ಮನಸ್ಸು,ಬುದ್ಧಿಗಳಿಗೆ ಸಾಣೆ ಹಿಡಿದ ಹೊರಾಂಗಣ ಧ್ವನಿಮುದ್ರಣಗಳು

ಆಕಾಶವಾಣಿಯಲ್ಲಿ ಸಾಮಾನ್ಯವಾಗಿ ಓ.ಬಿ ಎಂದು ಕರೆಯಲಾಗುವ, ಸ್ಟುಡಿಯೋದ ಹೊರಗೆ ನಡೆಸುವ ಧ್ವನಿಮುದ್ರಣ ಇಲ್ಲವೇ ಪ್ರಸಾರಕಾರ್ಯಗಳು ನಮ್ಮನ್ನು ಆಕಾಶವಾಣಿಯ ನಾಲ್ಕು ಗೋಡೆಗಳಿಂದಾಚೆಗೆ ಹೋಗಿ ಜನರೊಡನೆ ಬೆರೆಯುವ ಅವಕಾಶ ನೀಡುತ್ತವೆ. ಈ ಓ.ಬಿ ಗಳಲ್ಲಿ ಆಕಾಶವಾಣಿಯೇ ಬೇರೆ ಬೇರೆ ಊರುಗಳಲ್ಲಿ ಏರ್ಪಡಿಸುವ ಸಂಗೀತಕಛೇರಿ, ಯಕ್ಷಗಾನ, ಕವಿಗೋಷ್ಠಿ ಮುಂತಾದ ಕಾರ್ಯಕ್ರಮಗಳಿರಬಹುದು, ಅಥವಾ ಯಾವುದೇ ಸರಕಾರಿ ಇಲ್ಲವೇ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಮಹತ್ವವುಳ್ಳ ಸಮ್ಮೇಳನ, ಸಮಾರಂಭಗಳಿರಬಹುದು ಅಥವಾ ನಾವು ಕೆಲವು ಆಯ್ದ ಪ್ರದೇಶದ ವ್ಯಕ್ತಿ, ಶಾಲೆ, ಮಹಿಳಾಮಂಡಲಗಳನ್ನು ಒಗ್ಗೂಡಿಸಿ ನಡೆಸುವ ಧ್ವನಿ ಮುದ್ರಣ ಕಾರ್ಯಗಳಿರಬಹುದು. ನನ್ನ ಮೂವತ್ತೈದು ವರ್ಷಗಳ ಸೇವಾವಧಿಯ ಉದ್ದಕ್ಕೂ ಇಂಥ ನೂರಾರು ಓ.ಬಿ ಗಳನ್ನು ನಿಭಾಯಿಸಿ, ನಿರ್ವಹಿಸಿದ್ದೇನೆ, ಹಲವು ಬಾನುಲಿ ವರದಿಗಳನ್ನು ತಯಾರಿಸಿ ಪ್ರಸಾರಿಸಿದ್ದೇನೆ, ಸಂದರ್ಶನಾಧರಿತ ರೂಪಕಗಳನ್ನು ಪ್ರಸ್ತುತಪಡಿಸಿದ್ದೇನೆ.

ನನ್ನ ಮೊದಮೊದಲ ಇಂಥ ಓ.ಬಿ ಪ್ರಯೋಗಗಳು ಸಣ್ಣ ಟೇಪ್ ರೆಕಾರ್ಡರ್ ಹಿಡಿದುಕೊಂಡು ಮಂಗಳೂರು ಮತ್ತು ಆಸುಪಾಸಿನಲ್ಲಿ ಹತ್ತಾರು ಜನರನ್ನು ಸಂದರ್ಶಿಸಿ ನಿರ್ಮಿಸಿದ ಸಣ್ಣ ಸಣ್ಣ ಶಬ್ದಚಿತ್ರಗಳ ನಿರ್ಮಾಣ ಕಾರ್ಯದಿಂದ ತೊಡಗಿದುವು. ಶ್ರಾವಣಮಾಸದ ಚೂಡಿಹಬ್ಬಕ್ಕಾಗಿ ಕೆಲವು ಮುತ್ತೈದೆಯರು, ಹೂ ಮಾರ್ಕೆಟ್ಟಿನ ಹೂವಾಡಗಿತ್ತಿಯರು, ಆಯುರ್ವೇದ ಪಂಡಿತರು, ಸಣ್ಣಪುಟ್ಟ ಮಕ್ಕಳನ್ನು, ಸಣ್ಣ ಕುಟುಂಬದ ಪ್ರಯೋಜನ ಸಾರುವ ರೂಪಕಕ್ಕಾಗಿ ಕುಟುಂಬಯೋಜನಾ ಫಲಾನುಭವಿಗಳನ್ನು, ಕಸೂತಿ ಕಲೆಯ ವೈವಿಧ್ಯಮಯ ಹೊಲಿಗೆಗಳನ್ನು ಪರಿಚಯಿಸುವ ರೂಪಕಕ್ಕಾಗಿ ಕೆಲವಾರು ಕುಶಲಕರ್ಮಿಗಳನ್ನು, ’ಶ್ರೀಸಾಮಾನ್ಯೆಯ ಅರಮನೆ’ ರೂಪಕಕ್ಕಾಗಿ ಹಲವಾರು ಹಾಸ್ಟೆಲ್ ವಾಸಿಗಳನ್ನು, “ದೀಪಧಾರಿಣಿ ತೋರಿದ ಹಾದಿಯಲ್ಲಿ” ಶಬ್ದಚಿತ್ರಕ್ಕಾಗಿ ಹಲವಾರು ವೃತ್ತಿ ನಿರತ ದಾದಿಯರನ್ನು, ನೀರಿನ ಬವಣೆಯನ್ನು ಕುರಿತ ಕಾರ್ಯಕ್ರಮಕ್ಕಾಗಿ ಬಹಳಷ್ಟು ನಾಗರಿಕರನ್ನು, ಸ್ವಂತ ಉದ್ದಿಮೆಯ ಮೂಲಕ ಬದುಕು ಕಟ್ಟಿಕೊಂಡವರನ್ನು ಪರಿಚಯಿಸುವ ಕಾರ್ಯಕ್ರಮಕ್ಕಾಗಿ ವಿವಿಧ ಸಣ್ಣ ಸಣ್ಣ ಕೈಕಸುಬು ಮಾಡಿಕೊಂಡವರನ್ನು ಸಂದರ್ಶಿಸುತ್ತಾ ನನ್ನ ಕೈ ಬಾಯಿ ಪಳಗತೊಡಗಿತು. ಆದರೆ ಈ ಕಾರ್ಯಕ್ರಮಗಳನ್ನು ಮಾಡಿ ಪ್ರಸಾರಿಸುವ ಮೂಲಕ ನಾವೇನೋ ಅವರನ್ನು ಉದ್ಧಾರ ಮಾಡುತ್ತಿದ್ದೇವೆ ಎಂಬ ನನ್ನ ಪೊಳ್ಳು ಭ್ರಮೆ ಕ್ರಮೇಣ ಈ ಜನರ ಮನ ಮಿಡಿಯುವ ಕಥೆಗಳಿಂದ ಕರಗಿ ನನ್ನ ಪೊಟ್ಟು ಟೇಪ್ ರೆಕಾರ್ಡರ್ ಹಿಡಿದು ನಾನು ಮಾಡುತ್ತಿರುವ ಈ ಕೆಲಸದಿಂದ ಉದ್ಧಾರವಾಗುವ ಅಗತ್ಯ ಅವರಿಗಿಂತಲೂ ನನಗೇ ಹೆಚ್ಚಿಗೆ ಇದೆ ಎನ್ನುವ ಅರಿವು ನನಗಾಗತೊಡಗಿತು. ಸಂದರ್ಶಿಸುವಾಗ ಅವರ ನೋವುನಲಿವುಗಳಲ್ಲಿ ಅಂತ:ಕರಣ ಪೂರ್ವಕ ಭಾಗಿಯಾಗಬೇಕೆನ್ನುವ ಸತ್ಯವನ್ನು ನಾನು ಮನಗಂಡೆ. ನನ್ನ ಮುಂದಿನ ವೃತ್ತಿ ಬದುಕನ್ನು ಕೈ ಹಿಡಿದು ಮುನ್ನಡೆಸಿದ್ದು ಇದೇ ಸರಳ ಸತ್ಯ. ಅಲ್ಲಿಂದ ತೊಡಗಿ ನಾನು ಸಂದರ್ಶಿಸುವ ಪ್ರತಿಯೊಬ್ಬ ವ್ಯಕ್ತಿಯ ಜಾಗದಲ್ಲಿ ನಾನು ನನ್ನನ್ನೇ ನಿಲ್ಲಿಸಿ ನೋಡತೊಡಗಿದೆ.

 

ಸಾವಿರದ ಒಂಬೈನೂರ ಎಂಬತ್ತಮೂರರಲ್ಲಿ ಕೊಂಕಣಿ ಕಾರ್ಯಕ್ರಮಕ್ಕಾಗಿ ನಾನು ಗಂಗೊಳ್ಳಿ ಪರಿಸರದಲ್ಲಿ ವಾಸ ಮಾಡುವ ಕೊಂಕಣಿ ಮನೆಮಾತಿನ ಖಾರ್ವಿ ಜನಾಂಗದವರನ್ನು ಕುರಿತು ಕ್ಷೇತ್ರಾಧರಿತ ಕಾರ್ಯಕ್ರಮವೊಂದನ್ನು ಮಾಡಿದೆ. ಈ ಕಾರ್ಯಕ್ರಮಕ್ಕಾಗಿ ಮುಂಚಿತವಾಗಿಯೇ ಒಮ್ಮೆ ಗಂಗೊಳ್ಳಿಗೆ ಹೋಗಿ ಖಾರ್ವಿ ಮುಂದಾಳುಗಳನ್ನು ಕಂಡು ಮಾತನಾಡಿ ದಿನ ನಿಗದಿ ಪಡಿಸಿ ಬಂದಿದ್ದೆ. ಸಿಂಡಿಕೇಟ್ ಬ್ಯಾಂಕಿನಲ್ಲಿ ಆಗ ಉದ್ಯೋಗಿಯಾಗಿದ್ದ ಶ್ರೀ ನಾರಾಯಣ ಖಾರ್ವಿಯವರು ನನಗೆ ಈ ವಿಷಯವಾಗಿ ಬಹಳ ಸಹಕಾರವಿತ್ತಿದ್ದರು. ಕಾರ್ಯಕ್ರಮದ ಧ್ವನಿಮುದ್ರಣದ ದಿನ ನಾನು ಮತ್ತು ಶ್ರೀ ಚೇತನ್ ಕುಮಾರ್ ನಾಯ್ಕ್ ಅವರು ನಮ್ಮ ತಾಂತ್ರಿಕ ಬಳಗದೊಡನೆ ಗಂಗೊಳ್ಳಿಗೆ ಹೋದೆವು. ನಮ್ಮ ಕಾರ್ಯಕ್ರಮಕ್ಕಾಗಿ ಕೆಲವು ಜನರ ಸಂದರ್ಶನ, ಅವರ ವಿಶಿಷ್ಟ ಹಾಡುಗಳು ಮಾತ್ರ ನಮಗೆ ಬೇಕಾಗಿದ್ದುವು. ಆದರೆ ನಾವು ಗಂಗೊಳ್ಳಿಯ ನಿಗದಿತ ಸ್ಥಳವನ್ನು ತಲುಪುವಾಗ ಖಾರ್ವಿ ಬಾಂಧವರೆಲ್ಲ ಅವರ ಸಾಂಪ್ರದಾಯಿಕ ವೇಷಭೂಷಣಗಳೊಡನೆ ಸಜ್ಜಾಗಿ ನಿಂತಿದ್ದರು. ಮೊದಲು ಗುಮಟೆಯನ್ನು ನುಡಿಸುತ್ತಾ ಕುಣಿಯುತ್ತಾ ಹಾಡಲಾಯಿತು, ಬಳಿಕ ಕೋಲಾಟದ ಹಾಡನ್ನು ಕೂಡಾ ಅದೇ ರೀತಿ ಕುಣಿದೇ ಧ್ವನಿಮುದ್ರಿಸಲಾಯಿತು. ಆ ಬಳಿಕ ಮೈ ನವಿರೇಳಿಸುವ ಉರಿಯುವ ಬೆಂಕಿ ದೊಂದಿಗಳೊಡನೆ ಹಾಡುತ್ತಾ ಕುಣಿಯುತ್ತಾ ಮತ್ತೊಂದು ಹಾಡನ್ನು ಧ್ವನಿ ಮುದ್ರಿಸಲಾಯಿತು. ಈಗ ಸಂದರ್ಶನದ ಸಮಯದಲ್ಲಿ ಅಷ್ಟು ಹೊತ್ತು ಹಾಡಿ ಕುಣಿದು ಅವರಿಗೆಲ್ಲಾ ಏದುಸಿರು ಬರಲು ತೊಡಗಿತ್ತು. ಆದರೂ ಎಪ್ಪತ್ತರ ಮೇಲಿನ ಹರೆಯದವರಿಂದ ಹಿಡಿದು ಎಳೆಯ ಕಂದಮ್ಮಗಳೂ ಕೂಡಾ ಉತ್ಸಾಹದಿಂದ ಅಲ್ಲಿ ಜಾತ್ರೆಯಂತೆ ನೆರೆದು ಭಾಗವಹಿಸಿದ್ದರು. ನಮ್ಮ ಕೊಂಕಣಿ ಕಾರ್ಯಕ್ರಮದ ಅವಧಿ ಇದ್ದುದೇ ಇಪ್ಪತ್ತೈದು ನಿಮಿಷಗಳು. ಅದರಲ್ಲಿ ಇಷ್ಟೊಂದು ಮಂದಿಯ ಸಂದರ್ಶನ, ನಮ್ಮ ನಿರೂಪಣೆ ಎಲ್ಲವೂ ಸೇರಿ ಅವರ ಹಾಡುಗಳಿಗೆ ಕೆಲವೇ ನಿಮಿಷಗಳು, ಕೆಲವೊಮ್ಮೆ ಕೆಲವೇ ಸೆಕೆಂಡುಗಳು ಮಾತ್ರ ಮೀಸಲಿಡಬಹುದಿತ್ತು. ಆ ಕೆಲವು ನಿಮಿಷಗಳಿಗಾಗಿ ಗೆಜ್ಜೆ ಕಟ್ಟಿ, ಸಾಂಪ್ರದಾಯಿಕ ವೇಷಭೂಷಣ ತೊಟ್ಟು, ದೀವಟಿಗೆ ಉರಿಸಿ ಅವರೆಲ್ಲಾ ನಿಷ್ಠೆಯಿಂದ, ಉತ್ಸಾಹದಿಂದ ಕುಣಿದಿದ್ದರು. ಇದನ್ನೆಲ್ಲಾ ನೆನೆದೇ ನನಗೆ ವಿಚಿತ್ರ ಸಂಕಟವಾಗತೊಡಗಿತ್ತು. ಮಧ್ಯಾನ್ಹದ ಉರಿಬಿಸಿಲಲ್ಲಿ ಮಕ್ಕಳುಮರಿಗಳೊಡನೆ ಬಂದು ಹೃತ್ಪೂರ್ವಕ ಭಾಗವಹಿಸಿದ ಆ ಮೀನುಗಾರ ಸಹೋದರರ ಮುಖಗಳನ್ನು, ಅವರು ಅಲ್ಲಿ ತಂದು ನಿಲ್ಲಿಸಿದ್ದ ಅವರ ಕಿರುದೋಣಿಗಳನ್ನು ಇಂದಿಗೂ ನನಗೆ ಮರೆಯಲಾಗುತ್ತಿಲ್ಲ. “ದರ್ಯಾಚೆ ಲ್ಹಾರಾರಿ ಖೆಳ್ಚೆ ವೀರ್ – ಖಾರ್ವಿ” ಎಂಬ ಆ ರೂಪಕ ಬದುಕನ್ನೇ ಪಣವಾಗಿಟ್ಟುಕೊಂಡು ಸಮುದ್ರಕ್ಕಿಳಿಯುವ ಆ ವೀರರ ಕಥೆಯನ್ನು ಹೃದಯಂಗಮವಾಗಿ ಹೆಣೆಯಲು ನನಗೆ ಅವಕಾಶ ನೀಡಿದ್ದು ಮಾತ್ರವಲ್ಲ ಮುಗ್ಧತೆ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸಗಳ ಬಹಳಷ್ಟು ದರ್ಶನ ಮಾಡಿಸಿತು. ಶ್ರವಣಮಾಧ್ಯಮವಾಗಿದ್ದ ಆಕಾಶವಾಣಿಗಾಗಿ ದೃಶ್ಯಮಾಧ್ಯಮಕ್ಕೆ ಬೇಕಾದಷ್ಟು ತಯಾರಿ ಮಾಡಿಕೊಂದು ಬಂದಿದ್ದ ಅವರೆಲ್ಲ ನಮ್ಮ ಮೇಲೆ ತೋರಿಸುತ್ತಿದ್ದ ಅಭಿಮಾನ, ಗೌರವಗಳಿಗೆ ನಿಜವಾಗಿಯೂ ನಾವು ಅರ್ಹರೇ ಎಂಬ ಪ್ರಶ್ನೆ ನನ್ನೊಳಗೆ ಏಳತೊಡಗಿತ್ತು.

 ಇನ್ನೊಮ್ಮೆ ಕುಂದಾಪುರಕ್ಕೆ ನಮ್ಮನ್ನು ಕರೆಸಿಕೊಂಡವರು ಅಲ್ಲಿಯ ಕೊಂಕಣಿ ಮುಂದಾಳು ಶ್ರೀ ಕೆ. ವಿಶ್ವನಾಥ ಕಾಮತರು. ಅಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ಊಟ, ತಿಂಡಿಯ ವ್ಯವಸ್ಥೆ ಮಾಡಿದ್ದಲ್ಲದೆ ಆ ಊರಿನ ಕೊಂಕಣಿ ಸಮಾಜದ ಪ್ರತಿಭಾನ್ವಿತರನ್ನೆಲ್ಲ ಒಂದೆಡೆ ಕಲೆ ಹಾಕಿದ್ದರು. ಕವಿ ಶ್ರೀ ಗೋಪಾಲಕೃಷ್ಣ ಶಾನುಭಾಗ್, ಅಂತಾರಾಷ್ಟೀಯ ಖ್ಯಾತಿಯ, ಹಲವಾರು ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ಬೊಂಬೆಯಾಟ ಕಲಾವಿದರಾದ ಶ್ರೀ ಕೊಗ್ಗ ದೇವಣ್ಣ ಕಾಮತ್, ಮಹಿಳಾಮಂಡಳಿಯ ಶ್ರೀಮತಿ ಲಕ್ಷ್ಮೀ ವಾಸುದೇವ ಕಾಮತ್, ಹಲವಾರು ಗಾಯಕರು, ಖ್ಯಾತ ನಟ ಶ್ರೀ ಕುಳ್ಳಪ್ಪು – ಹೀಗೆ ಬಹಳಷ್ಟು ಮಂದಿಯನ್ನು ಸಂದರ್ಶಿಸಿ ಹಲವಾರು ವಾರಗಳಿಗೆ ಬೇಕಾದಷ್ಟು ಸರಕನ್ನು ತುಂಬಿಸಿಕೊಂಡು ಬಂದಿದ್ದೆವು. ತನ್ನ ಊರಾದ ಉಪ್ಪಿನಕುದ್ರಿನಿಂದ ಸೈಕಲ್ ತುಳಿದೇ ಬಂದಿದ್ದ ಕೊಗ್ಗ ಕಾಮತರ ಸರಳತೆ, ವಿನಯ, ಎಷ್ಟು ಹೊತ್ತಾದರೂ ಕಾದುಕುಳಿತು ತನ್ನ ಕಲೆಯ ಬಗ್ಗೆ ಹೇಳುವ ಅವರ ಉತ್ಸಾಹ ಇವೆಲ್ಲವನ್ನೂ ನಾನು ಇಂದಿಗೂ ಮರೆಯಲಾರೆ.

ನಾನು ಬಂಟ್ವಾಳಕ್ಕೆ ಹೋಗಿ ನಡೆಸಿದ ಸ್ವಾತಂತ್ರ್ಯಪೂರ್ವದ ಕೆಲವು ವ್ಯಕ್ತಿಗಳ ಸಂದರ್ಶನದ ಬಗ್ಗೆ ಹೇಳಲೇ ಬೇಕು. ಕೊಂಕಣಿಯ ಮೊತ್ತಮೊದಲ ನಾಟಕ “ಚಂದ್ರಹಾಸ”ದ ಕರ್ತೃ ಶ್ರೀ ಬೊಳಂತೂರು ಕೃಷ್ಣಪ್ರಭುಗಳ ಮಗ ಶ್ರೀ ಲಕ್ಷ್ಮೀನಾರಾಯಣ ಪ್ರಭುಗಳ ಮೂಲಕ ಅವರ ವಿಕ್ಟೋರಿಯಾ ಮುದ್ರಣಾಲಯ, ಸರಸ್ವತಿ ಸಂಗೀತಶಾಲೆ ಇವುಗಳ ಪರಿಚಯವಾಯ್ತು. ಮುಂದೆ ಸರಸ್ವತಿ ಸಂಗೀತ ಶಾಲೆಯವರು ಹಲವಾರು ಕಾರ್ಯಕ್ರಮಗಳನ್ನು ಯುವವಾಣಿಯಲ್ಲಿ ನೀಡಿದರು. ದೇಶವಿದೇಶಗಳಲ್ಲಿ ಖ್ಯಾತಿ ಪಡೆದ ಬಂಟ್ವಾಳದ ಯಶವಂತ ವ್ಯಾಯಾಮಶಾಲೆ, ಅಲ್ಲಿಯ ಮಲ್ಲಕಂಬ ಪ್ರದರ್ಶನ, ಆ ಕಲೆಯ ಗುರುಗಳಾದ ಶ್ರೀ ವಾಸುದೇವ ಭಟ್ ಅವರ ಜೊತೆಗಿನ ಸಂದರ್ಶನ, ಸಹಕಾರೀ ಬ್ಯಾಂಕಿನ ಶ್ರೀ ನಾರಾಯಣ ಕಾಮತ್ ಅವರ ಭಾಷಣ, ಶ್ರೀ ಕೊಂಬ್ರಬೈಲ್ ಅವರೊಡನೆ ನಡೆಸಿದ ಸಂದರ್ಶನ ಇವೆಲ್ಲವೂ ಹೀಗೆ ಹೊರಾಂಗಣ ಧ್ವನಿಮುದ್ರಣದಿಂದಲಷ್ಟೇ ನನಗೆ ಲಭ್ಯವಾದ ಅಪರೂಪದ ವ್ಯಕ್ತಿಪ್ರತಿಭೆಗಳು.

ಶ್ರೀಮತಿ ಮಾಲತಿ.ಆರ್.ಭಟ್ ಅವರು ವನಿತಾವಾಣಿಯನ್ನು ನೋಡಿಕೊಳ್ಳುತ್ತಿದ್ದ ಕಾಲದಲ್ಲಿ ನಡೆಸಿದ ಹಲವಾರು ಕ್ಷೇತ್ರಕಾರ್ಯಗಳಿಗೆ ನಾನೂ ಹೋಗಿದ್ದೆ. ಒಮ್ಮೆ ಚೇರ್ಕಾಡಿಯಲ್ಲಿ ನಡೆಯುವ ಯಾವುದೋ ಸ್ವಸಹಾಯ ಸಂಘದ ಕಾರ್ಯಕ್ರಮಕ್ಕೆ ನಾನು ಮತ್ತು ಮಾಲತಿ ಭಟ್ ಸ್ವಸಹಾಯ ಸಂಘದ ಫಲಾನುಭವಿಗಳನ್ನು ಧ್ವನಿಮುದ್ರಿಸಲೋಸುಗ ಹೋಗಿದ್ದೆವು. ಕೇವಲ ಹತ್ತೋ ಇಪ್ಪತ್ತೋ ರೂಪಾಯಿ ಉಳಿಸಿ ತನ್ನ ಖಾತೆಗೆ ಜಮಾ ಮಾಡಿ ಮುಂದೆ ಸಂಘದಿಂದ ಐದೋ ಹತ್ತೋ ಸಾವಿರ ಸಾಲ ಪಡೆದು ಮನೆಗೊಂದು ಸೂರು, ಹೊಲಿಗೆ ಮೆಶೀನು, ಕರಿಮಣಿ ರಿಪೇರಿ, ಮಕ್ಕಳ ವಿದ್ಯಾಭ್ಯಾಸಕ್ಕೆಂದು ಬಳಸಿ ಕೊಂಡವರ ಅನುಭವಕಥನ ತುಂಬಿದ ಕಣ್ಣು, ಗದ್ಗದ ಕಂಠದಿಂದ ಧಾರೆ ಧಾರೆಯಾಗಿ ಹರಿದು ಬರುತ್ತಿದ್ದಂತೆ ನನಗೆ ಮುಂದೆ ಪ್ರಶ್ನಿಸಲಾಗದಂತೆ ಕೊರಳು ಬಿಗಿಯ ತೊಡಗಿತ್ತು. ಕುಡುಕ ಗಂಡನ ಉಪಟಳದಿಂದ ಸಂಸಾರ ದಿಕ್ಕಾಪಾಲಾಗುತ್ತಿದ್ದ ಕಾಲದಲ್ಲಿ ಸ್ವಸಹಾಯ ಸಂಘ ದಾರಿದೀಪವಾದ ಬಗೆಯನ್ನು ಅವರು ಧನ್ಯತೆಯಿಂದ ಹೇಳುತ್ತಿದ್ದರೆ ಇಷ್ಟುದಿನ ದಿನವೂ ಎಂಬಂತೆ ಆಕಾಶವಾಣಿಯಲ್ಲಿ ಇತರರು ನಿರ್ಮಿಸಿದ ಸ್ವಸಹಾಯ ಸಂಘಗಳ ಕುರಿತ ಕಾರ್ಯಕ್ರಮಗಳನ್ನು ನಾನೇ ಪ್ರಸಾರಿಸುತ್ತಿದ್ದರೂ ಅವುಗಳ ಕಡೆಗೆ ಅಷ್ಟಾಗಿ ಕಿವಿಕೊಡದ ನಾನು ಈಗ ಈ ಸಹೋದರಿಯರು ಇವೇ ಸಂಘಗಳಿಂದ ಒಂದು ಚೊಕ್ಕ ಬದುಕು ಕಟ್ಟಿಕೊಳ್ಳುತ್ತಿರುವ ಯಶೋಗಾಥೆಯನ್ನು ಕೇಳುತ್ತಾ ಬೆರಗಾಗಿ ಹೋಗುತ್ತಿದ್ದೆ. ಎಷ್ಟು ಸಂಕಷ್ಟಗಳನ್ನು ಎದುರಿಸಿಯೂ ನಮ್ಮ ಸಹೋದರಿಯರು ಬದುಕನ್ನು ಸಹ್ಯವಾಗಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಹೊಟ್ಟೆ, ಬಟ್ಟೆ, ಸೂರು – ಮುಂತಾದವುಗಳ ಚಿಂತೆಯಿಲ್ಲದ ನಾವು ಯಾವ್ಯಾವುದೋ ಇಲ್ಲದ ಸಮಸ್ಯೆಗಳನ್ನೇ ಇವೆಯೆಂದು ಕಲ್ಪಿಸಿಕೊಳ್ಳುತ್ತಾ ಸುಳ್ಳು ಸುಳ್ಳೇ ಒದ್ದಾಡುವ ಪರಿಗೆ ನನಗೆ ಲಜ್ಜೆಯೆನಿಸಿತು.

ಮುಂದೆ ಮಾಲತಿ ಭಟ್ ಅವರೊಡನೆ ಗುರುವಾಯನಕೆರೆಗೆ ಶ್ರೀಮತಿ ವಿದ್ಯಾ ನಾಯಕ್ ಅವರನ್ನು ಸಂದರ್ಶಿಸಲು ಹೋಗಿದ್ದೆವು.ಅಲ್ಲೂ ಅಷ್ಟೆ, ಸ್ವಸಹಾಯ ಸಂಘದಿಂದ ತಮ್ಮ ಬದುಕಿಗೆ ಸಿಕ್ಕ ಹೊಸ ತಿರುವು, ಉತ್ಸಾಹ, ಸ್ಪೂರ್ತಿಗಳ ಬಗ್ಗೆ ಅಲ್ಲಿನ ಫಲಾನುಭವಿಗಳು ಹೇಳಿದ ಮಾತುಗಳು ಬದುಕಿನಲ್ಲಿ ಸಣ್ಣ ಪುಟ್ಟ ಸಂಗತಿಗಳಿಂದಲೂ ಹೇಗೆ ಸಂಭ್ರಮಿಸಬಹುದು, ಏಕತಾನತೆಯನ್ನು ಹೊಡೆದೋಡಿಸಬಹುದು, ಚೈತನ್ಯವನ್ನು ತುಂಬಬಹುದು ಎಂಬ ಪಾಠವನ್ನು ಕಲಿಸಿದುವು. ಹೀಗೇ ಮುಂದೆ ನಾನೇ ವನಿತಾವಾಣಿಯನ್ನು ನೋಡಿಕೊಳ್ಳುತ್ತಿದ್ದ ಕಾಲದಲ್ಲಿ ಅಪ್ರತಿಮ ಮಹಿಳಾ ಸಾಧಕಿಯರನ್ನು ಪರಿಚಯಿಸುವ “ಶಕ್ತಿರೂಪಿಣಿ’ಯೆಂಬ ಕಾರ್ಯಕ್ರಮ ಸರಣಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಹೇಮಾವತಿ ಹೆಗ್ಗಡೆಯವರನ್ನು ಸಂದರ್ಶಿಸಲು ಹೋಗಿದ್ದೆ. ಜ್ಞಾನ ವಿಕಾಸ ಕೇಂದ್ರ ಹಾಗೂ ಮಹಿಳಾ ಸ್ವಸಹಾಯ ಸಂಘಗಳನ್ನು ಯಶಸ್ವಿಯಾಗಿ ರೂಪಿಸಿ ಮುನ್ನಡೆಸಿದ ಶ್ರೀಮತಿ ಹೆಗ್ಗಡೆಯವರನ್ನು ಈ ಕುರಿತು ಒಲವು ಮೂಡಲು ಕಾರಣವೇನೆಂದು ಪ್ರಶ್ನಿಸಿದಾಗ, ತನ್ನ ಬಾಲ್ಯಕಾಲದಲ್ಲಿ ಮನೆಕೆಲಸದ, ಕೃಷಿಕೆಲಸದ ಹೆಣ್ಣು ಮಕ್ಕಳು ತಮ್ಮ ತಮ್ಮ ಗಂಡಂದಿರ ದುಶ್ಚಟಗಳಿಂದ ಬಳಲಿ ಅವರ ನೋವನ್ನು ತಮ್ಮ ತಾಯಿಯ ಬಳಿ ಹೇಳಿಕೊಳ್ಳುತ್ತಿದ್ದುದನ್ನು ತಾನು ಕಂಡಿದ್ದೆ, ಆದರೆ ತನ್ನ ಅಮ್ಮನಿಗೆ ಅವರಿಗೆ ಸಾಂತ್ವನದ ನಾಲ್ಕು ಮಾತುಗಳನ್ನು ಹೇಳುವುದು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಆದರೆ ತನ್ನ ಮನಸ್ಸಿನಲ್ಲಿ ಮಾತ್ರ ಆ ನೋವಿನ ಚಿತ್ರಗಳು ಹಾಗೆಯೇ ಉಳಿದು ಬಿಟ್ಟಿದ್ದುವು, ಸ್ತ್ರೀಯರ ಈ ಸಮಸ್ಯೆಗಳಿಗೆ ಏನಾದರೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆನ್ನುವ ತನ್ನ ಬಾಲ್ಯದ ತುಡಿತವೇ ಈಗ ಹೀಗೆ ಸಾಕಾರಗೊಂಡಿತು ಎಂದವರು ಹೇಳುತ್ತಿದ್ದರೆ ನಾನು ಬೆರಗಾಗಿ ಹೋಗುತ್ತಿದ್ದೆ.

ಸುರತ್ಕಲ್ ಸಮೀಪದ ಸೂರಿಂಜೆ ಎಂಬ ಊರಿನಲ್ಲಿ ವಿವಿಧ ಧರ್ಮಾನುಯಾಯಿಗಳೊಡನೆ ನಡೆಸಿದ ಸಂದರ್ಶನಗಳನ್ನು ಆಧರಿಸಿದ ಕೋಮುಸೌಹಾರ್ದವನ್ನು ಸಾರುವ ಶಬ್ದಚಿತ್ರಕ್ಕಾಗಿ ನಾನು ಆ ಊರಿನಲ್ಲಿ ನಡೆಸಿದ ಹೊರಾಂಗಣ ಧ್ವನಿಮುದ್ರಣ ನನ್ನ ವೃತ್ತಿಜೀವನದಲ್ಲಿಯೇ ಮರೆಯಲಾಗದಂಥದ್ದು. ಅಲ್ಲಿನ ಪೊನ್ನಗಿರಿ ಮಹಾಲಿಂಗೇಶ್ವರ ದೇವಾಲಯದ ಉತ್ಸವಕ್ಕೆ ಅಲ್ಲಿನ ಮೊಯಿನುದ್ದೀನ್ ಜುಮ್ಮಾ ಮಸೀದಿಯವರು ಹೊರೆ ಕಾಣಿಕೆ ಅರ್ಪಿಸುವುದು, ಜಾತ್ರೆಯ ಸಮಯದಲ್ಲಿ ಮುಸ್ಲಿಮರೇ ಅಂಗಡಿ, ಹೂ ವ್ಯಾಪಾರ ನಡೆಸುವುದು, ಮಸೀದಿಯ ಹಬ್ಬಕ್ಕೆ ದೇವಾಲಯದವರು ಪಾತ್ರೆ ಕೊಡುವುದು, ಮದರಸಾದ ಮಕ್ಕಳಿಗೆ ಸಿಹಿ ಹಂಚುವುದು, ಮಸೀದಿಗೆ ಜಾಗ ಹಾಗೂ ದಾರಂದವನ್ನು ಹಿಂದೂ ಬಾಂಧವರು ಕೊಟ್ಟದ್ದು, ಶೇಖ್ ಅಲಿಯವರ ಜಾಗದಲ್ಲಿರುವ ಕೋರ್ದಬ್ಬು ದೈವದ ಗುಡಿಯ ನೇಮದ ಸಮಯದಲ್ಲಿ ದೈವವು ಶೇಖರು ಮುಂದೆ, ನಾನು ಹಿಂದೆ ಎಂದು ನುಡಿ ಹೇಳುವುದು, ದೀಪಾವಳಿ ಸಮಯದಲ್ಲಿ ಗೋಪೂಜೆ ಮಾಡುವ ಮುಸ್ಲಿಂ ಕುಟುಂಬಗಳು, ಹೆರಿಗೆ ಸಮಯದಲ್ಲಿ ಪರಸ್ಪರ ನೆರವಾಗುವ ಉಭಯ ಧರ್ಮಿಗಳು, ಜಾತಿಮತ ಲೆಕ್ಕಿಸದೆ ಎಲ್ಲರಿಗೂ ನೆರವಾಗುವ ಹಾಮದ್ ಬಾವಾ ಅವರಿಗೆ ಧರ್ಮರಾಯನೆಂದು ಪ್ರೀತಿಯಿಂದ ಹೆಸರಿಟ್ಟ ಊರವರು – ಹೀಗೇ ಪರಸ್ಪರ ಪ್ರೀತಿ ಸೌಹಾರ್ದದ ಬದುಕನ್ನು ಬದುಕುತ್ತಿರುವ ಆ ಊರಿನಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಶ್ರೀ ಶೇಖ್ ಅಲಿಯವರ ಮನೆಯಲ್ಲಿ ನಾವು ಸೇರಿ ನಡೆಸಿದ ಧ್ವನಿ ಮುದ್ರಣ, ಅವರ ಮನೆಯಲ್ಲೇ ನಮ್ಮ ರೆಕಾರ್ಡಿಂಗ್ ಟೀಂ ಉಂಡದ್ದು, ಶೇಖ್ ಅಲಿಯವರ ಎಪ್ಪತ್ತರ ಹರೆಯದ ಮಡದಿ ಶ್ರೀಮತಿ ಫಾತಿಮಾ ಅವರು ಕೂಡ ತವರು ಮನೆಯವರಿಗಿಂತ ಹೆಚ್ಚಾಗಿ ನೆರೆಯ ತುಳುವರು ತನಗೆ ನೆರವಾದ ಕುರಿತು ಹೇಳಿಕೊಂಡದ್ದು, ಅವರ ಮಗ ಆ ಊರಿನ ಪ್ರಥಮ ಮುಸ್ಲಿಂ ಪದವೀಧರ ಶ್ರೀ ಹುಸೇನ್ ಅವರು ತನ್ನ ಮತ್ತು ಶ್ರೀ ನಾರಾಯಣ ಭಟ್ಟರ ಮಗ ಪುರಂದರ ಭಟ್ಟರ ಸ್ನೇಹ ಬಾಲ್ಯದಿಂದ ಇಂದಿನ ವರೆಗೆ ಕುಂದಿಲ್ಲದೆ ಸಾಗುತ್ತಿರುವುದನ್ನು ವರ್ಣಿಸಿದ್ದು, ಎಂಬತ್ತರ ಹರೆಯದ ಶ್ರೀನಾಯರ್ಕೋಡಿ ನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಫ್ರಾನ್ಸಿಸ್ ಡಿ ಸೋಜ, ಶಿಕ್ಷಕರಾದ ದಯಾನಂದ, ವಾಸಂತಿ ಶಿಬರಾಯ, ಬರಹಗಾರರಾದ ಶ್ರೀ ಕೆ.ಪಿ.ಎ.ಖಾದರ್,ಕುತ್ತೆತ್ತೂರು, ಅಬ್ದುಲ್ ರೆಹಮಾನ್ ಕುತ್ತೆತ್ತೂರು, ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರು, ಮಸೀದಿಯ ಧರ್ಮಗುರುಗಳು ಕೂಡ ಆ ಧ್ವನಿಮುದ್ರಣದಲ್ಲಿ ಪಾಲುಗೊಂಡದ್ದು – ಎಲ್ಲವೂ ಅವಿಸ್ಮರಣೀಯ. ನಮ್ಮ ಸಣ್ಣ ಪುಟ್ಟ ಊರುಗಳಲ್ಲಿ ಈಗಲೂ ಎಲ್ಲ ಧರ್ಮದವರೂ ಸೌಹಾರ್ದಯುತ ಸಹಬಾಳ್ವೆ ನಡೆಸುತ್ತಿದ್ದಾರೆ, ಆದರೆ ಅದರ ಪರಿಚಯವಾಗುವುದು ಇಂಥ ಹೊರಾಂಗಣ ಧ್ವನಿಮುದ್ರಣದ ಸಮಯದಲ್ಲಿ ಮಾತ್ರ. ನಮ್ಮ ಜಿಲ್ಲೆಯಲ್ಲಿ ಕೋಮು ಗಲಭೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಲದಲ್ಲಿ ನಾನು ನಿರ್ಮಿಸಿದ ಈ ರೂಪಕ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇಂಥ ಎಷ್ಟೋ ಹೊರಾಂಗಣ ಧ್ವನಿ ಮುದ್ರಣಗಳಲ್ಲಿ ನಾನು ಪಾಲುಗೊಂಡಿದ್ದೇನೆ. ಹೋದೆಡೆಯಲ್ಲೆಲ್ಲಾ ನನಗೆ ಎದುರಾದದ್ದು ಕೃತ್ರಿಮತೆಯ ಸೋಂಕಿಲ್ಲದ ಅಪ್ಪಟ ಮಾನವ ಹೃದಯದ ನಿಷ್ಕಲ್ಮಶ ಪ್ರೇಮ. ಪ್ರತಿ ಸಂದರ್ಭವೂ ಹೊಸ ಹುರುಪಿನಿಂದ, ಹೊಸ ಚೈತನ್ಯದಿಂದ ದುಡಿಯಲು ಕಲಿಸಿದೆ. ಸರಳವಾಗಲು, ಹಗುರಾಗಲು, ಸಹಜವಾಗಲು ಹಾಗೂ ಪ್ರಾಮಾಣಿಕಳಾಗಲು ಇವು ನನ್ನನ್ನು ಪ್ರೇರೇಪಿಸಿವೆ. ಈ ಸಂದರ್ಭಗಳಲ್ಲಿ ತಾಂತ್ರಿಕ ವಿಭಾಗದ ಮಿತ್ರರು, ಚಾಲಕರು ಹಾಗೂ ಇತರ ಸಹೋದ್ಯೋಗಿಗಳು ನೀಡಿದ ಸಹಕಾರವನ್ನು ನಾನು ಮನಸಾ ನೆನೆಯುತ್ತೇನೆ.

ಮುಂದಿನ ವಾರಕ್ಕೆ  

Leave a Reply

Your email address will not be published. Required fields are marked *

*

code

Don\'t COPY....Please Share !