಾಗಿ ಎಂಬ ಭಾವದಿಂದ, ಆತ್ಮೀಯವಾಗಿ ಅವರಿಗಷ್ಟೇ ಕೇಳುವಷ್ಟು ಹಿತವಾಗಿ ಮಾತನಾಡಬೇಕು ಎಂಬ ಜ್ಞಾನೋದಯವಾದ ಘಳಿಗೆಯಿಂದ ನಾನು ನನ್ನ ಮಾತು, ಧ್ವನಿಗಳಲ್ಲಿನ ಕರ್ಕಶ, ಕಟುತ್ವಗಳನ್ನೆಲ್ಲ ನೀಗಿಸಿಕೊಳ್ಳುವ ಪ್ರಯತ್ನ ಮಾಡಿದೆ. ಪ್ರೀತಿಯ ಒಂದು ಹದವಾದ ಸ್ಪರ್ಶದೊಂದಿಗೆ ಆ ಮಾತುಗಳನ್ನು ತೇಲಿಬಿಡತೊಡಗಿದೆ. ಪ್ರೀತಿಗೆ ಕರಗದವರುಂಟೇ? ಮತ್ತೆ ನಡೆದುದೆಲ್ಲ ಇತಿಹಾಸ. ಬಹುಶ:ನಂಬಿಯಾರ್ ಸರ್ ಹೇಳಿದ್ದು ಇದನ್ನೇ ಇರಬಹುದು ಅಂತ ಈಗ ನನಗೆ ಅರ್ಥವಾಗುತ್ತಿದೆ.

 ದಿನ ನಿತ್ಯ ಆಕಾಶವಾಣಿಗೆ ಅಸಂಖ್ಯಾತ ಪತ್ರಗಳು ಬರುತ್ತವೆ. ಮುಗ್ಧ, ನಿರ್ವಾಜ್ಯ ಪ್ರೀತಿಯ ಪತ್ರಗಳಿಂದ ಹಿಡಿದು ವಿಮರ್ಶಾತ್ಮಕ ಪತ್ರಗಳವರೆಗೆ ಸಾವಿರಾರು ಪತ್ರಗಳು. ಕುರ್ಕಾಲು ರಾಜು ಶೆಟ್ಟಿಗಾರ್, ಮಾಖೇಡಿಮನೆಯ ಕೃಷ್ಣಯ್ಯ ಶೇರಿಗಾರ್, ಇಂದ್ರಾಜೆಯ ಲೋಕೇಶ ಆಚಾರ್ಯ, ನೆಲ್ಲಿಕಾರಿನ ಪೂವಪ್ಪ, ಕುಳೂರು ಚಿನಾಲದ ಚಂದ್ರಹಾಸ, ಶಾಂತೂ ಮಲ್ಪೆ, ಕಾಟಿಪಳ್ಳದ ಪುರುಷೋತ್ತಮ ಬಂಗೇರ, ಕಾರ್ಕಳದ ಮಧುಸೂದನ, ಜಾರ್ಕಳದ ಗಣೇಶ್ ಆಚಾರ್, ಮಾಳದ ಫಾಟಕ್ ದಂಪತಿಗಳು, ಗೇರುಕಟ್ಟೆಯ ಮಧೂರು ಮೋಹನ ಕಲ್ಲೂರಾಯ, ಗುರುಪುರ ಕೈಕಂಬದ ರಮೇಶ್ ರಾವ್, ಕುಂದಾಪುರದ ರವೀಂದ್ರ ಪೈ, ಬಂಟಕಲ್ಲಿನ ಸದಾನಂದ ನಾಯಕ್, ಶಕ್ತಿ ನಗರದ ಆನಂದರಾಯ ಕಾಮತ್, ಕೊಟ್ಟಾರ ಚೌಕಿಯ ಯು.ರಾಮರಾವ್, ಉಡುಪಿಯ ನಿರ್ಮಲಾ ರಾವ್, ಮಂಗಳೂರಿನ ಮುಕೇಶ್ ನಾಯಕ್, ಬಿಕರ್ನಕಟ್ಟೆಯ ರಾಮಚಂದ್ರ, ಕುಂದಬಾರಂದಾಡಿಯ ಸುಬ್ರಹ್ಮಣ್ಯ ಪೂಜಾರಿ, ಮಂಜೇಶ್ವರದ ನಳಿನಾಕ್ಷಿ ಶೆಟ್ಟಿ, ತೋಕೂರಿನ ಸುಕನ್ಯಾ, ಸುರತ್ಕಲ್ಲಿನ ಗೋಪಾಲ, ಕುಂದಾಪುರದ ಪ್ರೊ.ಕೇಶವ ಮಯ್ಯ, ತೊಟ್ಟಾಂನ ದೊನಾತ್ ಡಿ’ ಅಲ್ಮೇಡ, ಬಿಜೈಯ ಕೆ.ವಿ.ಸೀತಾರಾಮ್, ಕಾಳಾವರದ ವೇದಾ ಶೆಟ್ಟಿ – ಹೀಗೆ ಅಸಂಖ್ಯ ಶ್ರೋತೃಗಳು. ಪ್ರೊ.ಅಮೃತ ಸೋಮೇಶ್ವರ, ಪ್ರೊ. ಪಾ. ಸಂಜೀವ ಬೋಳಾರರಿಂದ ಬಂದ ಪತ್ರಗಳೆಂದರೆ ಅವು ಆ ಕಾರ್ಯಕ್ರಮಕ್ಕೆ ಸಂದ ಪ್ರಶಸ್ತಿಗಳೆಂದೇ ಭಾವಿಸುತ್ತಿದ್ದೆ.

 ಕಾರ್ಯಕ್ರಮದ ಪ್ರಸಾರ ಮುಗಿಸಿ ಹೊರಗೆ ಬಂದ ತಕ್ಷಣ ದೂರವಾಣಿಯ ಮೂಲಕ ಸಿಗುವ ಕೇಳುಗರ ಪ್ರತಿಕ್ರಿಯೆ ಚೇತೋಹಾರಿಯಾಗಿರುತ್ತದೆ. ಒಮ್ಮೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಒಂದು ಲೈವ್ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ಅದನ್ನು ಮುಗಿಸಿ ಹೊರಗೆ ಬಂದ ತಕ್ಷಣ ಒಂದು ದೂರವಾಣಿ ಕರೆ, ಮಿತ್ರ ಮನೋಹರಪ್ರಸಾದ್ ಅವರದು. “ಹಬ್ಬಕ್ಕೆಂದು ಊರಿಗೆ ಹೊರಟಿದ್ದೆ. ಈಗ ಪಡುಬಿದ್ರೆ ತಲುಪಿದ್ದೇನೆ. ಮಂಗಳೂರಿನಿಂದ ಹೊರಟಾಗ ನಿಮ್ಮ ಕಾರ್ಯಕ್ರಮ ಆರಂಭವಾಗಿತ್ತು. ಮುಗಿದಾಗ ಪಡುಬಿದ್ರೆ ತಲುಪಿರುವುದು ಗೊತ್ತಾಯ್ತು. ದಾರಿಯಲ್ಲಿ ಏನಾದರೂ ಅಪಘಾತವಾಗಿದ್ದರೆ ಅದಕ್ಕೆ ನೀವೇ ಹೊಣೆಯಾಗ್ತಿದ್ರಿ, ಹೇಗೆ ಅಲ್ಲಿಂದ ಇಲ್ಲಿ ವರೆಗೆ ಬಂದೆ ಅನ್ನುವುದೇ ತಿಳಿಯಲಿಲ್ಲ”. ಇಷ್ಟು ಅವರ ಮಾತಿನ ಸಾರ.

Banuli2502 ಖ್ಯಾತ ಹೃದ್ರೋಗತಜ್ಞ ಡಾ. ಆರ್. ಎಲ್. ಕಾಮತ್ ಅವರ ಬಳಿ ವಾರ್ಷಿಕ ಆರೋಗ್ಯ ತಪಾಸಣೆಗೆ ಹೋಗುವುದು ರೂಢಿ. ಆಗ ಅವರು ನನ್ನ ಆರೋಗ್ಯದ ವಿಷಯ ಬದಿಗಿಟ್ಟು ನಮ್ಮ ಕಾರ್ಯಕ್ರಮಗಳ ಬಗ್ಗೆಯೇ ಮಾತನಾಡುವುದು ಜಾಸ್ತಿ, “ಹೌದನಾ, ರಾತ್ರಿ ಹನ್ನೊಂದು ಗಂಟೆಗೆ ಯಾಕೆ ರೇಡಿಯೋ ಬಂದ್ ಮಾಡ್ತೀರಿ, ರಾತ್ರಿ ಸುನಾಮಿ ಬಂದರೆ ನಮ್ಮನ್ನು ಎಚ್ಚರಿಸುವವರು ಯಾರು, ಮಲೇಶ್ಯಾಗೆ ಹೋಗಿದ್ದಾಗ ನಡುರಾತ್ರಿಯಲ್ಲೂ ಟ್ಯಾಕ್ಸಿಯಲ್ಲಿ ಅಲ್ಲಿಯ ರೇಡಿಯೋ ಪ್ರಸಾರ ಕೇಳಿದ್ದೇನೆ, ನೀವೂ ಹಾಗೆ ಮಾಡಬಹುದಲ್ಲಾ” – ಹೀಗೆ ಅವರ ಮಾತಿನ ವರಸೆ ಸಾಗುತ್ತಾ ಇರುತ್ತದೆ. ಡಾ. ಜಿ. ಜಿ. ಲಕ್ಷ್ಮಣ ಪ್ರಭು, ಡಾ.ಮೋಹನದಾಸ ಭಂಡಾರಿ, ಲೆಕ್ಕ ಪರಿಶೋಧಕರಾದ ಶ್ರೀ ಎಸ್.ಎಸ್.ನಾಯಕ್ – ಇವರೆಲ್ಲಾ ಕಾರಿನಲ್ಲಿ ಹೋಗುತ್ತಾ ಬರುತ್ತಾ ಕೇಳಿದೆ ಅಂತ ಹೇಳಿ ತಮ್ಮ ಸಂತೋಷವನ್ನು ವ್ಯಕ್ತ ಪಡಿಸುತ್ತಿದ್ದರು. ಲೆಕ್ಕ ಪರಿಶೋಧಕರಾದ ಶ್ರೀ ಗಿರಿಧರ ಕಾಮತರು ಸೆಲೂನಿನಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾಗ ಅಲ್ಲಿ ದೊಡ್ಡದಾಗಿ ಇಟ್ಟ ರೇಡಿಯೋದಲ್ಲಿ ಆಗ ಪ್ರಸಾರವಾಗುತ್ತಿದ್ದ ನನ್ನ ಲೈವ್ ಕಾರ್ಯಕ್ರಮವೊಂದನ್ನು ಕೇಳಿ ಮೆಚ್ಚಿ ನನಗೊಂದು ಬಹಳ ಸುಂದರ ವಿಮರ್ಶಾತ್ಮಕ ಪತ್ರ ಬರೆದಿದ್ದರು. ಆ ಪತ್ರ ಎಷ್ಟೋ ದಿನಗಳವರೆಗೆ ನನ್ನ ಬಳಿ ಇತ್ತು. ಅಂತೆಯೇ ಪ್ರೊ. ಪಾ. ಸಂಜೀವ ಬೋಳಾರರು ಬರೆದ ಪತ್ರವೊಂದನ್ನು ಕೂಡಾ ಜೋಪಾನವಾಗಿ ಬಹುಕಾಲ ಇಟ್ಟಿದ್ದೆ.

 ಬಾಯಿ ಬಿಟ್ಟರೆ ಬಣ್ಣಗೇಡು ಎಂಬ ಗಾದೆ ಬೇರೊಂದು ರೀತಿಯಲ್ಲಿ ನನ್ನ ಅನುಭವಕ್ಕೆ ಬಂದಿದೆ. ಬಸ್ಸಿನಲ್ಲಾಗಲಿ, ತರಕಾರಿಯವರಲ್ಲಾಗಲೀ ಚಿಲ್ಲರೆಯ ತಗಾದೆ ತೆಗೆಯಲಾಗದ, ಚೌಕಾಸಿ ಮಾಡಲಾಗದ ಸ್ಥಿತಿ, ಬಾಯಿ ಬಿಟ್ಟರೆ “ಓ ,ನೀವು ಅವರಲ್ವಾ?” ಅಂತ ಪತ್ತೆ ಹಚ್ಚುವಾಗ ಚಿಲ್ಲರೆಯ, ಚೌಕಾಸಿಯ ಮಾತು ದೂರವೇ ಉಳಿಯುತ್ತಿತ್ತು. ಆಕಾಶವಾಣಿಯ ಕನ್ನಡ ಮತ್ತು ಕೊಂಕಣಿ ನಾಟಕಗಳ ಅಂಗೀಕೃತ ಹಿರಿಯ ಕಲಾವಿದೆ ಶ್ರೀಮತಿ ಶಾಲಿನಿ ಪಂಡಿತ್ ಅವರು ದಿನವೂ ಬೆಳಗ್ಗೆ ರೇಡಿಯೋ ಹಾಕಿ ವಂದನಾ, ಚಿಂತನ, ಚೆಲುವು – ನಲಿವು ಕೇಳುವವರು. ಚೆಲುವು – ನಲಿವು ಕಾರ್ಯಕ್ರಮದ ಕೊನೆಗೆ “ಇವತ್ತಿಗೆ ಇಷ್ಟು ಸಾಕು, ನಾಳೆ ಮತ್ತಷ್ಟು, ಬರಲಾ?”ಎಂದು ಕೊನೆಗೊಳ್ಳುವ ನನ್ನ ಮಾತುಗಳನ್ನು ಮೆಚ್ಚಿಕೊಂಡು ನಮ್ಮ ಮನೆಯಂಗಳದಲ್ಲೇ ನಿಂತು ನೀನು ಬರಲಾ ಅಂತ ಕೇಳಿದಂತಾಗುತ್ತದೆ ಎಂದು ಎಷ್ಟೋ ಬಾರಿ ಹೇಳಿದ್ದರು.

 ಕಾವೂರಿನ ವಾಮನ ಭಾಗೀರಥಿ ಕುಮಾರ್ ಎಂಬವರೊಬ್ಬರು ಪ್ರತಿದಿನ ಆಕಾಶವಾಣಿಗೆ ಕಾಗದ ಬರೆಯುತ್ತಿದ್ದರು. ತಮ್ಮ ತಂದೆ ತಾಯಿಯ ಹೆಸರನ್ನು ಜೋಡಿಸಿ ತಾವೇ ಇಟ್ಟುಕೊಂಡ ಅಂಕಿತನಾಮವಾಗಿತ್ತದು. ಅವರ ನಿಜ ಹೆಸರು ಏನೆಂದು ನನಗೆ ಗೊತ್ತಿಲ್ಲ. ಬಹುಶ: ಒಂಟಿಯಾಗಿ ವಾಸ ಮಾಡುತ್ತಿದ್ದ ನೊಂದ ಜೀವಿಯೆಂದು ಅವರು ಬರೆಯುವ ಪತ್ರಗಳಿಂದ ಭಾಸವಾಗುತ್ತಿತ್ತು. ಬೆಂದ ಹೃದಯಕ್ಕೆ ನಮ್ಮ ಕಾರ್ಯಕ್ರಮಗಳು ನೀಡುವ ಸಾಂತ್ವನದ ಬಗ್ಗೆ ಅವರದೇ ಆದ ಶೈಲಿಯಲ್ಲಿ ಬರೆಯುವ ರೀತಿ, ಯಕ್ಷಗಾನದ ಕುರಿತು ಬರೆಯುವಾಗ ಚೆಂಡೆ ಸದ್ದು ಮಾತ್ರ ಡಬ್ಬೆಗೆ ಬಡಿದಂತಿತ್ತು ಅನ್ನುವ ವರ್ಣನೆ, ಎಲ್ಲ ಕಾರ್ಯಕ್ರಮಗಳ ಕುರಿತು ಬರೆದು ಅತ್ತಿಗೆ ಸಮಾನರಾದ ಕಿಣಿಯವರಿಗೆ ನಮಸ್ಕಾರಗಳು, ಬಡವನ ಮೇಲೆ ಪ್ರೀತಿ ಇರಲಿ ಎಂಬ ಕೋರಿಕೆಯೊಡನೆ ಪತ್ರ ಮುಕ್ತಾಯಗೊಳ್ಳುತಿತ್ತು. ಅವರ ಪತ್ರವನ್ನು ಒತ್ತೊತ್ತಾಗಿ ತಾಳೆಗರಿಯಲ್ಲಿ ಕೊರೆದಂತೆ ಒಂದಕ್ಕೊಂದು ಬೆಸೆದ ರೀತಿಯಲ್ಲಿ ಬರೆಯುತ್ತಿದ್ದ ಕಾರಣ ಓದಲು ಕಷ್ಟವಾಗುತಿತ್ತು. ಆದುದರಿಂದ ನಾವು ಪ್ರತಿಬಾರಿ ಪತ್ರದ ವಿಷಯವನ್ನು ಓದುವ ಗೋಜಿಗೆ ಹೋಗದೆ “ಈ ಕಾರ್ಯಕ್ರಮವನ್ನು ಕಾವೂರಿನ ವಾಮನ ಭಾಗೀರಥೀ ಕುಮಾರ್ ಅವರೂ ಮೆಚ್ಚಿ ಪತ್ರ ಬರೆದಿದ್ದಾರೆ” ಎಂದಷ್ಟೇ ಉಲ್ಲೇಖಿಸಿ ಪತ್ರೋತ್ತರದಲ್ಲಿ ಮುಂದೆ ಸಾಗುತ್ತಿದ್ದೆವು. ಆ ಒಂದೇ ವಾಕ್ಯದಿಂದ ಧನ್ಯತೆಯ ಭಾವದಿಂದ ಕೃತಾರ್ಥರಾಗುತ್ತಿದ್ದ ಅಲ್ಪತೃಪ್ತ ಜೀವ ಅವರದು. ಸಹೋದ್ಯೋಗಿ ಮಿತ್ರರಾದ ಅಬ್ದುಲ್ ರಶೀದ್ ಅವರು ತಮ್ಮ ಜನಪ್ರಿಯ ಸಾಪ್ತಾಹಿಕ ಸರಣಿ “ಮಂಗಳಾಪುರಿ” ಗಾಗಿ ಅವರನ್ನು ಸಂದರ್ಶಿಸಿ ಕೇಳುಗರಿಗೆ ಅವರ ಪರಿಚಯ ಮಾಡಿಸಿದ್ದರು. ಅಲ್ಲದೆ ಅವರ ಸಂದರ್ಶನದ ಆರಂಭ ಮತ್ತು ಕೊನೆಯಲ್ಲಿ ಪತ್ರೋತ್ತರದ ಅಂಕಿತ ಸಂಗೀತವನ್ನು ನುಡಿಸಿ ಅವರು ನಮ್ಮ ಪತ್ರೋತ್ತರ ಕಾರ್ಯಕ್ರಮದ ಅನಿವಾರ್ಯ ವ್ಯಕ್ತಿ ಎಂದು ಬಿಂಬಿಸಿದ್ದರು. ಕೇಳುಗರನ್ನು ನಮ್ಮ ಆತ್ಮೀಯ ಕಕ್ಷೆಯೊಳಗೆ ಬರಮಾಡಿಕೊಳ್ಳುವ ರಶೀದರ ಈ ವಿಧಾನ ನನಗೊಂದು ಪಾಠದಂತೆ ತೋರಿತ್ತು. ಮುಂದೆ ನಮ್ಮ ಜನಪ್ರಿಯ ಸರಣಿ ಚಿಟ್-ಚಾಟ್ ಅತಿಥಿ ಕಾರ್ಯಕ್ರಮದ ಸಮಾಪನವನ್ನು ನಾನು ಇದೇ ರೀತಿ ಆ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಪ್ರಶ್ನೆ ಕೇಳುತ್ತಿದ್ದ ಹಾಗೂ ಪತ್ರ ಬರೆಯುತ್ತಿದ್ದ ನಾಲ್ವರು ಪ್ರಾತಿನಿಧಿಕ ಶ್ರೋತೃಗಳಾದ ಕೊಟ್ಟಾರ ಚೌಕಿಯ ಯು.ರಾಮರಾವ್, ಮಧೂರು ಮೋಹನ ಕಲ್ಲೂರಾಯ, ನಿಡುವಜೆ ರಾಮಭಟ್ ಹಾಗೂ ರಾಮಪ್ರಸಾದ್ ಕಾಂಚೋಡು ಅವರನ್ನು ಸ್ಟುಡಿಯೋಗೆ ಬರಮಾಡಿಕೊಂಡು ಚಿಟ್-ಚಾಟ್ ಕುರಿತ ಅವರ ಅನಿಸಿಕೆಗಳನ್ನು ಹಂಚಿಕೊಳ್ಳುವಂಥ “ಶ್ರೋತೃಸಂಧಾನ”ವೆಂಬ ಕಾರ್ಯಕ್ರಮ ಆಯೋಜಿಸಿದ್ದೆ.

 Banuli2503ಕಾಟಿಪಳ್ಳದ ಪುರುಷೋತ್ತಮ ಬಂಗೇರ ಅವರೂ ಕೂಡಾ ಕಾರ್ಡಿನಲ್ಲಿ ಒತ್ತೊತ್ತಾಗಿ ತಾನು ಕೇಳಿಸಿಕೊಂಡ ಕಾರ್ಯಕ್ರಮದ ಯಥಾವತ್ ಸಾಲುಗಳನ್ನು ಬರೆಯುತ್ತಿದ್ದರು. ಅವರಿಗೆ ವಿರಳವಾಗಿ, ಚಂದವಾಗಿ, ಕಡಿಮೆ ಮಾತುಗಳಲ್ಲಿ ಬರೆಯಿರಿ ಎಂದು ಹಲವಾರು ಬಾರಿ ವಿನಂತಿಸಿದರೂ ಅವರು ಅದೇ ಚಾಳಿಯನ್ನು ಮುಂದುವರಿಸಿದಾಗ ಹುಸಿ ಮುನಿಸು ತೋರಿ ಎರಡು ವಾರ ಅವರ ಪತ್ರ ಕೈಗೆತ್ತಿಕೊಳ್ಳದ್ದು ನೋಡಿ ಅವರು ಚಿಕ್ಕ ಹಾಗೂ ಚೊಕ್ಕ ಪತ್ರ ಬರೆಯಲು ಆರಂಭಿಸಿದ್ದರು. ಹಾಗೆಯೇ ಮಾಖೇಡಿ ಮನೆಯ ಮಾಜಿ ಸೈನಿಕರಾದ ಕೃಷ್ಣಯ್ಯ ಸೇರಿಗಾರ್ ಅವರು ತುಂಬಾ ಕ್ಲಿಷ್ಟವಾದ ಹಳೆಗನ್ನಡ ಚಂಪೂ ಶೈಲಿಯಲ್ಲಿ ಪತ್ರ ಬರೆಯುತ್ತಿದ್ದು, ಎಲ್ಲೂ ಪೂರ್ಣ ವಿರಾಮವೇ ಇಲ್ಲದ ಉದ್ದುದ್ದನೆಯ ವಾಕ್ಯಗಳಿಂದ ಅದು ಕೂಡಿರುತ್ತಿತ್ತು. ಸರಳವಾಗಿ ನಿಮ್ಮ ಅನಿಸಿಕೆ ಬರೆಯಿರಿ ಎಂದು ಎಷ್ಟು ವಿನಂತಿಸಿದರೂ ಅವರು ತಮ್ಮ ಬರವಣಿಗೆಯ ಶೈಲಿಯನ್ನು ಬದಲಿಸಲಿಲ್ಲ. ಮಾತ್ರವಲ್ಲ ವಾರಕ್ಕೆ ಏಳೆಂಟು ಪತ್ರ ಬರೆಯುವ ಅವರ ಪ್ರತಿ ಪತ್ರವನ್ನು ಓದುವಾಗಲೂ “ಮಾಖೇಡಿಮನೆಯ ಮಾಜಿ ಸೈನಿಕರಾದ ಕೃಷ್ಣಯ್ಯ ಸೇರಿಗಾರ್” ಎಂಬ ಇಡೀ ಪ್ರವರವನ್ನು ಹೇಳದಿದ್ದರೆ “ನಾನು ಮಾಜಿ ಸೈನಿಕನೆನ್ನುವುದಕ್ಕೆ ನನ್ನಲ್ಲಿ ಪುರಾವೆ ಇದೆ. ಅದು ಸುಮ್ಮನೆ ದುಡ್ಡು ಕೊಟ್ಟು ಪಡೆದುದಲ್ಲ.” ಇತ್ಯಾದಿ ಮಾತುಗಳಿಂದ ನಮ್ಮನ್ನು ತಿವಿಯುತ್ತಿದ್ದರು. “ಮಾಜಿ ಸೈನಿಕ” ಎನ್ನುವುದನ್ನು ಉಲ್ಲೇಖಿಸಲೇ ಬೇಕೆಂದು ಜುಲುಮೆ ಮಾಡುತ್ತಿದ್ದರು. ಅವರ ಚಂಪೂ ಶೈಲಿಯ ಮಾತುಗಳನ್ನು ಓದಲಾಗದೇ ಕೈಬಿಟ್ಟರೆ ತಾನು ಕುಂದಗನ್ನಡದವನೆಂದು ಅಸಡ್ಡೆಯೇ ಎಂದೂ ಕೇಳುತ್ತಿದ್ದರು. ಪತ್ರಿಕಾ ಮಾಧ್ಯಮದಲ್ಲಾಗಿದ್ದರೆ ನೇರವಾಗಿ ಕಸದ ಬುಟ್ಟಿಗೆ ಸೇರಿಬಿಡಬಹುದಾಗಿದ್ದ ಕೇಸುಗಳಲ್ಲಿ ನಾವು ಸಾರ್ವಜನಿಕ ಸೇವೆ ಎಂಬ ಹಣೆಪಟ್ಟಿ ಹಚ್ಚಿಕೊಂಡ ನಿಮಿತ್ತ ನಗುಮಾತಿನ ಸೇವೆ ಅನಿವಾರ್ಯವಾಗಿತ್ತು. ನನ್ನ ಜೊತೆ ಪತ್ರೋತ್ತರದಲ್ಲಿ ಭಾಗವಹಿಸುತ್ತಿದ್ದ ಸದಾನಂದ ಹೊಳ್ಳರು ಸೇರಿಗಾರರಿಗೆ ಕುಂದಾಪುರ ಕನ್ನಡದಲ್ಲೇ ಉತ್ತರಿಸಲು ತೊಡಗಿದ ಮೇಲೆ ಅವರ ಸಿಟ್ಟು ಸ್ವಲ್ಪ ಕಮ್ಮಿಯಾಗಿತ್ತು, ನಾನೂ ಅನಿವಾರ್ಯವಾಗಿ ಕುಂದಾಪುರ ಕನ್ನಡದಲ್ಲಿ “ಹ್ವಾಯ್ ಸೇರಿಗಾರ್ರೇ ,ಎಂತಕೆ ಕ್ವಾಪ ಮಾಡ್ಕೊಂಬುದು ಮಾರಾಯ್ರೇ” ಅಂತ ಅವರಿಗೆ ಪೂಸಿ ಹೊಡೆಯುತ್ತಿದ್ದೆ.

 ದಿನವೊಂದಕ್ಕೆ ಐದಾರು ಪತ್ರಗಳನ್ನು ಬರೆಯುತ್ತಿದ್ದ ಕೊಟ್ಟಾರ ಚೌಕಿಯ ಯು. ರಾಮರಾವ್ ಅವರ ಹೆಸರು ಪತ್ರೋತ್ತರದಲ್ಲಿ ಐದಾರು ಬಾರಿಯಾದರೂ ಉಲ್ಲೇಖವಾಗುತ್ತಿತ್ತು. ಆ ಕಾರಣಕ್ಕೆ ಅವರು ನಮ್ಮ ದಾಯಾದಿ ಸಂಬಂಧಿಯೇ ಅಂತ ಪ್ರಶ್ನಿಸಿದವರೂ ಇದ್ದರು. ಕೇಳುಗರು ಏನೇ ಆಕ್ಷೇಪ ಮಾಡಿದರೂ ಅದು ಅವರು ನಮ್ಮ ಮೇಲಿಟ್ಟ ಪ್ರೀತಿಯಿಂದಲೇ ಅನ್ನುವುದು ನಮಗೂ ಗೊತ್ತಿದ್ದ ಕಾರಣ ನಾವೂ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ನಗೆಯಲ್ಲೇ ಅವರ ಸಿಟ್ಟು, ಸಿಡುಕುಗಳು ದೂರವಾಗುವಂತೆ ಮಾಡುತ್ತಿದ್ದೆವು. ಕಾವೂರಿನ ರೇಗೋ ಎಂಬವರು ಈಗಲೂ ತಮ್ಮ ವೈಯಕ್ತಿಕ ನೋವುನಲಿವುಗಳನ್ನು ನನ್ನೊಡನೆ ಹಂಚಿಕೊಳ್ಳುತ್ತಾರೆ.

 ಕೇಳುಗರು ನಮ್ಮ ಪ್ರಭುಗಳು, ನಮ್ಮ ಮಾರ್ಗದರ್ಶಕರು, ನಮ್ಮ ಆರಾಧಕರು. ನಾನು ಕೆಲವೊಮ್ಮೆ ಡಾ.ರಾಜ್ ಕುಮಾರ್ ಅವರಿಂದ ಎರವಲು ಪಡೆದ ಪದವಾದ “ಅಭಿಮಾನೀ ದೇವರು” ಅಂತ ಅವರನ್ನು ಸಂಬೋಧಿಸುತ್ತಿದ್ದೆ. ಕೇಳುಗರಿಲ್ಲದ ಬಾನುಲಿ ಕಾರ್ಯಕ್ರಮಗಳು ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತೆ ವ್ಯರ್ಥ. “ಕಟ್ಟಿಯುಮೆನೋ ಪೊಸ ಬಾಸಿಗಂ, ಮುಡಿವ ಭೋಗಿಗಳಿಲ್ಲದೇ ಬಾಡಿ ಪೋಗದೇ” ಎಂಬ ಕವಿವಾಣಿಯಂತೆ ಕೇಳುಗರಿಲ್ಲದ ಮಾತು ಅರಣ್ಯ ರೋದನವಾದೀತು. ಮಾತ್ರವಲ್ಲ ಕೇಳುಗರ ಹೃದಯ ಮಂದಿರದಲ್ಲಿ ಪ್ರವೇಶ ಪಡೆದು ಅಲ್ಲೇ ಶಾಶ್ವತ ನೆಲೆ ನಿಲ್ಲುವುದಕ್ಕೂ ಭಾಗ್ಯ ಬೇಕು, ಅಷ್ಟೇ ಪರಿಶ್ರಮ ಬೇಕು. ಎಲ್ಲಕ್ಕೂ ಮಿಗಿಲಾಗಿ ಅವರು ನನ್ನವರೆಂಬ ವಾತ್ಸಲ್ಯಭಾವ ಬೇಕು. ಆಗ ಮಾತ್ರ ಕೇಳುಗ ಮಹಾಪ್ರಭುಗಳು ಆತ್ಮ ಸಖ್ಯಕ್ಕೂ ಸಲ್ಲುತ್ತಾರೆ. ನಿವೃತ್ತಿಯ ದಿನಕ್ಕೂ ಮುಂಚಿನಿಂದ ಹಾಗೂ ನಿವೃತ್ತಿಯ ಇಷ್ಟು ದಿನಗಳ ಬಳಿಕವೂ ನನ್ನನ್ನು ಸಂಪರ್ಕಿಸಿ ಸುಖದು:ಖ ವಿಚಾರಿಸುವ ಅಸಂಖ್ಯ ಶ್ರೋತೃಗಳು ಈ ಮಾತಿಗೆ ಸಾಕ್ಷಿ.

 ಮುಂದಿನ ವಾರಕ್ಕೆ

ಕಿಟಾಳ್ ತುಮ್ಕಾಂ ಮೊಗಾಚೆಂ? ಪಾಟ್ಲ್ಯಾ 10 ವರ್ಸಾಂ ಪಾಸುನ್ ಖಳಾನಾಸ್ತಾನಾ ನಿರಂತರ್ ಫಾಯ್ಸ್ ಜಾವ್ನ್ ಆಸ್ಚ್ಯಾ ಕಿಟಾಳಾರ್ ಹಜಾರೊಂ ಪಾನಾಂನಿ ವಿಂಚ್ಣಾರ್ ಕೊಂಕ್ಣಿ ಸಾಹಿತ್ಯ್ ಆಸಾ. ಪಾಟ್ಲ್ಯಾ ಧಾ ವರ್ಸಾಂನಿ ಬಾಂದುನ್ ಹಾಡ್ಲೆಲೆಂ ಕೊಂಕ್ಣಿ ಸಾಹಿತ್ಯಾಚೆಂ ದಾಯ್ಜ್ ಮುಕಾರುನ್ ವ್ಹರುಂಕ್ ತುಮ್ಚಿ ಕುಮಕ್ ಗರ್ಜ್ ಆಸಾ. ಸಕಯ್ಲೊ ಬುತಾಂವ್ ದಾಂಬುನ್ ಗೂಗಲ್ ಪೇ, ಪೋನ್ ಪೇ, ಬ್ಯಾಂಕ್ ಟ್ರಾನ್ಸ್‌ಫರ್ , ಡೆಬಿಟ್ ಕ್ರೆಡಿಟ್ ಕಾರ್ಡಾ ಮಾರಿಫಾತ್ ಖುಶೆಚಿ ವಂತಿಗೆ ದಿವ್ಯೆತ್.

100% feel thumbs up. And how do you feel?
1 :thumbsup: Thumbs up
0 :heart: Love
0 :joy: Joy
0 :heart_eyes: Awesome
0 :blush: Great
0 :cry: Sad
0 :rage: Angry

Leave a Reply

Your email address will not be published. Required fields are marked *

Disclaimer : Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kittall.com will not be responsible for any defamatory message posted under this article. Please note that sending false messages to insult, defame, intimidate, mislead or deceive people or to intentionally cause public disorder is punishable under law. It is obligatory on kittall.com to provide the IP address and other details of senders of such comments, to the authority concerned upon request. Hence, sending offensive comments using kittall.com will be purely at your own risk, and in no way will kittall.com be held responsible.