ಕಂಪ್ಯೂಟರ್ ಕ್ರಾಂತಿಯ ಸುಳಿಯಲ್ಲಿ

1981ರಲ್ಲಿ ನಾನು ಆಕಾಶವಾಣಿಗೆ ಸೇರುವ ಸಮಯದಲ್ಲಿ ಪ್ರಸಾರ ವ್ಯವಸ್ಥೆಯಲ್ಲಿ ಬಳಸಲಾಗುದ್ದುದು ಟೇಪುಗಳನ್ನು ಮತ್ತು ಧ್ವನಿಮುದ್ರಿಕೆ(ತಟ್ಟೆಗಳು)ಗಳನ್ನು. ಟೇಪುಗಳನ್ನು ಭೆಲ್ ಎಂಬ ಕಪ್ಪು ಪೈಂಟ್ ಬಳಿದ ಟೇಪ್ ಡೆಕ್ ನಲ್ಲೂ ಧ್ವನಿಮುದ್ರಿಕೆಗಳನ್ನು ಟರ್ನ್ ಟೇಬಲ್ ಎಂಬ ಯಂತ್ರದಲ್ಲೂ ಪ್ಲೇ ಮಾಡಲಾಗುತ್ತಿತ್ತು. ಭೆಲ್ ಟೇಪ್ ಡೆಕ್ ಯಂತ್ರದಲ್ಲೇ ಧ್ವನಿಮುದ್ರಣದ ಕೆಲಸವನ್ನೂ ಮಾಡಲಾಗುತ್ತಿತ್ತು. ಭೆಲ್ ಯಂತ್ರಕ್ಕೆ ಟೇಪನ್ನು ಸುತ್ತುವ ಸುತ್ತು ಬಳಸು ದಾರಿಯ ವಿಧಾನವನ್ನು ಕಲಿಯಲಿಕ್ಕೇನೇ ಕೆಲವು ದಿನ ಹಿಡಿದಿತ್ತು. ಒಮ್ಮೆ ಪಂಡಿತ್ ಮಲ್ಲಿಕಾರ್ಜುನ ಮನ್ಸೂರರ “ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ವಚನವನ್ನು ಲೋಡ್ ಮಾಡಲು ಟೇಪನ್ನು ಉಲ್ಟಾ ಇಟ್ಟು ಚಾಲೂ ಮಾಡಿ ಅದರ ಟೇಪಿನ ಸುರುಳಿಯೆಲ್ಲಾ ಕರುಳು ಕಿತ್ತು ಬಂದಂತೆ ಈಚೆ ಬಂದು ಅದನ್ನು ಮೊದಲ ಸ್ಥಿತಿಗೆ ತರಬೇಕಾದರೆ ಸಾಕೋ ಸಾಕಾಗಿತ್ತು. ಟೇಪನ್ನು ಸರಿಯಾಗಿ ಸುತ್ತಿದ ಮೇಲೆ ಅದನ್ನು ಫಾರ್ವರ್ಡ್, ರೀವೈಂಡ್, ಸ್ಟೋಪ್, ಪ್ಲೇ, ಪೋಸ್ ಇತ್ಯಾದಿ ಸ್ಥಿತಿಗಳಿಗೆ ತರಲು ಕೂಡಾ ಮೊದಮೊದಲು ತುಂಬಾ ಚಾಕಚಕ್ಯತೆಯ ಅಗತ್ಯ ಇತ್ತು. ಆ ದಿನಗಳಲ್ಲಿ ನಮ್ಮ ಹಳ್ಳಿ ಮನೆಗಳಲ್ಲಿ ವಿದ್ಯುತ್ ಎಂಬುದೇ ಅಪರೂಪದ ಸಂಗತಿಯಾಗಿದ್ದ ಕಾರಣ ಇಲೆಕ್ಟ್ರೋನಿಕ್ ಉಪಕರಣಗಳ ಬಳಕೆ ಗೊತ್ತಿಲ್ಲದಿರುವುದೂ ನನ್ನ ಪೇಚಾಟಕ್ಕೆ ಕಾರಣವಿರಬಹುದು.

 ಇನ್ನು ಧ್ವನಿತಟ್ಟೆಗಳನ್ನು ಟರ್ನ್ ಟೇಬಲ್ ನಲ್ಲಿಟ್ಟು ಹಾಡಿನ ಆರಂಭಕ್ಕೆ ಸರಿಯಾಗಿ ಪಿಕಪ್ ನ್ನು ಅದರ ತುದಿಯಲ್ಲಿ ಅಳವಡಿಸಲಾದ ಅತಿ ಸೂಕ್ಷ್ಮ ಮುಳ್ಳು ಘಾಸಿಗೊಳ್ಳದಂತೆ ಎಚ್ಚರದಿಂದ ಎತ್ತಿ ಇಡುವ ಪರಿಪಾಟಲು ದೇವರಿಗೇ ಪ್ರೀತಿ. 45,33,78 ಆರ್.ಪಿ.ಎಂ ಎಂಬ ವಿವಿಧ ವೇಗಗಳಲ್ಲಿ ನಿರ್ಮಿತವಾದ ಈ ತಟ್ಟೆಗಳನ್ನು ಆಯಾ ವೇಗಗಳಿಗೆ ಅನುಗುಣವಾಗಿ ಹೊಂದಿಸಿ ಇಡಬೇಕಾಗಿತ್ತು. ಕೆಲವೊಮ್ಮೆ 33 ವೇಗದ ತಟ್ಟೆಯನ್ನು 45 ರಲ್ಲಿ ತಪ್ಪಿ ಇಟ್ಟು ಪ್ಲೇ ಮಾಡಿದೆವೋ ಅದು ಗಾಯನದ ತಟ್ಟೆಯಾಗಿದ್ದರೆ ಗಿಣಿ ಉಲಿದಂತೆ ಸ್ವರ ಹೊರಟು ನಮ್ಮನ್ನು ತಬ್ಬಿಬ್ಬು ಮಾಡುತ್ತಿತ್ತು. ಆದರೆ ಅದು ವಾದ್ಯ ಸಂಗೀತದ ತಟ್ಟೆಯಾಗಿದ್ದರೆ ನಾವು ತಪ್ಪಾದ ವೇಗದಲ್ಲಿ ಪ್ಲೇ ಮಾಡುತ್ತಿದ್ದೇವೆ ಎಂಬ ಅರಿವು ಸಂಗೀತದ ಅಷ್ಟೊಂದು ಆಳವಾದ ತಿಳುವಳಿಕೆ ಇಲ್ಲದ ನಮಗೆ ಗೊತ್ತಾಗುತ್ತಲೇ ಇರಲಿಲ್ಲ. ಬೇರೆ ಯಾರಾದರೂ ಬಲ್ಲವರು ಬಂದು ಎಚ್ಚರಿಸದೇ ಹೋದಲ್ಲಿ ಅರ್ಧ ಗಂಟೆಗೆಂದು ನಿಗದಿಯಾಗಿದ್ದ ಕಾರ್ಯಕ್ರಮ ಹದಿನೈದು ನಿಮಿಷಕ್ಕೇ ಮುಗಿದಾಗ ನಮಗೆ ನಮ್ಮ ತಪ್ಪಿನ ಅರಿವಾಗುತ್ತಿತ್ತು. ಅಷ್ಟು ಮಾತ್ರವಲ್ಲ ಈ ಟರ್ನ್ ಟೇಬಲ್ ಎನ್ನುವುದು ಓನ್ ಮಾಡಿದ ಕೂಡಲೇ ತಿರುಗುವ ಸಹಜ ವೇಗವನ್ನು ಪಡೆದು ಕೊಳ್ಳಲು ಸ್ವಲ್ಪ ಹೊತ್ತು ತೆಗೆದುಕೊಳ್ಳುತ್ತಿದ್ದ ಕಾರಣ ಸಣ್ಣ ಅಪಸ್ವರ ಹೊರಡಿಸುವುದನ್ನು ತಪ್ಪಿಸಲು ನಾವು ಅದನ್ನು ಕೈಯಿಂದ ರಭಸವಾಗಿ ದೂಡಬೇಕಾಗಿತ್ತು. ದೂಡುವ ರಭಸಕ್ಕೆ ಕೆಲವೊಮ್ಮೆ ಅದರ ಬೆಲ್ಟ್ ಕಿತ್ತು ಬರುತ್ತಿತ್ತು. ಅದನ್ನು ಮತ್ತೆ ಸಹಜ ಸ್ಥಿತಿಗೆ ತರಬೇಕಾದರೆ ಬೆವರು ಕಿತ್ತು ಬರುತ್ತಿತ್ತು. ಇದು ನಮ್ಮ ಕಾಲದ ಕಥೆಯಾದರೆ ನಮ್ಮ ನಿಲಯ ನಿರ್ದೇಶಕರಾಗಿದ್ದ ಶ್ರೀ ವೆಂಕಟೇಶ ಗೋಡಖಿಂಡಿಯವರು ಉದ್ಘೋಷಕರಾಗಿದ್ದಾಗ ಈ ಪಿಕಪ್ ಭದ್ರವಾಗಿ ಕೂರಲು ಅದರ ಮೇಲೆ ನಾಲ್ಕಾಣೆ ಪಾವಲಿಯನ್ನು ಇಡುತ್ತಿದ್ದರಂತೆ. ಆದರೆ ಈ ವಿಚಾರ ಇಂಜಿನಿಯರಿಂಗ್ ವಿಭಾಗದವರಿಗೆ ತಿಳಿದರೆ ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆಂದು ಸ್ವತ: ಅವರು ಹೇಳಿದ ನೆನಪು. ಈ ಎಲ್ಲ ಗೊಂದಲಗಳ ನಡುವೆ ಒಂದರ ಹಿಂದೆ ಒಂದು ಪ್ಲೇ ಮಾಡಬೇಕಿದ್ದ ಟೇಪುಗಳನ್ನು ಸಾಲಾಗಿ ಭೆಲ್ ಟೇಪ್ ಡೆಕ್ ಗಳಲ್ಲಿ ಮೊದಲೇ ಲೋಡ್ ಮಾಡಿಟ್ಟರೆ ಅದನ್ನು ನಿಜವಾಗಿ ಪ್ಲೇ ಮಾಡುವ ಸಮಯದಲ್ಲಿ ಯಾವುದು ಮೊದಲು ಯಾವುದು ಬಳಿಕ ಎನ್ನುವ ಗೊಂದಲದಲ್ಲಿ ಎರಡನೆಯ ಭಾಗವನ್ನು ಮೊದಲೇ ಪ್ಲೇ ಮಾಡುವ ಅಪಾಯವೂ ಇತ್ತು. ಇವೆಲ್ಲಾ ಗೊಂದಲಗಳಿಗೆ ಪೂರ್ಣ ವಿರಾಮ ಹಾಡಿದ್ದು 2004ರಲ್ಲಿ ಸಂಪೂರ್ಣ ಕಂಪ್ಯೂಟರೀಕೃತ ಪ್ರಸಾರವ್ಯವಸ್ಥೆ ಬಂದ ಮೇಲೆಯೇ. ಈ ನಡುವೆ ಭೆಲ್ ಯಂತ್ರಗಳ ಸ್ಥಾನದಲ್ಲಿ ಮೆಲ್ಟ್ರೋನ್ ಯಂತ್ರಗಳು ಬಂದು ಧ್ವನಿಮುದ್ರಿತ ಕಾರ್ಯಕ್ರಮಗಳ ನಿಖರವಾದ ಅವಧಿಗಾಗಿ ನಾವು ಪಡುತ್ತಿದ್ದ ಬವಣೆಯನ್ನು ಸ್ವಲ್ಪ ತಗ್ಗಿಸಿದ್ದುವು. ಭೆಲ್ ಯಂತ್ರದಲ್ಲಾದರೆ ಅಕ್ಷರಶ: ಪೂರ್ತಿ ಕಾರ್ಯಕ್ರಮವನ್ನು ಮೊದಲಿಂದ ಕೊನೆಯವರೆಗೂ ಪ್ಲೇ ಮಾಡಿಯೇ ಅದರ ಅವಧಿಯನ್ನು ಗುರುತಿಸಿಕೊಳ್ಳಬೇಕಾಗಿತ್ತು.

 ಕ್ರಮೇಣ 1993 – 95 ರ ಸುಮಾರಿಗೆ ಇರಬೇಕು. ಈ ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಕಂಪ್ಯೂಟರ್ ಗಳು ಮೋರೆ ತೋರಿಸಲು ಆರಂಭವಾದುವು. ಆಡಳಿತ ವಿಭಾಗದಲ್ಲಿ, ಕಂಟ್ರೋಲ್ ರೂಂನಲ್ಲಿ, ಅಲ್ಲಿ, ಇಲ್ಲಿ ಅವು ಮುಗುಮ್ಮಾಗಿ ಬಂದು ಕೂತವು. ಅವುಗಳ ಅಂದ ಚಂದವನ್ನು ನಾವೂ ಕೂಡಾ ದೂರದಿಂದ ನೋಡಿ ಬೆರಗಾಗುತ್ತಿದ್ದುದು ಬಿಟ್ಟರೆ ನಮಗ್ಯಾರೂ ಅದನ್ನು ಕಲಿಸುವ ಗೋಜಿಗೆ ಹೋಗಲಿಲ್ಲ. ಅಲ್ಲದೇ ಮೇಲೆ ಬಿದ್ದು ಅದನ್ನು ಕಲಿಯಬೇಕೆನ್ನುವ ಹುಮ್ಮಸ್ಸೂ ನಮ್ಮಲ್ಲಿ ಮೂಡಿರಲಿಲ್ಲ. ಗೋವಾದ ಪಣಜಿ ಕೇಂದ್ರದಿಂದ ಮಂಗಳೂರಿಗೆ ವರ್ಗವಾಗಿ ಬಂದ ಶ್ರೀ ಅನಿಲ್ ಕೌಶಿಕ್ ಅದರಲ್ಲೇ ಕ್ಯೂ ಶೀಟ್ ಟೈಪಿಸಲು ಆರಂಭಿಸಿದರು. ಸ್ಪಷ್ಟ,ಸುಂದರ ಮುದ್ರಣದ ಕಂಪ್ಯೂಟರೀಕೃತ ಕ್ಯೂ ಶೀಟ್ ಗಳು ನೋಡಲು ಹಿತವಾಗಿದ್ದುವು. ಕಂಪ್ಯೂಟರನ್ನು ಸ್ವ-ಸಾಮರ್ಥ್ಯದಿಂದ ಕಲಿತ ಒಂದಷ್ಟು ಜನರು ಅದರಲ್ಲೇ ಧ್ವನಿ ಮುದ್ರಿಸುವುದು, ಎಡಿಟಿಂಗ್ ಮಾಡುವುದು ಮಾಡತೊಡಗಿದರು. ಆಯ್ದ ಕೆಲವರನ್ನು ಕಂಪ್ಯೂಟರ್ ತರಬೇತಿಗಾಗಿ ಕಳುಹಿಸಲಾಯಿತು. ಇವೆಲ್ಲವನ್ನೂ ನಾವು ಉದ್ಘೋಷಕರು ನೋಡುತ್ತಿದ್ದುದೇ ಬಂತಲ್ಲದೇ ನಾವೂ ಅದನ್ನು ಬಳಸುವ ಕಾಲ ಬರಲಿದೆಯೆಂದಾಗಲೀ, ಕಲಿಯುವ ತುರ್ತು ಬರಲಿದೆಯೆಂದಾಗಲೀ ಸುಳಿವು ಕೂಡಾ ದೊರಕಿರಲಿಲ್ಲ. ಕಂಪ್ಯೂಟರ್ ನಲ್ಲಿ ಧ್ವನಿ ಮುದ್ರಿತ ಸಿ.ಡಿ ಗಳು ಈಗ ಟೇಪಿನ ಸ್ಥಾನವನ್ನು ಆಕ್ರಮಿಸುತ್ತಾ ಬಂದುವು. ಸಿ.ಡಿ.ಪ್ಲೇಯರ್ ನಲ್ಲಿ ಅವು ಉಲಿಯತೊಡಗಿದಂತೆ ಟೇಪ್ ಡೆಕ್ ಗಳೂ ಟರ್ನ್ ಟೇಬಲ್ ಗಳೂ ಮೌನಕ್ಕೆ ಸಂದವು. ಆದರೂ ಹಳೆಯ ಮಾಧುರ್ಯಪೂರ್ಣ ಹಾಡುಗಳಿಗಾಗಿ ನಾವು ಆಗಲೂ ಟರ್ನ್ ಟೇಬಲನ್ನು ತಿರುಗಿಸಿ ಧ್ವನಿ ತಟ್ಟೆಗಳನ್ನು ಬಳಸುತ್ತಿದ್ದೆವು. ಆದರೆ ಕ್ರಮೇಣ ಪಿಕಪ್ ನ ತುದಿಯಲ್ಲಿರುವ ಸ್ಟೈಲಸ್ ಎಂಬ ಮುಳ್ಳು ಉಪಲಬ್ಧವಿಲ್ಲವೆಂಬ ಕಾರಣಕ್ಕೆ ಆಕಾಶವಾಣಿಯ ಧ್ವನಿಮುದ್ರಣ ಭಂಡಾರದಲ್ಲಿರುವ ನೂರಾರು ಹಳೆಯ ಗ್ರಾಮಾಫೋನ್ ರೆಕೋರ್ಡ್ ಗಳು ತಿರುಗುವುದನ್ನು ಮರೆತವರಂತೆ ಸ್ತಬ್ಧವಾಗಿ, ಮೂಕವಾಗಿ ಕುಳಿತಿರಬೇಕಾಯಿತು. ಎಷ್ಟೊಂದು ಹಳೆಯ ಭಾವಪೂರ್ಣ, ಉತ್ತಮ ಸಂಗೀತ, ಸಾಹಿತ್ಯವುಳ್ಳ, ಉನ್ನತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ಹಾಡುಗಳು ಹಾಡದೇ ಗಪ್ ಚುಪ್ ಆಗಿ ಕುಳಿತು ಹತ್ತು ಹನ್ನೆರಡು ವರ್ಷಗಳೇ ಕಳೆದುವೇನೋ. ಆದರೆ ಹಳೆಯ ಟೇಪು ಮತ್ತು ತಟ್ಟೆಗಳ ಹೂರಣವನ್ನು ಕಂಪ್ಯೂಟರಿನ ಹಾರ್ಡ್ ಡಿಸ್ಕಿಗೆ ವರ್ಗಾಯಿಸುವ ಕೆಲಸವೂ ನಡೆಯತೊಡಗಿತು.

ಇಪ್ಪತ್ತನೆಯ ಶತಮಾನದ ಆರಂಭದ ವೇಳೆಗೆ ಎಲೆಕ್ಟ್ರೋನಿಕ್ಸ್ ಟೆಲಿಫೋನ್ ಸೇವೆಯನ್ನು ಪರಿಣಾಮಕಾರಿಯಾಗಿಸಿ ದ್ವಿಮುಖ ತ್ರಿಮುಖ ಸಂವಹನವನ್ನು ಸಾಧ್ಯಗೊಳಿಸಿ ತಾಂತ್ರಿಕ ಗುಣಮಟ್ಟ ಏರುವತ್ತ ಹೊಸ ಪ್ರಯತ್ನಗಳಾದುವು. ಎಫ್.ಎಂ.ಪ್ರಸಾರಕ್ಕಾಗಿ ಬೃಹತ್ ಗೋಪುರದ ನಿರ್ಮಾಣವಾಯಿತು. ಸುಮಾರು 48 ಲಕ್ಷ ಜನ ಸಮುದಾಯಕ್ಕೆ ಸಲ್ಲುವ ಪ್ರಸಾರ ವ್ಯಾಪ್ತಿಯ ಮಂಗಳೂರು ಆಕಾಶವಾಣಿ ಕೇಂದ್ರ 10 ಕೆ.ವಿ. ಎಫ್.ಎಂ. ಸಾಮರ್ಥ್ಯದ ಟ್ರಾನ್ಸ್ಮಿಟರ್ ಹಾಗೂ 20 ಕೆ.ವಿ.ಸಾಮರ್ಥ್ಯದ ಮೀಡಿಯಂ ವೇವ್ ಟ್ರಾನ್ಸ್ ಮಿಟರ್ ಹೊಂದಿ ಎಫ್.ಎಂ.ಕಂಪನಾಂಕ 100.3 ಮೆಗಾಹರ್ಟ್ಸ್ ಗಳಲ್ಲಿ ಹಾಗೂ 1089 ಕಿಲೋ ಹರ್ಟ್ಸ್ ತರಂಗಾಂತರಗಳಲ್ಲಿ ಕಾರ್ಯ ನಿರ್ವಹಿಸಲು ಸಜ್ಜಾಯಿತು. ಒಂದು ಶುಭ ಮುಂಜಾನೆ 2004ರ ಜೂನ್ 7ರಿಂದ 11ರ ವರೆಗೆ ಡಿಜಿಟಲ್ ಟ್ರಾನ್ಸ್ಮಿಷನ್ ತರಬೇತಿಯನ್ನು ಎಂಜಿನಿಯರಿಂಗ್ ಸಹಾಯಕರಾದ ಶ್ರೀ ಕೆ.ಎಂ.ಮಣಿ ಹಾಗೂ ಶ್ರೀ ಬಿ.ಶಾಜಿ ಅವರಿಂದ ಪಡೆಯುವಂತೆ ನಮಗೆಲ್ಲಾ ಸುತ್ತೋಲೆ ಬಂತು. ಈ ಇಬ್ಬರು ಮಿತ್ರರೂ ಮಲೆಯಾಳೀ ಮನೆಮಾತಿನವರಾದರೂ ಆದಷ್ಟು ಕನ್ನಡದಲ್ಲಿ ನಮಗೆಲ್ಲಾ ಅವರಿಬ್ಬರು ಕಂಪ್ಯೂಟರ್ ಪಾಠವನ್ನು ಹೇಳಿದರು. ಇವತ್ತು ಕಲಿತದ್ದು ನಾಳೆಗೇನೇ ಮರೆತು ಹೋಗುತ್ತಿದ್ದ ಕಾರಣ ಪ್ರತಿ ಹಂತಗಳನ್ನು ಬರೆದಿಟ್ಟುಕೊಂಡು ಕಲಿಯಲು ಆರಂಭಿಸಿದೆವು, ನಮ್ಮ ಸಾವಿರಾರು ಪೆದ್ದು ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಿದ್ದ ಅವರನ್ನು ಮರೆಯುವಂತೆಯೆ ಇಲ್ಲ. ಧ್ವನಿ ಮುದ್ರಿಸುವ ವಿಭಾಗದವರಿಗೆ ಒಂದು ವಿಧದ ತರಬೇತಿಯಾದರೆ ಪ್ರಸಾರದ ಕೆಲಸ ನಿರ್ವಹಣೆ ಮಾಡುವವರಿಗೆ ಇನ್ನೊಂದು ವಿಧದ ತರಬೇತಿ. ಕತ್ತನ್ನು ಎತ್ತಿ ಕಂಪ್ಯೂಟರನ್ನು ನೋಡಿ ನೋಡಿ ಕತ್ತು ನೋವು ಒಂದೆಡೆ, ಅದರ ಅಕ್ಷರಗಳನ್ನು ಪಕ್ಕನೆ ಓದಲಾಗದ ದೃಷ್ಟಿದೋಷದ ತೊಂದರೆಗಳು, ವೃದ್ಧಾಪ್ಯದ ಕುರುಹುಗಳನ್ನು ತೋರುತ್ತಿರುವ ದೇಹ ಇವೆಲ್ಲವುಗಳ ನಡುವೆ ಈ ಉದ್ಯೋಗವೂ ಸಾಕು, ಈ ಕಂಪ್ಯೂಟರೂ ಸಾಕು ಎನ್ನುವ ಮಟ್ಟಿಗೆ ಜಿಗುಪ್ಸೆ ಕಾಡತೊಡಗಿತು. ಈ ಕಂಪ್ಯೂಟರ್ ಗುಮ್ಮನ ಹೆದರಿಕೆಯಿಂದ ಪೂರ್ತಿ ಬಿಡುಗಡೆ ಪಡೆಯಲು ನಾನು ಆಕಾಶವಾಣಿಯ ಹೊರಗಡೆ ಬೇರೊಂದು ಕಡೆ ಹಣ ತೆತ್ತು ತರಬೇತಿಗೆ ಸೇರಿಕೊಂಡೆ. ಅಲ್ಲಿ ಮೊದಮೊದಲು ಕೆಲವು ಅಕ್ಷರಗಳನ್ನೇ ಕುಟ್ಟಲು ಕಲಿಸಿದರು. ಪೈಂಟಿಂಗ್, ಪೇಜ್ ಸೆಟ್ಟಿಂಗ್, ಅದು, ಇದು ಅಂತ ನನ್ನ ಕೆಲಸಕ್ಕೆ ಅಗತ್ಯವಿಲ್ಲದ ಏನೇನೋ ಹೆಚ್ಚಿನದನ್ನು ಕಲಿಸುವ ಅವರ ಸಿಲೆಬಸ್ ನಲ್ಲಿ ನನಗೆ ಬೇಕಾದುದೇನು ಎಂದವರಿಗೆ ಮನದಟ್ಟು ಮಾಡಲೇ ನನಗೆ ಕೆಲವು ಸಮಯ ಹಿಡಿಯಿತು. ಬೆಳಗ್ಗಿನ ಪಾಳಿ ಮುಗಿಸಿ ಈ ತರಬೇತಿಗೆ ಹೋಗುತ್ತಿದ್ದ ಕಾರಣ ಅಸಾಧ್ಯ ತೂಕಡಿಕೆಯ ನಡುವೆ ಅನಗತ್ಯ ಕಲಿಕೆಯೂ ಸೇರಿ ನನ್ನ ಗೊಂದಲ ಇನ್ನಷ್ಟು ಹೆಚ್ಚಿತು. ಆದರೂ ಬರಹ, ನುಡಿ ಮುಂತಾದವನ್ನು ಅಲ್ಲಿ ಕಲಿತ ಕಾರಣ ನನ್ನ ಬರವಣಿಗೆಗೆ ಅನುಕೂಲವಾಯಿತು. ಈ ನಡುವೆ ನನ್ನ ಮಗ ನನಗೊಂದು ಕಂಪ್ಯೂಟರನ್ನು ತಂದು ಕೊಟ್ಟಿದ್ದೇ ಅಲ್ಲದೆ ಇ-ಮೈಲ್, ಫೇಸ್ ಬುಕ್ ಇತ್ಯಾದಿಗಳನ್ನು ನಿರ್ವಹಿಸಲು ಕಲಿಸಿ ನನ್ನನ್ನು ಆಧುನಿಕವಾಗಿ ಸಜ್ಜುಗೊಳಿಸಿದ.

ಚಲ ಬಿಡದ ತ್ರಿವಿಕ್ರಮನಂತೆ ಮಣಿಯವರು ನಮ್ಮನ್ನು ಡಿಜಿಟಲ್ ಪ್ರಸಾರಕ್ಕೆ ಹದಗೊಳಿಸಿದರು. ಮೊದಮೊದಲು ವಿನ್ನಾಂಪ್ ಎಂಬ ಸಾಫ್ಟ್ ವೇರ್ ನಲ್ಲಿ, ಬಳಿಕ ವರ್ಚುವಲ್ ಎಂಬ ಇನ್ನೊಂದು ಸಾಫ್ಟ್ ವೇರ್ ನಲ್ಲಿ ನಮ್ಮ ಪ್ರಸಾರಪ್ರಯೋಗಗಳು ನಡೆದುವು. ಪ್ರಥಮ ಬಾರಿಗೆ ಯಾರ ನೆರವಿಲ್ಲದೆಯೇ ಕಂಪ್ಯೂಟರ್ ನಲ್ಲಿ ಪ್ಲೇ ಲಿಸ್ಟ್ ತಯಾರಿಸಿ ಪ್ರಸಾರ ನಿರ್ವಹಿಸಿದ ದಿನ ಜಗತ್ತನ್ನೇ ಗೆದ್ದ ಖುಷಿಯಲ್ಲಿದ್ದೆ. ಆದರೂ ಆಗಾಗ ಹೊಸ ಹೊಸ ಕಲಿಕೆಗಳು ಸೇರ್ಪಡೆಗೊಳ್ಳುತ್ತಲೇ ಹೋಗಿ 2014 ರ ಸೆಪ್ಟೆಂಬರ ತಿಂಗಳಿನಿಂದ ಸಂಪೂರ್ಣ ಡಿಜಿಟಲೀಕರಣಗೊಂಡ ಪ್ರಸಾರ ವ್ಯವಸ್ಥೆಯಲ್ಲಿ ಹಳೆಯ ತಲೆಮಾರಿನ ನಾನೂ ಕೆಲಸ ಮಾಡಿದ್ದೆ ಎಂಬ ತೃಪ್ತಿಯೂ ಇದೆ.

ಕಾರ್ಯಕ್ರಮ ನಿರ್ಮಾಣದ ಕೆಲಸವನ್ನು ಮನಸ್ಸಾದಾಗ ಕೊಟ್ಟು, ಬೇಡವೆನಿಸಿದಾಗ ಕಿತ್ತು ಮಾಡುತ್ತಿದ್ದ ಮೇಲಿನವರ ವೈಖರಿ ಡಿಜಿಟಲೀಕರಣದ ಬಳಿಕ ನನ್ನಂಥವರಿಗೆ ತೀರಾ ಕಷ್ಟಕರವಾಗಿತ್ತು. ಯಾಕೆಂದರೆ ಕೇವಲ ಪ್ರಸಾರಕ್ಕೆ ಬೇಕಾದ ಕಂಪ್ಯೂಟರ್ ತಂತ್ರಗಳ ಅರಿವು ಕಾರ್ಯಕ್ರಮ ನಿರ್ಮಾಣದ ಕೆಲಸಕ್ಕೆ ಸಾಕಾಗುತ್ತಿರಲಿಲ್ಲ. ಕೂಲ್ ಎಡಿಟ್ ನಲ್ಲಿ ಧ್ವನಿ ಮುದ್ರಿಸುವುದು, ಎಡಿಟ್ ಮಾಡುವುದು, ಮಲ್ಟಿ ಟ್ರಾಕ್ಸ್ ನಲ್ಲಿ ನಿರ್ಮಾಣ ಕಾರ್ಯ, ಬಳಿಕ ಅದನ್ನು ಸೂಕ್ತ ಫೈಲ್ ನಲ್ಲಿ ಸೇವ್ ಮಾಡಿ, ನಿಗದಿತ ಪ್ರಸಾರದ ದಿನಕ್ಕೆ ಸರಿಯಾಗಿ ಸೆಂಡ್ ಮಾಡುವುದು – ಇವೆಲ್ಲವೂ ಅಭ್ಯಾಸವಾಗುವ ವರೆಗೆ ಬಹಳಷ್ಟು ಪರಿಶ್ರಮವನ್ನು ಬೇಡುವ ಕೆಲಸಗಳು. ಇವೆಲ್ಲವನ್ನೂ ನನ್ನ ಉದ್ಘೋಷಕ ವೃತ್ತಿಯ ಪರಿಧಿಯ ಹೊರಗೆ ನಾನು ಮಾಡಬೇಕಾಗಿ ಬಂದಾಗಲೆಲ್ಲಾ ಶ್ರೀಮತಿ ಮಾಲತಿ.ಆರ್.ಭಟ್, ಅಶ್ವಿನ್ ಕುಮಾರ್ ಮುಂತಾದವರಿಗೆ ದುಂಬಾಲು ಬಿದ್ದು ಮಾಡುತ್ತಿದ್ದವಳು ಕೊನೆಕೊನೆಗೆ ನಾನೇ ಸ್ವತಂತ್ರವಾಗಿ ನಿರ್ವಹಿಸಲು ತೊಡಗಿದ್ದು ಕೂಡಾ ನನ್ನ ಮಟ್ಟಿಗೆ ಒಂದು ಸಾಧನೆಯೇ ಸರಿ. ಯಾಕೆಂದರೆ ಪ್ರತಿ ಬಾರಿ ಕಾರ್ಯಕ್ರಮ ನಿರ್ಮಾಣದ ಜವಾಬ್ದಾರಿಯನ್ನು ಹೊಸದಾಗಿ ಕೊಟ್ಟಾಗಲೂ ಹೊಸತೊಂದು ಕನ್ಸೋಲ್ ಹಾಗೂ ಸಾಫ್ಟ್ ವೇರ್ ಅಳವಡಿಕೆ ಆಗಿರುತ್ತಿದ್ದುದು ನನ್ನಂಥವಳಿಗೆ ರೂಢಿಯಾಗಲು ಕಠಿಣವೆನಿಸುತ್ತಿತ್ತು.

ನಮ್ಮ ಹಿರಿಯರು ಎಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ನಾವೂ ಕೂಡಾ ಅದೇ ಕಷ್ಟದ ಹಾದಿಯನ್ನು ಹಾದು ಬಂದವರು. ಈಗಿನ ಹೊಸ ತಳಿಯವರಿಗೆ ಹಿಂದಿನ ಯಾವ ಕಷ್ಟಗಳೂ ಇಲ್ಲ. ನಮ್ಮಷ್ಟೆತ್ತರದ ಟೇಪುಗಳ ಹೊರೆಯನ್ನು, ಧ್ವನಿತಟ್ಟೆಗಳನ್ನು ಹೊತ್ತುಕೊಂಡು, ಸ್ಟುಡಿಯೋದ ಯಮಭಾರದ ಬಾಗಿಲನ್ನು ಒಂದು ಕೈಯಿಂದ ತಳ್ಳಿ ಪ್ರಸಾರಕ್ಕೆ ಅಣಿಗೊಳಿಸಿಕೊಳ್ಳುತ್ತಿದ್ದ ಆ ದಿನಗಳೆಲ್ಲಿ? ಈಗ ಮೌಸನ್ನು ಅಂಗೈಯಲ್ಲಿ ಆಡಿಸುತ್ತಾ ಎಲ್ಲವನ್ನೂ ತೆರೆಯಬಲ್ಲ ಕಂಪ್ಯೂಟರ್ ಮಹಾತ್ಮೆಯೆಲ್ಲಿ? ಟ್ರಾನ್ಸ್ ಮಿಶನ್ ನಲ್ಲಾಗುವ ಕೊನೆಕ್ಷಣಗಳ ಬದಲಾವಣೆಗಳಿಗೆ ಒಂದಿನಿತೂ ಅಂಜದೆ ಅಳುಕದೆ ಹಾರ್ಡ್ ಡಿಸ್ಕಿನ ಗರ್ಭದಿಂದ ಏನನ್ನಾದರೂ ಹುಡುಕಿ ಹಾಕಬಲ್ಲ ಬ್ರಹ್ಮಾಂಡದಂಥ ವ್ಯವಸ್ಥೆ. ಆದರೂ ಕೆಲವೊಮ್ಮೆ ಸರ್ವರ್ ದೋಷದಿಂದ ಬೆಳಗ್ಗಿನ ಪ್ರಸಾರದಲ್ಲಿ ಅನುಭವಿಸಿದ ನರಕ ಯಾತನೆಯ ಬಳಿಕ ಹಳೆಯ ವ್ಯವಸ್ಥೆಯೇ ಕ್ಷೇಮಕರವಾಗಿತ್ತಲ್ಲಾ ಅಂತ ಅನ್ನಿಸಿದ್ದೂ ಇದೆ. ಮರುದಿನದ ಬೆಳಗ್ಗಿನ ಪಾಳಿಯವರಿಗಾಗಿ ಹಿಂದಿನ ದಿನದ ರಾತ್ರಿಯ ಪಾಳಿಯವರು ಕಮರ್ಷಿಯಲ್ ಸ್ಪೋಟ್ ಗಳನ್ನೂ ಸೇರಿಸಿ ಹೆಣೆದು ಮಾಡಿದ ಪ್ಲೇ ಲಿಸ್ಟನ್ನು ಸೇವ್ ಮಾಡಿಟ್ಟು ಹೋಗುವುದರಿಂದ ಈಗ ಮುಂಜಾನೆಯ ಪಾಳಿಗಳಲ್ಲಿ ಅನಿವಾರ್ಯ ಕಾರಣದಿಂದ ತಡವಾಗಿ ಕೊನೆ ಕ್ಷಣದಲ್ಲಿ ಸ್ಟುಡಿಯೋ ತಲುಪಿದರೂ ಗಡಿಬಿಡಿಯಿಲ್ಲದೆ ನಿಶ್ಚಿಂತೆಯಿಂದ ಪ್ರಸಾರವನ್ನು ಆರಂಭಿಸಬಲ್ಲ ಮಾನಸಿಕ ಧೈರ್ಯವನ್ನು ಕಂಪ್ಯೂಟರೀ ಕೃತ ಹೊಸ ಪ್ರಸಾರ ವ್ಯವಸ್ಥೆ ಕೊಟ್ಟಿದೆ. ಪ್ರಸಾರವ್ಯವಸ್ಥೆಯ ಹಳೆಯ ಕಠಿಣ ಹಾದಿಯನ್ನು ಹಾದುಬಂದ ಕಾರಣದಿಂದ ಹೊಸ ಪದ್ಧತಿಯು ತೆರೆದ ಸುಖವನ್ನು ನಿಜವಾದ ಅರ್ಥದಲ್ಲಿ ಪರಿಗ್ರಹಿಸಲು ಸಾಧ್ಯವಾಯಿತೆಂದು ತಿಳಿಯುತ್ತೇನೆ.

ಮುಂದಿನ ವಾರಕ್ಕೆ ►►

Leave a Reply

Your email address will not be published. Required fields are marked *

*

code

Don\'t COPY....Please Share !