ಬಿಟ್ಟೆನೆಂದರೆ ಬಿಡದೀ ಮಾಯೆ

ನೋಡನೋಡುತ್ತಿದ್ದಂತೆಯೇ ಆಕಾಶವಾಣಿ ಮಂಗಳೂರು ಕೇಂದ್ರದ ದಶಮಾನೋತ್ಸವ ಸಮಾರಂಭ ಮೂರುದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. “ದಶಾಂಗ” ಎಂಬ ಹೆಸರಿನ ಈ ಕಾರ್ಯಕ್ರಮದ ಮೊದಲನೆಯ ದಿನ ಡಾ. ಎಂ. ಬಾಲಮುರಳೀಕೃಷ್ಣ ಅವರ ಹಾಡುಗಾರಿಕೆ, ಎರಡನೆಯ ದಿನ “ನಾಮದ ಬಲವೊಂದಿದ್ದರೆ ಸಾಕೋ’ ಎಂಬ ನಾಟಕ, ಮೂರನೆಯ ದಿನ ಡಾ.ಕೆ.ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ಹಾಗೂ ಅದರ ಬಳಿಕ ಖ್ಯಾತ ಸುಗಮ ಸಂಗೀತ ಕಾರ್ಯಕ್ರಮ – ಹೀಗೆ ಕಿಕ್ಕಿರಿದ ಜನರ ಮುಂದೆ ಪುರಭವನದಲ್ಲಿ ನಡೆದ ಈ ಕಾರ್ಯಕ್ರಮಗಳು ಚಿರಸ್ಮರಣೀಯ. ಡಾ.ಎಂ.ಬಾಲಮುರಳೀಕೃಷ್ಣ ಅವರ ಹಾಡುಗಾರಿಕೆಯ ಕಾರ್ಯಕ್ರಮವನ್ನು ನಾನು ನಿರೂಪಿಸಿದ್ದೆ.

 ಕ್ರಮೇಣ ಹಳೆಯ ತಲೆಗಳೆಲ್ಲ ನಿವೃತ್ತಿ, ವರ್ಗಾವಣೆ ಎಂದು ಖಾಲಿಯಾಗುತ್ತಿದ್ದಂತೆ ನಿಲಯನಿರ್ದೇಶಕರಾಗಿ ಸರ್ವಶ್ರೀ ಕೆ.ವಿ.ರಾಮಚಂದ್ರನ್, ಬಿ.ಆರ್.ಚಲಪತಿರಾವ್, ಸಿ.ರಾಜಗೋಪಾಲ್, ವಿ.ಜಿ.ಮ್ಯಾಥ್ಯೂ, ವೆಂಕಟೇಶ್ ಗೋಡ್ಖಿಂಡಿ, ಬಾನಂದೂರು ಕೆಂಪಯ್ಯ, ಕೆ.ಎ.ಮುರಲೀಧರನ್ ಮುಂತಾದವರೂ, ಸಹಾಯಕ ನಿಲಯನಿರ್ದೇಶಕರಾಗಿ ಸರ್ವಶ್ರೀ ಮುನಿಕೃಷ್ಣಪ್ಪ, ಜಿ.ಎಂ.ಶಿರಹಟ್ಟಿ, ಬಿ.ಡಿ.ಮಜುಂದಾರ್, ಕೆ.ರಾಘವನ್ ಮುಂತಾದವರೂ, ಕಾರ್ಯಕ್ರಮ ನಿರ್ವಾಹಕರಾಗಿ ಸರ್ವಶ್ರೀ ಡಿ.ಎಸ್.ನಾಗಭೂಷಣ, ಪ್ರಭಾಕರನ್, ಪದ್ಮನಾಭನ್, ಎಸ್.ಎಸ್.ಹಿರೇಮಠ್, ರಮಾ ಹಿರೇಮಠ್, ಪ್ರಪಂಚಂ.ಎಸ್.ಬಾಲಚಂದ್ರನ್, ವಸಂತಕುಮಾರ ಪೆರ್ಲ, ನಿರ್ಮಲಾ ಅನಾಡ್, ಸಾಯಿಲಕ್ಷ್ಮಿ, ಮೋಹನಪವಾರ್, ವಿರೂಪಾಕ್ಷ ಬಡಿಗೇರ್, ಮುಳಗುಂದ್, ರಾಜಶೇಖರಯ್ಯ, ಶೋಭಾ ಶ್ರೀಹರಿ, ವಿಜಯಾ ಹರನ್, ವಿ.ಮಾ.ಜಗದೀಶ್, ಮಾಧವ ಬೋರ್ಕರ್,ಅನಿಲ್ ಕೌಶಿಕ್, ಶ್ರೀನಿವಾಸಪ್ರಸಾದ್, ಎಂ.ಬಿ.ಪಾಟೀಲ್, ಗೌತಮ್ ಕರಾರ್, ಶಿಬಾನಿ, ರಾಜೀವ್, ಶ್ರೀರಾಂ ಸಿ.ಗೋಪಾಲನ್ ನಾಯರ್, ಜಾನ್ಸನ್ ಮುಂತಾದವರು ಎರಡನೆಯ ದಶಕದುದ್ದಕ್ಕೂ ಕಾಲಕಾಲಕ್ಕೆ ಮಂಗಳೂರು ಆಕಾಶವಾಣಿಯನ್ನು ಪ್ರವೇಶಿಸಿದರು.

 ಸಂಗೀತಕಾರರಲ್ಲಿ ಸರ್ವಶ್ರೀ ದ್ವಾರಂ ಸತ್ಯನಾರಾಯಣ ರಾವ್, ದ್ವಾರಂ ಜಗನ್ಮೋಹನ ರಾವ್, ಎ.ಆರ್.ಕೃಷ್ಣ ಮೂರ್ತಿ, ಪಿ.ಜಿ.ಲಕ್ಷ್ಮೀನಾರಾಯಣ, ಕೆ.ಹರಿಶ್ಚಂದ್ರನ್, ರಾಮಜಾದವ್, ಪಿ.ವಿ.ಗೀತಾದೇವಿ, ಕೆ.ವಿ.ಕೃಷ್ಣ ನಿರ್ಗಮಿಸಿ ಸರ್ವಶ್ರೀ ರಫೀಖ್ ಖಾನ್, ಶಶಿಕಾಂತ್ ಕುಲಕರ್ಣಿ, ಕೆ.ಎಚ್.ರವಿಕುಮಾರ್, ಮೌನೇಶ್ ಕುಮಾರ್ ಛಾವಣಿ, ಬಾಲಕೃಷ್ಣ ತಂತ್ರಿ, ಟಿ.ಎಚ್.ಸುಬ್ರಹ್ಮಣ್ಯಂ, ಟಿ.ಜಿ.ಗೋಪಾಲಕೃಷ್ಣನ್, ಎಸ್.ಆರ್.ಮಹಾದೇವ ಶರ್ಮ ಮುಂತಾದವರು ಪ್ರವೇಶಿಸಿದರು.

 ನಿಲಯದ ಅಭಿಯಂತರರಲ್ಲಿ ಪಿ.ಕೆ.ಪೈಯವರ ಬಳಿಕ ಎಸ್.ಆರ್.ಪಾವನಮೂರ್ತಿ, ಎಂ.ಕೆ ಕೃಷ್ಣಸ್ವಾಮಿ, ವಲ್ಸಾ ಪುನ್ನೋಸ್, ಎನ್.ನಾಗರಾಜನ್, ಎಂ.ಪಿ.ಮಥಾಯ್, ಜಿ.ವಾಸುದೇವನ್, ಎಸ್.ಅಜಿತಾ ಹೀಗೆ ಹಲವರ ಪ್ರವೇಶ ಕಾಲಕಾಲಕ್ಕೆ ಆಯಿತು. ಹಲವಾರು ಸಹಾಯಕ ನಿಲಯದ ಅಭಿಯಂತರರೂ ಬಂದರು. ಈ ಎಲ್ಲಾ ವರ್ಗದವರಲ್ಲಿ ತೀರಾ ಸಜ್ಜನರೂ ಇದ್ದರು, ಅವರನ್ನು ಸದಾ ನಾನು ಸ್ಮರಿಸುತ್ತೇನೆ. ಇನ್ನು ಕೆಲವರು ಇದ್ದರು, ಅಷ್ಟೆ. ಇನ್ನು ಕೆಲವರು ಕನಿಷ್ಠ ಅರ್ಹತೆಯೂ ಇಲ್ಲದವರು, ಆದರೆ ಅಧಿಕಾರದ ಏಣಿಯಲ್ಲಿ ಅವರು ಮೇಲಿದ್ದ ಕಾರಣ ನಾವು ಅವರು ಹೇಳಿದಂತೆ ಕೇಳಬೇಕಾಗುತಿತ್ತು. ನಮ್ಮ ತುಟಿಗಳನ್ನು ಹೊಲಿದು ಮಂಕುತಿಮ್ಮರಂತಿರುವುದು ಕ್ಷೇಮವೆಂದು ಅನಿಸಿದ್ದು ಎಷ್ಟೋ ಬಾರಿ. ಜಾಣ ಕಿವುಡನ್ನು ನಟಿಸುತ್ತಾ, ಕಣ್ಣಿದ್ದೂ ಕುರುಡರಂತಿರುವುದು ಇನ್ನೂ ಕ್ಷೇಮ. ಆದರೆ ನಮ್ಮ ಉದ್ಯೋಗದಲ್ಲಿ ತುಟಿಗಳನ್ನು ಹೊಲಿದಂತಿರಲು ಸಾಧ್ಯವೇ ಇರಲಿಲ್ಲ. ಅಲ್ಲದೆ ನಮ್ಮ ಶ್ರವಣೇಂದ್ರಿಯ ಹಾಗೂ ಚಕ್ಷುಗಳು ಎಷ್ಟು ತೀಕ್ಷ್ಣವಿದ್ದರೂ ಸಾಲದು. ನಮ್ಮ ದಿನ ಬೆಳಗಾಗುತ್ತಿದ್ದುದೇ ಆತಂಕದಿಂದ. ಕಛೇರಿಯ ವಾಹನ ಬಾರದಿದ್ದರೂ ಆತಂಕ, ಬೇಗ ಬಂದೀತೋ ಎಂಬ ಆತಂಕ, ಬೆಳಗ್ಗೆ ನಾಲ್ಕೂವರೆಗೆ ಊರೆಲ್ಲಾ ಗಾಢ ನಿದ್ರೆಯಲ್ಲಿರುವಾಗ ಮನೆಮುಂದೆ ಕರ್ಣಕಠೋರ ಹಾರ್ನ್ ಹಾಕಿ ಅಕ್ಕಪಕ್ಕದವರನ್ನೂ ಎಬ್ಬಿಸುತ್ತಾರಲ್ಲಾ ಎಂದು ಅಂಥ ದಟ್ಟ ಕತ್ತಲೆಯಲ್ಲೂ ಮನೆಯಿಂದ ಮುಖ್ಯರಸ್ತೆಯವರೆಗೂ ನಡೆದು ಬಂದು ವಾಹನದ ಹಾದಿ ಕಾಯುತ್ತಿದ್ದರೆ ಬೀದಿನಾಯಿಗಳ ಕಾಟ. ಹೀಗೆ ಆಡಲಾರದೆ, ಅನುಭವಿಸಲಾಗದೆ ನುಂಗಿದ ಕಷ್ಟಗಳೆಷ್ಟೋ, ಪೀಡೆಗಳೆಷ್ಟೋ.

 ಈ ನಡುವೆ ಎಲ್ಲೆಲ್ಲಿಂದಲೋ ಅಕಾಲದಲ್ಲಿ ವರ್ಗವಾಗಿ ಬಂದು, ತಮ್ಮ ಸಂಸಾರ ಅಲ್ಲಿದ್ದು, ಇಲ್ಲಿ ತಾವು ಮಾತ್ರ ಇದ್ದೂ ಇಲ್ಲದಂತಿರುವ ಕೆಲವರು ಹೊತ್ತು ಕಳೆಯುವುದಕ್ಕೋ ಅಥವಾ ವರ್ಗವಾಗಿ ಬಂದ ಸೇಡು ತೀರಿಸಿಕೊಳ್ಳಲೋ ಎಂಬಂತೆ ಇಲ್ಲಿಯೇ ತಮ್ಮ ಸಂಸಾರದೊಡನೆ ನೆಮ್ಮದಿಯಾಗಿರುವವರನ್ನು ಸುಖವಾಗಿರಲು ಬಿಡಬಾರದು ಎಂಬ ಒಂದಂಶದ ಕಾರ್ಯಕ್ರಮದಡಿ ಪರಪೀಡನೆಯೇ ಏಕೈಕ ಗುರಿ ಎಂಬಂತೆ ತಮ್ಮ ಕೀಟಲೆಯ ಬ್ರಹ್ಮಾಸ್ತ್ರವನ್ನು ಬಿಡುತ್ತಲೇ ಇರುವುದನ್ನು ಚಾಳಿ ಮಾಡಿಕೊಂಡಂತಿದ್ದರು. ಸಾಲದ್ದಕ್ಕೆ ಐದು ವರ್ಷಗಳ ಕಾಲ ನನ್ನ ಮಗನನ್ನು ನೋಡಿಕೊಂಡಿದ್ದ ಪ್ರೇಮ ಯಾರದೋ ಪ್ರೇಮ ಪಾಶಕ್ಕೆ ಸಿಲುಕಿ ಒಂದು ಸಂಸಾರ ಕಟ್ಟಿಕೊಂಡಳು. ಧುತ್ತೆಂದು ಏಕಾಏಕಿ ಅವಳ ಪ್ರೇಮ ಪ್ರಕರಣ ಬಯಲಾಗಿ ಅವಳು ನಮ್ಮನ್ನು ತೊರೆದು ಹೋದ ಮೇಲೆ ನನ್ನ ಪೆದ್ದುತನವೋ, ಮುಗ್ಧತನವೋ ತಿಳಿಯದು, ನಾನಂತೂ ಸಿಕ್ಕಾಪಟ್ಟೆ ಹೆದರಿ ಕೆಲಸವನ್ನೇ ಬಿಡುವ ನಿರ್ಧಾರಕ್ಕೆ ಬಂದು ಎರಡು ತಿಂಗಳ ರಜೆ ಹಾಕಿ ಮನೆಯಲ್ಲೇ ಕುಳಿತೆ, ಹೊಸ ಹುಡುಗಿಯರನ್ನು ಹುಡುಕಲೂ ಹೆದರಿಕೆಯಾಗುತ್ತಿತ್ತು. ಆದರೆ ನನ್ನ ಪಾಳಿಯ ಉದ್ಯೋಗ ಮನೆಯಲ್ಲೇ ಉಳಿದು ನನ್ನ ಮಗನನ್ನು ನೋಡಿಕೊಳ್ಳುವವರಿಲ್ಲದಿದ್ದರೆ ಸಾಗುವಂಥದಲ್ಲ, ಪ್ರೇಮ ಕಲಿಸಿದ ಪಾಠದಿಂದ ಹೆಣ್ಣುಮಕ್ಕಳನ್ನು ನಿಲ್ಲಿಸಿಕೊಳ್ಳಲು ಅಂಜಿಕೆಯಾಗುತ್ತಿತ್ತು. ಕೊನೆಗೂ ಒಬ್ಬಳು ಹುಡುಗಿ ಸಿಕ್ಕಳು. ಆದರೆ ಅವಳಿಗೆ ಅವಳದೇ ಆದ ಕೆಲವು ಕೌಟುಂಬಿಕ ಸಮಸ್ಯೆಗಳಿದ್ದ ಕಾರಣ ಹಗಲಿರುಳೂ ಮನೆಯನ್ನೇ ನೆನೆದು ಅಳುವುದು, ಮುಖ ಬಾಡಿಸಿಕೊಂಡು ಯಾವುದೋ ಚಿಂತೆಯಲ್ಲಿರುವುದು – ಹೀಗೆ ಅವಳು ಅಂತೂ ಇಂತೂ ಎರಡು ವರ್ಷ ಪೂರೈಸಿ ಊರಿಗೆ ಹೊರಟು ಹೋದಳು. ಬಳಿಕ ಮತ್ತೊಬ್ಬಳು…..ಅವಳಿಗೂ ನನ್ನ ಮಗನಿಗೂ ಸೇರಿ ಬರುತ್ತಿರಲಿಲ್ಲ. ಮತ್ತೊಬ್ಬಳು….. ಹೀಗೆ ನನಗೆ ಈ ಪಾಳಿಯ ಗೋಳಿನಿಂದ ತಪ್ಪಿಸಿಕೊಂಡರೆ ಸಾಕಾಗಿತ್ತು.

 ಅದಕ್ಕಾಗಿಯೇ ಈ ಎಲ್ಲಾ ಗೊಂದಲಗಳ ನಡುವೆ ರಾಜ್ಯ ಶಿಕ್ಷಣ ಮಂಡಳಿಯವರು ಸರಕಾರೀ ಕಾಲೇಜುಗಳಿಗೆ ಕರೆಯುವ ಉಪನ್ಯಾಸಕರ ಹುದ್ದೆಗೆ ಕರೆದಾಗಲೆಲ್ಲಾ ಅರ್ಜಿ ಸಲ್ಲಿಸುತ್ತಾ, ಸಂದರ್ಶನಗಳಿಗೆ ಹಾಜರಾಗುತ್ತಾ ಇದ್ದೆ. ಹೀಗೆ ನಾನು ಎದುರಿಸಿದ ಹಲವಾರು ಸಂದರ್ಶನಗಳಲ್ಲಿ ಯಾವುದೋ ಒಂದು ಫಲಿಸಿರಬೇಕು. ಆದರೆ ಈಗಾಗಲೇ ಅಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಡಪಾಯಿಗಳು ಹಾಕಿದ ದಾವೆಯಿಂದಾಗಿ ಅದು ಮುಂದಕ್ಕೆ ಹೋಗಿ ನಾನು ಆಕಾಶವಾಣಿಯಲ್ಲಿ ಹತ್ತು ವರ್ಷಗಳ ಸೇವೆ ಪೂರೈಸಿದ ಸಮಯಕ್ಕೆ ಸರಿಯಾಗಿ ಒಂದು ಶುಭದಿನ ನನಗೆ ಶಿಕ್ಷಣ ಇಲಾಖೆಯಿಂದ ಒಂದು ಪತ್ರ ಬಂದಿತು. ಎಸ್ ಎಲ್ ಆರ್ ಸಿ ಯವರು ನಡೆಸಿದ ಸಂದರ್ಶನದಲ್ಲಿ ನಾನು ಆಯ್ಕೆಯಾದ ಪ್ರಯುಕ್ತ ಇಂತಿಂಥ ದಿನ ಬೆಂಗಳೂರಿಗೆ ನನ್ನೆಲ್ಲಾ ದಾಖಲೆ ಪತ್ರಗಳೊಡನೆ ಬರಬೇಕೆಂದೂ, ಅಲ್ಲಿಯೇ ನನ್ನ ಉದ್ಯೋಗ ಪತ್ರವನ್ನು ಕೊಡಲಾಗುವುದೆಂದೂ ಅದರಲ್ಲಿ ತಿಳಿಸಲಾಗಿತ್ತು. ಅದನ್ನು ನೋಡಿ ಆದ ಸಂತೋಷದಲ್ಲಿ ಅಷ್ಟು ವರ್ಷಗಳಿಂದ ಕಾದು ಹಂಬಲಿಸಿದ್ದ ಉಪನ್ಯಾಸಕ ವೃತ್ತಿ ಕೈಗೂಡಿಯೇ ಬಿಡುತ್ತದಲ್ಲ ಎಂಬ ಸಂಭ್ರಮದಲ್ಲಿ ಆ ಪತ್ರವನ್ನು ಸರಿಯಾಗಿ ಓದದೇ ಬೆಂಗಳೂರಿಗೆ ದೌಡಾಯಿಸಿದೆವು. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಎಷ್ಟೊಂದು ವಿಭಾಗಗಳು, ಕಟ್ಟಡಗಳು? ಕೊನೆಗೂ ಕಟ್ಟಡ ಸಿಕ್ಕಿತು, ಆದರೆ ಅಲ್ಲಿ ಸಿಕ್ಕ ಸಿಕ್ಕವರ ಮುಖಕ್ಕೆ ನನಗೆ ಬಂದ ಪತ್ರ ತೋರಿಸಿದರೆ ಅವರು ಇನ್ನ್ಯಾರಿಗೋ ಕೈ ಮಾಡುತ್ತಿದ್ದರು. ಅಂತೂ ನನ್ನ ಗಮ್ಯ ಸ್ಥಾನ ಸಿಕ್ಕಿತು. ಆದರೆ ಅಲ್ಲಿ ಆಗಲೇ ನನ್ನಂಥದೇ ನೂರಾರು ಮಂದಿ ಜಮಾಯಿಸಿ ದೊಡ್ಡ ಸರತಿಯ ಸಾಲು ಬೆಳೆದಿತ್ತು. ಅಷ್ಟುದ್ದ ಸರತಿಯ ಸಾಲಿನಲ್ಲಿ ನನ್ನ ಸರದಿ ಬಂದಾಗ ಆಗಲೇ ಮಧ್ಯಾನ್ಹ ಸಮೀಪಿಸಿತ್ತು. ಹೊರಟು ಬರುವ ಸಂಭ್ರಮದಲ್ಲಿ ಅದರಲ್ಲಿ ನಮೂದಿಸಿದ್ದ ನನ್ನ ಆರೋಗ್ಯ ಸರಿಯಿದೆ ಎಂಬ ಪ್ರಮಾಣ ಪತ್ರ ಹಾಗೂ ಚಾರಿತ್ರ್ಯ ಸರಿಯಿದೆಯೆಂದು ಈರ್ವರಿಂದ ಪಡೆದ ಪ್ರಮಾಣ ಪತ್ರವನ್ನು ನಾನು ತಂದಿರಲೇ ಇಲ್ಲ. ಅಲ್ಲಿಯೇ ಇದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಯಾರೂ ನನ್ನ ಚಾರಿತ್ರ್ಯದ ಬಗ್ಗೆ ಪ್ರಮಾಣ ಪತ್ರ ಕೊಡಲು ಸಮ್ಮತಿಸುವುದಿರಲಿ, ನಮ್ಮೊಡನೆ ಮಾತನಾಡಲೂ ಅವರು ಸಿದ್ಧರಿರಲಿಲ್ಲ. ಕೊನೆಗೂ ಯಾವುದೋ ಬ್ಯಾಂಕಿಗೆ ಹೋಗಿ ಊರಿನ ಗುರುತು ಪರಿಚಯ ಹೇಳಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ಪಡೆದಿದ್ದಾಯಿತು. ಬೆಂಗಳೂರಿನ ಸರಕಾರೀ ಆಸ್ಪತ್ರೆಗಳಿಗೆಲ್ಲಾ ಸುತ್ತು ಹೊಡೆದು ಆರೋಗ್ಯದ ಬಗ್ಗೆ ಪ್ರಮಾಣ ಪತ್ರ ಪಡೆದಿದ್ದಾಯಿತು. ಆರೋಗ್ಯ ಸರಿ ಇದೆಯೆಂಬ ಪ್ರಮಾಣ ಪತ್ರ ಪಡೆಯುವ ಸಮಯಕ್ಕಾಗುವಾಗ ನನ್ನ ಆರೋಗ್ಯ ನಿಜವಾಗಿಯೂ ಕೆಡುವ ಸೂಚನೆಗಳು ಕಂಡುವು. ಚಾರಿತ್ರ್ಯ ಕೆಟ್ಟರೂ ಇಷ್ಟು ದು:ಖ ಆಗುತ್ತಿರಲಿಲ್ಲವೇನೋ, ಅಷ್ಟು ಕಷ್ಟ ಪಟ್ಟು ಅದನ್ನೂ ಪಡೆದಿದ್ದಾಯಿತು. ಆಗ್ಲೇ ಸಂಜೆಯಾಗುತ್ತಾ ಬಂದಿತ್ತು. ಕೊನೆಗೂ ಅಧಿಕಾರಿಯ ಮುಂದೆ ನನ್ನ ದಾಖಲೆಗಳನ್ನು ಒಪ್ಪಿಸಿದಾಗ ನನಗೆ ಉಡುಪಿ ತಾಲೂಕಿನ ಕೆಮ್ಮಣ್ಣು ಎಂಬಲ್ಲಿಗೆ ಹೋಗಿ ನಾಳೆಯೇ ಕೆಲಸಕ್ಕೆ ಸೇರಿಕೊಳ್ಳುವಂತೆ ಉದ್ಯೋಗದ ಪತ್ರವನ್ನು ನೀಡಿದರು. ನನಗಿಂತ ಮುಂಚಿತವಾಗಿ ದಾಖಲೆ ಸಲ್ಲಿಸಿದವರಿಗೆ ಅವರಿಗೆ ಬೇಕಾದ ಹತ್ತಿರದ ಸ್ಥಳಗಳು ಸಿಕ್ಕಿದ್ದುವು. ನಾನೂ ನನ್ನ ಮೇಲೊಂದಷ್ಟು ಕೃಪೆ ತೋರುವಂತೆ ಗೋಗರೆದರೂ ಅವರು ಮಾತೃ ತಾಲೂಕಿನಲ್ಲಿ ಅಂದರೆ ಮಂಗಳೂರಿನವರಿಗೆ ಅದೇ ತಾಲೂಕಿನಲ್ಲಿ ಕೊಡಲು ಸಾಧ್ಯವೇ ಇಲ್ಲವೆಂದು ಕಡ್ಡಿಮುರಿದಂತೆ ಹೇಳಿಬಿಟ್ಟರು. ನೀವು ಮಂಗಳೂರು ತಾಲೂಕಿನವರು, ನಿಮಗೆ ಬೇಕಾದರೆ ವಾಮದಪದವು, ಪುಂಜಾಲುಕಟ್ಟೆ, ಬೆಳ್ತಂಗಡಿ ಅಂತ ಅವರು ಬೇರೆಲ್ಲ ಹೆಸರುಗಳನ್ನು ಹೇಳಿದರು. ಉಡುಪಿಗಾದರೂ ಸರ್ವೀಸ್ ಬಸ್ ಗಳು ಬೇಕಾದಷ್ಟಿದ್ದುವು, ಉಳಿದೆಡೆ ಕೆಂಪು ಬಸ್ ಗಳೇ ಗತಿ. ಯಾರೋ ಹೇಳಿದರೆಂದು ಬಹುಮಹಡಿ ಕಟ್ಟಡದಲ್ಲಿರುವ ಉನ್ನತಾಧಿಕಾರಿಯೊಬ್ಬರನ್ನು ಕಾಣಲು ಓಡಿದೆವು. ಅಲ್ಲಿಯೋ ಲಿಫ್ಟ್ ನವನಿಂದ ಹಿಡಿದು ಎಲ್ಲರೂ ದಬಾಯಿಸುವವರೇ… ಆದರೆ ಸಂಸ್ಕಾರವಂತ ನಡವಳಿಕೆಯ ಆ ಅಧಿಕಾರಿ ಮಾತ್ರ ನಮ್ಮನ್ನು ಸಹಾನುಭೂತಿಯಿಂದ ಕಂಡು ಮಾತನಾಡಿಸಿದರು. “ನೋಡೀಮ್ಮಾ, ನೀವು ತಡ ಮಾಡಿದಷ್ಟೂ ಹತ್ತಿರದಲ್ಲಿರುವ ಪೋಸ್ಟ್ ಗಳೆಲ್ಲಾ ತುಂಬಿ ಬಿಡುತ್ತವೆ, ಈಗಲೇ ನಿಮಗೆ ಮಂಗಳೂರು ತಾಲೂಕಿನಲ್ಲಂತೂ ಕೊಡಲಾಗುವುದಿಲ್ಲ. ಈಗ ಹೋಗಿ ನೀವು ಕೆಮ್ಮಣ್ಣು ಕಾಲೇಜಿಗೆ ಸೇರಿಕೊಳ್ಳಿ, ಒಂದು ವರ್ಷ ಕಳೆದ ಬಳಿಕ ವೇಕೆನ್ಸಿ ಆದಾಗ ಮತ್ತೆ ಮಂಗಳೂರಿಗೆ ಬರಬಹುದಲ್ಲ, ತಡ ಮಾಡಬೇಡಿ, ಈಗಲೇ ಮಂಗಳೂರಿಗೆ ಹೋಗಿ ನಾಳೆಯೇ ಆಕಾಶವಾಣಿಗೆ ನಿಮ್ಮ ರಾಜೀನಾಮೆ ಸಲ್ಲಿಸಿ ಹೊಸ ಉದ್ಯೋಗಕ್ಕೆ ಸೇರಿಕೊಳ್ಳಿ” ಅಂತ ಉಪದೇಶಿಸಿದರು. “ನಿಮಗೆ ಒಳ್ಳೆಯದಾಗಲಿ” ಎಂದಾಕೆ ನಗುತ್ತಾ ಹಾರೈಸಿದರು. ಆಕೆಯೊಬ್ಬರನ್ನು ಬಿಟ್ಟರೆ ಶಿಕ್ಷಣ ಇಲಾಖೆಯಲ್ಲಿ ನನಗೆ ಯಾರೂ ಸುಶಿಕ್ಷಿತರಂತೆ ಕಾಣಲಿಲ್ಲ, ಒಂದು ವೇಳೆ ನಾನು ಆಕಾಶವಾಣಿ ತೊರೆದು ಶಿಕ್ಷಣ ಇಲಾಖೆಗೆ ಸೇರಿದರೆ ಬೆಳಗ್ಗಿನಿಂದ ನಾನು ಕಂಡ ಅವೇ ಅಶಿಕ್ಷಿತರೊಡನೆ ವ್ಯವಹರಿಸಬೇಕಲ್ಲಾ ಎಂಬ ಚಿಂತೆ ಕಾಡಿತು.

 ನಾನು ಮಂಗಳೂರಿಗೆ ಮರಳಿದೆ. ಒಂದು ದಿನದ ಬೆಂಗಳೂರಿನ ಭೀಕರ ಅನುಭವಗಳು, ಶಿಕ್ಷಣ ಇಲಾಖೆಯವರ ನಡೆಗಳು ಇವನ್ನೆಲ್ಲ ನೋಡಿದ ನನಗೆ ನನ್ನ ಮಂಗಳೂರು ಸ್ವರ್ಗದಂತೆ ಕಂಡಿತು. ನಾನು ಆಕಾಶವಾಣಿಗೆ ಸೇರುವಾಗ ನನ್ನ ಹಿರಿಯರು ಹೇಳಿಕೊಟ್ಟ ಮೊದಲ ಪಾಠಗಳಲ್ಲಿ ಆಕಾಶವಾಣಿಯೊಂದು ಸಾಂಸ್ಕೃತಿಕ ಸಂಸ್ಥೆ, ದೂರವಾಣಿಯಲ್ಲಿ ಮಾತನಾಡುವಾಗಲೂ ನಯವಿನಯದಿಂದ, ಧ್ವನಿ ಎತ್ತರಿಸದೆ ನಗುತ್ತಾ ಮಾತನಾಡಬೇಕೆಂದು ಹೇಳಿಕೊಟ್ಟಿದ್ದರು. ಆದರೆ ನೂರಾರು ಜನರ ಭವಿಷ್ಯವನ್ನು ರೂಪಿಸುವ ಶಿಕ್ಷಣ ಇಲಾಖೆಯಲ್ಲಿ ಈ ಪಾಠವನ್ನು ಅವರಿಗೆ ಅವರ ಹಿರಿಯರು ಯಾರೂ ಹೇಳಿಯೇ ಕೊಡಲಿಲ್ಲವೇನೋ. ನನ್ನಷ್ಟಕ್ಕೆ ನಾನೊಬ್ಬಳೇ ನನ್ನ ಪಾಡಿಗೆ ಸ್ಟುಡಿಯೋದೊಳಗೆ ತಣ್ಣಗೆ ಕುಳಿತು ಮಾಡುವ ನನ್ನ ಉದ್ಯೋಗಕ್ಕೆ ಮಿಗಿಲಾದದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ ಅಂತ ಅನಿಸಿತು. ದಿನವೂ ಎರಡು – ಮೂರು ಬಸ್ ನಲ್ಲಿ ಬಹುದೂರದ ಪ್ರಯಾಣ ಮಾಡಿ, ಅಲ್ಲೂ ಗಂಟಲು ಹರಿಯುವಂತೆ ಮಾತನಾಡಿ, ಮತ್ತೆ ಪ್ರಯಾಣಿಸಿ ಮನೆಗೆ ಸೇರಬೇಕಾದ ನನ್ನ ಅವಸ್ಥೆಯನ್ನು ಕಲ್ಪಿಸಿಯೇ ಕಂಗಾಲಾದ ನಾನು ಆಕಾಶವಾಣಿಯನ್ನು ತೊರೆಯುವ ತೀರ್ಮಾನವನ್ನು ಆ ಕ್ಷಣದಿಂದ ಕೈ ಬಿಟ್ಟೆ. ಒಂದು ವೇಳೆ ನಾನು ಉಪನ್ಯಾಸಕ ವೃತ್ತಿಯನ್ನು ಆಯ್ದುಕೊಂಡಿದ್ದೇ ಆದರೆ ನನ್ನ ಸಾವಿರಾರು ಅಭಿಮಾನಿಗಳನ್ನು ನಾನು ಕಳೆದು ಕೊಳ್ಳುತ್ತಿದ್ದೆನಲ್ಲಾ ಎಂದು ಈಗ ಅನಿಸುತ್ತಿದೆ, ಮಾತ್ರವಲ್ಲ,ಸರಿಯಾದ ನಿರ್ಧಾರವನ್ನೇ ಕೈಗೊಂಡೆ ಎಂದು ಸಮಾಧಾನವೆನಿಸುತ್ತಿದೆ.

ಮುಂದಿನ ವಾರಕ್ಕೆ  

Leave a Reply

Your email address will not be published. Required fields are marked *

*

code

Don\'t COPY....Please Share !