ಬೆಳ್ಳಿಹಬ್ಬದ ನೆನಪಿನ ಬೆಳ್ಳಕ್ಕಿ ಸಾಲು

ಕಾಲ ನಿಲ್ಲುವುದಿಲ್ಲ. ದಶಮಾನೋತ್ಸವ ಮುಗಿದ ಮೇಲೆ ಸಾಕಷ್ಟು ನೀರು ನೇತ್ರಾವತಿಯಲ್ಲಿ ಹರಿದು ಹೋಗಿದೆ. ಸಾಕಷ್ಟು ಸಂಖ್ಯೆಯ ಅಧಿಕಾರಿಗಳು, ಕಲಾವಿದರು, ತಾಂತ್ರಿಕ ವಿಭಾಗದವರು, ಆಡಳಿತ ವಿಭಾಗದವರು ಮಂಗಳೂರು ಆಕಾಶವಾಣಿಯ ಒಳಗಡೆ ಬಂದಿದ್ದಾರೆ, ಹೊರಗೆ ಹೋಗಿದ್ದಾರೆ. ಒಂದೆಡೆ ಅಪ್ಪಳಿಸುತ್ತಿರುವ ದೃಶ್ಯಮಾಧ್ಯಮದ ಪ್ರಭಾವದಿಂದಾಗಿ ತನ್ನ ಅಸ್ತಿತ್ವವನ್ನೇ ಪ್ರಶ್ನಿಸುವಂಥ ಪರಿಸ್ಥಿತಿಯಾದರೆ, ಇನ್ನೊಂದೆಡೆ ಸ್ಪರ್ಧೆಯ ಗಾಳಿಯೇ ಸೋಕದೆ, ಏಕಸ್ವಾಮ್ಯದಲ್ಲಿ ಕಾರ್ಯ ನಿರ್ವಹಿಸಿದ ಇತಿಹಾಸ ಹೊಂದಿರುವ ಆಕಾಶವಾಣಿ ತನ್ನ ಉಳಿವಿಗಾಗಿ ಸಾಕಷ್ಟು ಬದಲಾವಣೆಗಳನ್ನುಮಾಡಿಕೊಳ್ಳಬೇಕಾದ ಸಂಕ್ರಮಣದ ಸಂಧಿಕಾಲದಲ್ಲಿ ಖಾಸಗಿ ರೇಡಿಯೋ ಚಾನೆಲ್ ಗಳ ಆಗಮನ ಆಕಾಶವಾಣಿಗೆ ಮತ್ತೊಂದು ಪ್ರಬಲ ಸವಾಲಾಗಿ ಪರಿಣಮಿಸುತ್ತಿತ್ತು. ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಳ್ಳುತ್ತಿದ್ದ ಆಕಾಶವಾಣಿಗೆ ಸ್ಪರ್ಧೆ, ವಾಣಿಜ್ಯೀಕರಣ ಅನಿವಾರ್ಯವಾಗಿತ್ತು. ಆದರೆ ತನ್ನ ಸಾರ್ವಜನಿಕ ಸೇವಾಪ್ರಸಾರದ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ವಾಣಿಜ್ಯೀಕರಣವನ್ನು ಅಳವಡಿಕೊಳ್ಳುವ ಗುರುತರ ಜವಾಬ್ದಾರಿಯನ್ನುಹೊರಬೇಕಾದ ಸಂದರ್ಭದಲ್ಲಿ ಆಕಾಶವಾಣಿ ಇದ್ದಾಗ, ತನ್ನ ಪಾತ್ರವನ್ನು ಪುನರ್ವ್ಯಾಖ್ಯಾನಿಸಿ, ಸೃಜನಶೀಲ, ಉಪಯುಕ್ತ ಕಾರ್ಯಕ್ರಮಗಳಿಂದ, ಕೇಳುಗರನ್ನು ಮರಳಿಗಳಿಸುವ ಪ್ರಯತ್ನಗಳನ್ನು ಮಾಡಿದವರಲ್ಲಿ ನೆನಪಿಸಿಕೊಳ್ಳಬೇಕಾದ ಹೆಸರು ಶ್ರೀ ಸಿ. ಯು. ಬೆಳ್ಳಕ್ಕಿ ಅವರದು. 1998ರ ಸುಮಾರಿಗೆ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಆಕಾಶವಾಣಿ ಮಡಿಕೇರಿ ಕೇಂದ್ರದಿಂದ ಮಂಗಳೂರಿಗೆ ವರ್ಗವಾಗಿ ಬಂದ ಇವರು ಕೆಲವೇ ಸಮಯದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ ಭಡ್ತಿ ಪಡೆದರು. ಕೇಳುಗರ ಅಗತ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ ಕಾರ್ಯಕ್ರಮಗಳ ವಿನ್ಯಾಸದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡುತ್ತಾ, ದ್ವಿಮುಖ ಸಂವಹನೆಯ, ವಿನೂತನ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದರು. ಅವರ ಈ ಪ್ರಯತ್ನಕ್ಕೆ ಶ್ರೀ ಶ್ರೀನಿವಾಸ ಪ್ರಸಾದರಂಥ ಕಾರ್ಯಕ್ರಮ ನಿರ್ವಾಹಕರೂ ಒತ್ತಾಸೆಯಾಗಿ ನಿಂತರು.

 ನಮ್ಮ ನಿಲಯದ ಸಿಬ್ಬಂದಿಗಳಲ್ಲಿರುವ ಅಪಾರ ಪ್ರತಿಭೆ, ಶ್ರೋತೃಗಳ ಜಾಣತನ, ಕ್ರಿಯಾಶೀಲತೆ – ಇವುಗಳನ್ನು ಕಂಡು ಪ್ರೇರಿತರಾದ ಶ್ರೀ ಸಿ. ಯು. ಬೆಳ್ಳಕ್ಕಿಯವರು ಆಕಾಶವಾಣಿ ಮಂಗಳೂರು ಕೇಂದ್ರದ ಪುನಶ್ಚೇತನದ ಸವಾಲನ್ನು ಸ್ವೀಕರಿಸಿ ಸಾಂಘಿಕ ಯತ್ನದ ಫಲವಾಗಿ ಉತ್ತಮ ಫಲಪ್ರದ ಯೋಜನೆಗಳನ್ನು ನೀಡಿದರು.

 ಟಿ.ವಿ.ಚಾನೆಲ್ ಗಳು ಮನರಂಜನೆಗೆ ಹೆಚ್ಚು ಆದ್ಯತೆ ನೀಡಿದರೆ, ಮಾಹಿತಿ – ಶಿಕ್ಷಣ ನೀಡುವಂಥ ಉಪಯುಕ್ತ ಕಾರ್ಯಕ್ರಮಗಳಿಗೆ ನಮ್ಮಲ್ಲಿ ಆದ್ಯತೆ ನೀಡಲಾಯಿತು. ಸಂಚಯ, ಮಾರ್ಗದರ್ಶಿ, ದಾರಿದೀಪ, ತಲ್ಲಣ, ಆಶಾಜ್ಯೋತಿ, ಸ್ವಲ್ಪ ಕೇಳಿ, ಕೃಷಿ ಮಾರುಕಟ್ಟೆ, ಒಂದು ಪ್ರಶ್ನೆ -ಮುಂತಾದ ಹಲವು ಹೊಸ ಕಾರ್ಯಕ್ರಮ ಸರಣಿಗಳು, ಪ್ರಸ್ತುತಿಯಲ್ಲಿ ಹೊಸತನದೊಡನೆ ಪ್ರಸಾರವಾದುವು.

 ಪ್ರಸಾರವನ್ನು ಪರಿಣಾಮಕಾರಿ ಹಾಗೂ ಅರ್ಥಪೂರ್ಣ ಮಾಡುವಲ್ಲಿ ದ್ವಿಮುಖ ಸಂವಹನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಲ್ಲಿ ಪ್ರಸಾರಕ, ಸಂಪನ್ಮೂಲ ವ್ಯಕ್ತಿ ಇಲ್ಲವೆ ವಿವಿಧ ಇಲಾಖೆಗಳ ಆಡಳಿತಾಧಿಕಾರಿಗಳು ಹಾಗೂ ಕೇಳುಗರ ನಡುವೆ ನೇರ ಸಂವಾದಕ್ಕೆ ಅವಕಾಶ. ವಿವಿಧ ವಿಷಯಗಳನ್ನು ಆಧರಿಸಿದ ಹಲವಾರು ಫೋನ್ – ಇನ್ ಹಾಗೂ ಕೇಳುಗರ ಬರಹ – ಪತ್ರಗಳನ್ನು ಆಧರಿಸಿದ ಇನ್ನೂ ಕೆಲವು ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕೆ ಮೀಸಲಾದ ಹಲೋ -ಹಲೋ, ಮಕ್ಕಳ ಮಾಸಿಕ ಕಾರ್ಯಕ್ರಮ – ಹಲೋ ಪುಟ್ಟಾ ಪುಟ್ಟಿ, ಉದ್ಯೋಗಾವಕಾಶಗಳ ಬಗ್ಗೆ ದಾರಿದೀಪ, ಹದಿಹರೆಯದ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವ -ತಲ್ಲಣ, ಏಡ್ಸ್ ಎಚ್ಚರ, ಒಗಟುಗಳನ್ನಾಧರಿಸಿದ ಅದೇನೆಂದು ಹೇಳು, ಟೆಲಿಫೋನ್ ರಸ ಪ್ರಶ್ನೆ-ಬುದ್ಧಿಮತ್ತೆ, ಚುನಾಯಿತ ಪ್ರತಿನಿಧಿಗಳೊಂದಿಗೆ ಕೇಳುಗರ ಮುಖಾಮುಖಿಗೆ ಮೀಸಲಾದ ಪ್ರಜಾಪ್ರತಿನಿಧಿ, ವೈದ್ಯರೊಂದಿಗೆ ಭೇಟಿ, ಬೇರೆ ಬೇರೆ ವೃತ್ತಿಯಲ್ಲಿ ತೊಡಗಿರುವ ಗುಂಪುಗಳನ್ನು ಪರಿಚಯಿಸುವ ಬಾನ ಬಯಲು – ಹೀಗೆ ಹಲವಾರು ಫೋನ್-ಇನ್ ಕಾರ್ಯಕ್ರಮಗಳು ಆರಂಭವಾದುವು.

 ಕೇಳುಗರ ವೇದಿಕೆ, ನಗೆಮಲ್ಲಿಗೆ, ಯುವಸ್ಪಂದನ, ಕಾನೂನು ವೇದಿಕೆ, ಯುವಗಾನ ಮೇಳ, ಹನಿ ಹನಿ ಕವಿತೆ, ಕಥಾ ಸಾಗರ – ಇವು ಕೇಳುಗರ ಪತ್ರಗಳನ್ನು ಆಧರಿಸಿದ ಕಾರ್ಯಕ್ರಮಗಳು. ಹೆಚ್ಚು ಹೆಚ್ಚು ಜನರು ಕಾರ್ಯಕ್ರಮಗಳಲ್ಲಿ ನೇರವಾಗಿ ಹಾಗೂ ಸಕ್ರಿಯವಾಗಿ ಭಾಗವಹಿಸುವ ಅವಕಾಶಗಳು ಹೆಚ್ಚಾದವು. ಕಂತುಗಳಲ್ಲಿ ಪ್ರಸಾರವಾಗುವ ಹಲವಾರು ಬಾನುಲಿ ಸರಣಿಗಳು ಆರಂಭವಾದುವು. ನಿಗದಿತ ದಿನ ಹಾಗೂ ನಿಗದಿತ ಸಮಯಗಳಲ್ಲಿ ಹದಿಮೂರು ಅಥವಾ ಅದಕ್ಕೂ ಹೆಚ್ಚುಕಂತುಗಳಲ್ಲಿ ಈ ಸರಣಿಗಳು ಪ್ರಸಾರವಾದುವು. ಹೆಚ್ಚು ಕೇಳುಗರನ್ನು ಆಕರ್ಷಿಸುವ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ, ಪ್ರತಿ ಕಂತಿನ ಕೊನೆಗೆ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದವರಿಗೆ ಬಹುಮಾನಗಳನ್ನು ನೀಡುವ ಯೋಜನೆಯನ್ನು ಸಹ ಅನೇಕ ಬಾರಿ ಅಳವಡಿಸಿಕೊಳ್ಳಲಾಯಿತು. ಚಂದದ ನಗೆಗೆ ಅಂದದ ಹಲ್ಲು, ನೇತ್ರದರ್ಶನ, ವಿಕಿರಣ ದರ್ಶನ, ನಿಮಗೆ ತಿಳಿದಿರಲಿ, ಸಂಜೀವಿನಿ ಇವು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸರಣಿಗಳಾದರೆ, ಕಲ್ಪವೃಕ್ಷ ಕಂಗು, ಆಶಾಜ್ಯೋತಿ, ಸಚೇತನ, ಕೃಷಿ ಮಾರುಕಟ್ಟೆ, ನಿನಗೆ ನೀನೇ ಒಡೆಯ – ಇವು ಜೀವನಾವಶ್ಯಕ ವಿಷಯಗಳನ್ನು ಆಧರಿಸಿದ ಹಲವು ಸರಣಿಗಳು. ಕಡಲತಡಿಯ ಕಬ್ಬಿಗರು, ಭಾವದೀಪ್ತಿ, ಮರೆಯಬಾರದ ಕೃತಿಗಳು – ಇವು ಜನ ಸಾಮಾನ್ಯರಿಗೆ ಕನ್ನಡ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶದಿಂದ ಪ್ರಸಾರ ಮಾಡಿದ ಬಾನುಲಿ ಸರಣಿಗಳು. “ಕಥೆ ಇನ್ನೂ ಇದೆ”-ಕೌಟುಂಬಿಕ ಧಾರಾವಾಹಿಯಾದರೆ “ಪರಬಗ್ ದಂಟೆದ ಬಲ”, ’ತುಳು ಮಹಾಭಾರತೊ’ – ತುಳುವಿನಲ್ಲಿ ಪ್ರಸಾರವಾದ ಧಾರಾವಾಹಿಗಳು. ಕೊಂಕಣಿಯಲ್ಲಿ ’ಕೊಂಕ್ಣಿ ಲೋಕ್’, “ಕಲಾ ಆನಿ ಕಲಾಕಾರ್’”, “ಸಾಹಿತಿ ಸಾಂಗಾತಾ ಸಂವಾದ್” ಮುಂತಾದ ಸರಣಿಗಳು ಪ್ರಸಾರವಾದುವು. “ರಂಗಸ್ಥಳ” – ಹಿರಿಯ ಯಕ್ಷಗಾನ ಕಲಾವಿದರನ್ನು ಪರಿಚಯಿಸುವ ಬಾನುಲಿ ಸರಣಿ. ಹೆಚ್ಚಿನ ಬಾನುಲಿ ಸರಣಿಗಳೂ ಪ್ರಾಯೋಜಿತ ಕಾಯಕ್ರಮಗಳಾಗಿ ಮೂಡಿ ಬಂದುವು.

 ಇವುಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳಿಗೆ ಶೀರ್ಷಿಕೆಗೀತೆಯನ್ನು ಬರೆಯುವ ಭಾಗ್ಯ ನನ್ನದಾಯಿತು. ಕಡಲತಡಿಯ ಕಬ್ಬಿಗರು, ಸಚೇತನ, ನೇತ್ರದರ್ಶನ, ವಿಕಿರಣ ದರ್ಶನ – ಮುಂತಾದವುಗಳೇ ಅಲ್ಲದೇ ಇನ್ನೂ ಹಲವಾರು. ಸಿ. ಯು. ಬೆಳ್ಳಕ್ಕಿ, ಶ್ರೀನಿವಾಸ ಪ್ರಸಾದ್, ಅಬ್ದುಲ್ ರಶೀದ್, ಡಾ.ಶರಭೇಂದ್ರ ಸ್ವಾಮಿ, ಸೂರ್ಯನಾರಾಯಣ ಭಟ್, ದೇವು ಹನೆಹಳ್ಳಿ, ಶಾರದಾ, ಕನ್ಸೆಪ್ಟಾ ಫೆರ್ನಾಂಡಿಸ್, ಫ್ಲೋರಿನ್ ರೋಚ್, ಮಾಲತಿ ಆರ್.ಭಟ್, ಶಂಕರ್.ಎಸ್.ಭಟ್, ನಾರಾಯಣಿ ದಾಮೋದರ್, ಕೆ.ಆರ್.ರೈ, ಮುದ್ದು ಮೂಡುಬೆಳ್ಳೆ, ಕೆ.ಶ್ಯಾಮ್ ಭಟ್, ವಿರೂಪಾಕ್ಷ ಬಡಿಗೇರ್, ನಾರಾಯಣ ಸ್ವಾಮಿ ಮುಂತಾದವರೊಡನೆ ನಾನೂ ಸೇರಿ ನಿರ್ಮಿಸಿದ, ಭಾಗವಹಿಸಿದ ನೂರಾರು ಕಾರ್ಯಕ್ರಮಗಳು ಇಂದಿಗೂ ಹಸಿರು.

ಈ ನಡುವೆ ಸಹೋದ್ಯೋಗಿಗಳ ಹೆರಿಗೆ ರಜೆಯ ಸಮಯದಲ್ಲಿ ಹೆಚ್ಚುವರಿಯಾಗಿ ಸೇರಿಕೊಂಡ ಕೊಂಕಣಿ ಕಾರ್ಯಕ್ರಮ, ಗಾಂಧೀ ಸ್ಮೃತಿ, ಪಾಶ್ಚಾತ್ಯ ಲಘು ಸಂಗೀತ, ಪತ್ರೋತ್ತರ ಅಲ್ಲದೆ ಕಾಲಕಾಲಕ್ಕೆ ಸೇರಿಕೊಳ್ಳುವ ಪ್ರಾಯೋಜಿತ ಕಾರ್ಯಕ್ರಮಗಳೆಂದು ವಾರಕ್ಕೆ ನಾನು ನಿರ್ಮಾಣ ಮಾಡಿಕೊಡಬೇಕಾದ ನೂರು ನಿಮಿಷಗಳನ್ನೂ ದಾಟಿದ ಕಾರ್ಯಕ್ರಮಗಳ ಹೊರೆ ಹಾಗೂ ನನ್ನ ನಿಗದಿತ ಪಾಳಿಯ ಡ್ಯೂಟಿಗಳೆಂದು ನಾನು ಜರ್ಜರಿತಳಾಗಿ ಹೋದ ಸಂದರ್ಭದಲ್ಲಿ ಸುಮಾರು ಒಂದು ವರ್ಷಗಳ ಕಾಲ ನನ್ನನ್ನು ಪಾಳಿಯ ಕರ್ತವ್ಯದಿಂದ ಮುಕ್ತಗೊಳಿಸಿ, ಕೇವಲ ಕಾರ್ಯಕ್ರಮ ನಿರ್ಮಾಣದ ಕೆಲಸವನ್ನಷ್ಟೇ ನೀಡಿದ ಶ್ರೀ ಸಿ. ಯು. ಬೆಳ್ಳಕ್ಕಿಯವರನ್ನು ನಾನು ಈ ಸಂದರ್ಭದಲ್ಲಿ ನೆನೆಯುತ್ತೇನೆ. ಈ ಅವಧಿಯಲ್ಲಿ ನನಗೆ ಮನೆಯಲ್ಲೂ ಯಾರೂ ಸಹಾಯಕಿಯರಿಲ್ಲದ ಸಮಯ. ಮೇಲಾಗಿ ಮಗ ಎಸ್.ಎಸ್.ಎಲ್.ಸಿ ಯಲ್ಲಿದ್ದ ನಿರ್ಣಾಯಕ ಕಾಲಾವಧಿಯಲ್ಲಿ ನಾನು ಪಾಳಿಮುಕ್ತಳಾದದ್ದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ. ಆದರೆ ಹಿರಿಯ ಉದ್ಘೋಷಕರ ವರ್ಗಾವಣೆಯ ನಿಮಿತ್ತ ಕರ್ತವ್ಯ ಕೊಠಡಿಯಲ್ಲಿ ಪಾಳಿಯನ್ನು ನಿರ್ವಹಿಸಬಲ್ಲವರ ಕೊರತೆಯುಂಟಾಗಿ ಒಂದು ವರ್ಷದ ಒಳಗೆ ನಾನು ಮತ್ತೆ ಪಾಳಿಯ ಚಾಳಿಗೇ ಅಂಟಿಕೊಳ್ಳಬೇಕಾಯಿತು.

 ಈ ಸಂಕ್ರಮಣ ಕಾಲ ಘಟ್ಟದಲ್ಲಿಯೇ ಬಂತು ಆಕಾಶವಾಣಿಗೆ ಬೆಳ್ಳಿಹಬ್ಬದ ಸಂಭ್ರಮ! 25 ರ ಹೊಸಿಲಿಗೆ ಕಾಲಿಟ್ಟ ಕ್ಷಣದಿಂದ ಹಲವಾರು ನೂತನ ಕಾರ್ಯಕ್ರಮಗಳು. “ಬೆಳ್ಳಿ ತೋರಣ”ದಂಥ ಆಹ್ವಾನಿತ ಶ್ರೋತೃಗಳ ಕಾರ್ಯಕ್ರಮ, ಹಲವಾರು ಫೋನ್ – ಇನ್ ಕಾರ್ಯಕ್ರಮಗಳು, ವಿಶೇಷವಾಗಿ ಈ ಸಂದರ್ಭದಲ್ಲಿ ಸಿ. ಯು. ಬೆಳ್ಳಕ್ಕಿಯವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಶ್ರೀನಿವಾಸ ಪ್ರಸಾದ್ ಅವರ ಸಂಪಾದಕತ್ವದಲ್ಲಿ ಹೊರತಂದ ‘ಮಂಗಳ ಧ್ವನಿ – 25’ ಎಂಬ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ನಾನು, ಶರಭೇಂದ್ರ ಸ್ವಾಮಿ ಮುಂತಾದವರು ಇದ್ದೆವು.

 ಈ ಸ್ಮರಣ ಸಂಚಿಕೆಯು ಶ್ರೋತೃ – ಬಾನುಲಿ ಬಂಧ, ನಂಟು, ಸಿಬ್ಬಂದಿಗಳ ಅನುಭವ – ಅನಿಸಿಕೆ, ನಿಲಯದಲ್ಲಿ ಕಳೆದ ರಸನಿಮಿಷಗಳು, ಪತ್ರ-ಚಿತ್ರ, ಪ್ರಸಾರ ಮಾಧ್ಯಮದ ಅಂದಿನ ಸ್ಥಿತಿ – ಗತಿ – ಭವಿಷ್ಯ, ದಕ್ಷಿಣ ಕನ್ನಡದ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಇವೆಲ್ಲವನ್ನೂ ಬಿಂಬಿಸುವ ಕನ್ನಡಿಯಾಗಿ, ಕಾಲು ಶತಮಾನದ ಪ್ರಸಾರದಲ್ಲಿ ಮೂಡಿಬಂದ ಎಲ್ಲಾ ಪ್ರಾತಿನಿಧಿಕ ಧ್ವನಿ – ವಿಷಯಗಳನ್ನು ಪ್ರತಿನಿಧಿಸುವ ಪ್ರಾಮಾಣಿಕ ಪ್ರಯತ್ನವಾಗಿ ಮೂಡಿಬಂತು. ಮಂಗಳೂರು ಆಕಾಶವಾಣಿಯನ್ನು ಕಟ್ಟಿ ಬೆಳೆಸುವಲ್ಲಿ ನೂರಾರು ಸೃಜನಶೀಲ ಮನಸ್ಸು, ಹೃದಯಗಳು ಕೆಲಸ ಮಾಡಿವೆ. ಮೊಳಕೆ ಒಡೆಯುವ ಹಂತದಲ್ಲಿ, ಚಿಗುರೊಡೆಯುವ ಹಂತದಲ್ಲಿ – ಹೀಗೆ ತನು, ಮನಗಳ ಸೇವೆಯನ್ನು ಧಾರೆಯೆರೆದು ಈ ಸಂಸ್ಥೆಯನ್ನು ಇಷ್ಟೆತ್ತರ ಬೆಳೆಸಿದ ಹಲವರ ಚಿಂತನೆ – ನೆನಪು – ಹರಕೆ – ಹಾರೈಕೆಗಳ ಗುಚ್ಛವಾಗಿ ಇದು ಮೂಡಿಬಂತು. ತಮ್ಮ ಸೇವಾ ಅವಧಿಯಲ್ಲಿ ತಾವು ಕಂಡುಂಡ ಅನುಭವಗಳನ್ನು, ನಿಲಯದ ಪ್ರಮುಖ ಹೆಜ್ಜೆಗುರುತುಗಳನ್ನು ನಮ್ಮ ಅನೇಕ ಹಿರಿಯ ನಿವೃತ್ತ ಅಧಿಕಾರಿಗಳು ಇದರಲ್ಲಿ ದಾಖಲಿಸಿದ್ದಾರೆ, ತಮ್ಮಸೇವೆಯ ಚೊಚ್ಚಲ ದಿನಗಳನ್ನು ಇಲ್ಲಿ ಕಳೆದು ಈಗ ಬೇರೆಡೆ ಸೇವೆ ಸಲ್ಲಿಸುತ್ತಿರುವವರ ಹೃದಯಾಂತರಾಳದ ಬೆಚ್ಚನೆಯ ನೆನಪುಗಳು ಇದರಲ್ಲಿವೆ, ಶ್ರೋತೃವಾಗಿ, ಕಲಾವಿದನಾಗಿ, ನಾಟಕಕಾರ, ಸಾಹಿತಿಯಾಗಿ ಈ ನಿಲಯವನ್ನು ಬೆಳೆಸಿದ, ನಿಲಯದಿಂದ ಬೆಳೆದವರ ಪ್ರಾಮಾಣಿಕ ಅನಿಸಿಕೆಗಳೂ ಇದರಲ್ಲಿವೆ. ಅಂತೂ ಒಂದುಸಂಗ್ರಹ ಯೋಗ್ಯ ಸಂಚಿಕೆಯಾಗಿ ಇದನ್ನು ರೂಪಿಸಿದ ಸಂಪಾದಕ ಶ್ರೀನಿವಾಸ ಪ್ರಸಾದ ಹಾಗೂ ಅವರ ಜೊತೆಗಾರರ ಪರಿಶ್ರಮ ಸ್ತುತ್ಯರ್ಹವಾದುದು.

 2001 ರ ಡಿಸೆಂಬರ ತಿಂಗಳಿನಲ್ಲಿ ರಜತಮಹೋತ್ಸವದ ಎರಡೂ ದಿನಗಳ ಕಾರ್ಯಕ್ರಮಗಳು ಆಕಾಶವಾಣಿಯ ಅಂಗಳದಲ್ಲಿಯೇ ನಡೆದುವು. ಮೊದಲ ದಿನದ ಉದ್ಘಾಟನಾ ಸಮಾರಂಭದ ಸಭಾ ನಿರ್ವಹಣೆ ನನ್ನದು, ಆ ಬಳಿಕ ನಡೆದ ಲಘು ಸಂಗೀತ ಕಾರ್ಯಕ್ರಮದ ನಿರ್ವಹಣೆಯನ್ನು ಜಿ.ಶಾಂತಕುಮಾರ್ ಅವರೊಡನೆ ಸೇರಿ ನಿರ್ವಹಿಸಿದ ನೆನಪು ಮರೆಯುವಂಥದಲ್ಲ. ಈ ಸಮಾರಂಭಕ್ಕಾಗಿಯೇ ನಾನು ಬರೆದ ’ನೋಡಲ್ಲಿ ಮೂಡಿಹುದು ಬೆಳ್ಳಿಯಾ ಬೆಳಕು, ಇಪ್ಪತ್ತು, ಮತ್ತೈದು ವರುಷದಾ ಹೊಳಹು” ಎಂಬ ಗೀತೆಯನ್ನು ಸುಮಾ ಶಾಸ್ತ್ರಿ, ಸಂಗೀತಾ ಬಾಲಚಂದ್ರ , ಕೆ.ರಾಘವೇಂದ್ರ ಆಚಾರ್ಯ ಹಾಗೂ ವೃಂದದವರು ಸೊಗಸಾಗಿ ಹಾಡಿದ್ದರು. ಎರಡನೆಯ ದಿನದ ಸಭಾಕಾರ್ಯಕ್ರಮಗಳ ನಿರ್ವಹಣೆ ಮುದ್ದು ಮೂಡುಬೆಳ್ಳೆಯವರದು. ಆ ಬಳಿಕ ನಡೆದ ಶ್ರೀ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸ ಫೋನ್ ವಾದನದ ಕಛೇರಿಯ ನಿರ್ವಹಣೆ ಕೆ.ಆರ್.ರೈ ಅವರದು. ಬೆಳ್ಳಿಹಬ್ಬದ ಸಮಗ್ರ ಉಸ್ತುವಾರಿಯ ಭಾರವನ್ನು ಹೊತ್ತ ಕಾರ್ಯಕ್ರಮ ವಿಭಾಗದವರೊಡನೆ, ಶ್ರೀ ಮಾಣಿಕ್ಯಂ ಅವರ ನೇತೃತ್ವದಲ್ಲಿ ತಾಂತ್ರಿಕ ವಿಭಾಗದವರು, ಶ್ರೀಮತಿ ಶಶಿಕಲಾ ಅವರ ನೇತೃತ್ವದಲ್ಲಿ ಆಡಳಿತ ವಿಭಾಗದವರು ಕೂಡಾ ಹಂಚಿಕೊಂಡು ಬೆಳ್ಳಿಹಬ್ಬದ ಆಚರಣೆಯನ್ನು ಚರಿತ್ರಾರ್ಹವಾಗಿಸಿದರು. ಈ ಇಪ್ಪತ್ತೈದು ವರ್ಷಗಳಲ್ಲಿ ಆಕಾಶವಾಣಿಯು ದಾಖಲಿಸಿದ ಹೆಜ್ಜೆ ಗುರುತುಗಳನ್ನು ಸಾರುವ ಫೋಟೋಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

 ನನ್ನ ಮೆಚ್ಚಿನ ಆಕಾಶವಾಣಿಯು ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ನಾನಿದ್ದೆ ಅನ್ನುವ ಸಂತಸ ನನ್ನದು. ಹಲವಾರು ನಿವೃತ್ತ ಸಹೋದ್ಯೋಗಿಗಳು, ವರ್ಗವಾಗಿ ಬೇರೆಡೆ ನೆಲೆಸಿದ ಮಿತ್ರರು, ಪತ್ರೋತ್ತರಕ್ಕೆ ಬರೆಯುವವರು, ಅಸಂಖ್ಯ ಅಭಿಮಾನಿಗಳೊಡನೆ ಎರಡು ದಿನಗಳ ಕಾಲ ನಡೆದ ಮುಖಾಮುಖಿಯಲ್ಲಿ ನನ್ನ ಇಪ್ಪತ್ತು ವರ್ಷಗಳ ಸೇವಾವಧಿಯ ಎಲ್ಲ ನೋವು – ನಲಿವುಗಳು ಹಂಚಲ್ಪಟ್ಟು ಮುಂಬರುವ ದಿನಗಳಿಗಾಗಿ ಇನ್ನಷ್ಟು ಉತ್ಸಾಹವನ್ನು ಮೈ ಮನಗಳಲ್ಲಿ ತುಂಬಿಕೊಳ್ಳುತ್ತಿದ್ದಂತೆಯೇ, ರಜತಮಹೋತ್ಸವದ ಕೊಡುಗೆಯೋ ಎಂಬಂತೆ ಮಂಗಳೂರು ಕೇಂದ್ರದ ಪ್ರಸಾರದ ಶಕ್ತಿ ಹತ್ತು ಪಟ್ಟು ಹೆಚ್ಚಿಸುವ 10 ಕಿಲೋ ವ್ಯಾಟ್ ಎಫ್. ಎಂ. ಟ್ರಾನ್ಸ್ ಮಿಟರ್ ಅತಿ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡುವ ಎಲ್ಲ ಸೂಚನೆಗಳೂ ಮೇಲಿನಿಂದ ಬರತೊಡಗಿದುವು. ಐವತ್ತರ ಅಂಚಿಗೆ ದಾಪುಗಾಲಿಡುತ್ತಿರುವ ನನ್ನ ವಯಸ್ಸು ಕಾಲುಗಂಟು ನೋವು ಮುಂತಾದ ಕುರುಹುಗಳನ್ನು ತೋರುತ್ತಾ ಹೊಸ ಜವಾಬ್ದಾರಿಗಳ ಹೊರೆಯನ್ನು ನೋಡಿ ಸಣ್ಣಗೆ ಅಂಜಿಕೆ ತೋರಲು ತೊಡಗಿತ್ತು.

ಮುಂದಿನ ವಾರಕ್ಕೆ

Leave a Reply

Your email address will not be published. Required fields are marked *

*

code

Don\'t COPY....Please Share !