ವಾತಾನುಕೂಲಿ ಕೋಣೆಯಿಂದ ಬಯಲಿನ ಬಿಸಿಗೆ

ಆಕಾಶವಾಣಿಯು ವಿಶೇಷ ಸಂದರ್ಭಗಳಲ್ಲಿ ಆಗಾಗ ಆಹ್ವಾನಿತರ ಸಮ್ಮುಖದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಅಲ್ಲಿ ಧ್ವನಿಮುದ್ರಿಸಿದ ಕಾರ್ಯಕ್ರಮಗಳ ಆಯ್ದ ಭಾಗಗಳನ್ನು ನಿಲಯದಿಂದ ನಿಗದಿತ ದಿನ ಹಾಗೂ ಸಮಯಗಳಲ್ಲಿ ಪ್ರಸಾರ ಮಾಡುವ ಕ್ರಮ ಇದೆ. ಆಕಾಶವಾಣಿ ಸಂಗೀತ ಸಮ್ಮೇಳನಗಳು, ರಾಜ್ಯೋತ್ಸವ ಸಂಬಂಧೀ ಗೀತೆಗಳ ಹಾಗೂ ಕವಿಗೋಷ್ಠಿಯ ವಿಶೇಷ ಕಾರ್ಯಕ್ರಮಗಳು, ಆಕಾಶವಾಣಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸುವ ಕಾರ್ಯಕ್ರಮಗಳು, ಪ್ರಾದೇಶಿಕ ಹಾಗೂ ಜಾನಪದ ಸಂಗೀತದ ರಾಷ್ಟ್ರೀಯ ಕಾರ್ಯಕ್ರಮಗಳು, ರಾಜಭಾಷಾ ಹಿಂದಿ ಅನುಷ್ಠಾನ ಸಂಬಂಧೀ ಇಂದ್ರಧನುಷ್ ಕಾರ್ಯಕ್ರಮ, ಆಕಾಶವಾಣಿ ಹಬ್ಬ, ಚಿಣ್ಣರ ಚಿಲುಮೆ – ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆ ಆಯೋಜಿಸಲಾಗುತ್ತದೆ. ಇಂಥ ಕಾರ್ಯಕ್ರಮಗಳನ್ನು ವೇದಿಕೆಯ ಮೇಲೆ ನಿರೂಪಿಸುವ ಜವಾಬ್ದಾರಿ ಉದ್ಘೋಷಕರದು. ಇಂಥ ಸಂದರ್ಭಗಳಲ್ಲಿ ಉದ್ಘೋಷಕರ ಕಾರ್ಯದ ಒತ್ತಡ ಹೇಳತೀರದು. ಪ್ರತಿಯೊಂದು ಕಾರ್ಯಕ್ರಮದ, ಕಲಾವಿದರ ಪೂರ್ವ ವಿವರಗಳನ್ನು ಆಯಾ ವಿಭಾಗದವರಿಂದ ದುಂಬಾಲು ಬಿದ್ದು ಪಡೆಯುವುದಲ್ಲದೆ, ಪ್ರತಿಯೊಂದು ನಿರೂಪಣೆಯನ್ನೂ ಮೊದಲೇ ಬರೆದು ಸಂಬಂಧಪಟ್ಟವರ ಮುಂದೆ ಒಪ್ಪಿಸಿ ಸಹಿ ಪಡೆದು ವೇದಿಕೆಯ ಮೇಲೆ ಪ್ರಸ್ತುತ ಪಡಿಸಬೇಕು. ಎಲ್ಲವೂ ಚೆನ್ನಾಗಿ ನಡೆದರೆ ಪ್ರಶಂಸೆಯ ಮಾತುಗಳಿಲ್ಲ, ಆದರೆ ಏನಾದರೂ ಯಾರ ಕಾರಣದಿಂದಲೋ ತಪ್ಪಾಯಿತೋ ಎಲ್ಲ ತಪ್ಪಿಗೂ ಉದ್ಘೋಷಕರೇ ತಲೆದಂಡ ಕಟ್ಟಬೇಕಾದ ಪರಿಸ್ಥಿತಿ. ಎಲ್ಲವೂ ನಿಗದಿತ ಸಮಯದೊಳಗೆ ಮುಗಿಯಬೇಕಿದ್ದುದರಿಂದ, ಯುವಜನರ, ಮಕ್ಕಳ ಕಾರ್ಯಕ್ರಮವಾಗಿದ್ದರೆ ಪ್ರತಿಯೊಂದು ಸಣ್ಣ ಸಣ್ಣ ಐಟಂಗಳು ಮುಗಿಯುತ್ತಿದ್ದಂತೆ ಮುಕ್ತಾಯದ ಶಬ್ದ ಯಾವುದು ಎಂದು ಮೊದಲೇ ತಿಳಿದುಕೊಂಡು, ಎಲ್ಲೂ ವಿಳಂಬವಾಗದಂತೆ ನಿರ್ವಹಿಸಬೇಕು.

ಆಕಾಶವಾಣಿ ಶಾಸ್ತ್ರೀಯ ವಾದ್ಯ ಸಂಗೀತ  ಕಾರ್ಯಕ್ರಮ ನಿರೂಪಣೆ

ವಿಶ್ವ ಕೊಂಕಣಿ ಸಮ್ಮೇಳನಸಭಾ ಕಾರ್ಯಕ್ರಮ ನಿರೂಪಣೆ

 ಬೆಳಗ್ಗಿನಿಂದ ನಡೆಯುವ ಸ್ಟೇಜ್ ರಿಹರ್ಸಲ್ ನಲ್ಲಿ ಭಾಗವಹಿಸಬೇಕು. ಸಂಜೆ ನಾಲ್ಕಕ್ಕೆಲ್ಲಾ ರೇಷ್ಮೆ ಸೀರೆ ಉಟ್ಟು ಮುಖಕ್ಕೆ ಸುಣ್ಣ ಬಣ್ಣ ಬಳಿದು ಬೆವರು ಸುರಿಸುತ್ತಾ, ಸೈಡ್ ವಿಂಗ್ಸ್ ನಲ್ಲಿ ಕಾರ್ಯಕ್ರಮ ನೀಡುವ ಕಲಾವಿದರ, ಪುಟಾಣಿಗಳ, ಯುವಜನರ ನೂರಾರು ಪ್ರಶ್ನೆ, ಸಂದೇಹಗಳಿಗೆ ಉತ್ತರಿಸುತ್ತಾ ನಗುಮೊಗದೊಡನೆ ಸಜ್ಜಾಗಬೇಕು. ಕವಿಗೋಷ್ಠಿಯಾಗಿದ್ದರೆ ಹತ್ತು – ಹದಿನೈದು ಕವಿಗಳ ಜನ್ಮ ವೃತ್ತಾಂತ, ಅವರು ಓದುವ ಕವಿತೆಯ ಸಾರ ಎಲ್ಲವನ್ನೂ ತಿಳಿದು ಕೊಂಡು ಆ ಪ್ರವರವನ್ನು ಕಾವ್ಯಮಯ ಭಾಷೆಯಲ್ಲಿ ಪ್ರಸ್ತುತಪಡಿಸುತ್ತಾ, ಸಂಗೀತ ಕಲಾವಿದರಾದರೆ ಅವರ ಸಾಧನೆಯನ್ನು ಪುಟಗಟ್ಟಲೆ ಬರೆದು ವರ್ಣಮಯ ಭಾಷೆಯಲ್ಲಿ ಹೇಳಬೇಕಿತ್ತು. ಒಂದೊಂದು ಸಂಗೀತ ಕಛೇರಿಯಲ್ಲೂ ಮುಖ್ಯ ಕಲಾವಿದರು, ಪಕ್ಕವಾದ್ಯ ಕಲಾವಿದರು ಎಂದು ಐದಾರು ಜನರ ಸಾಧನೆಯನ್ನು ಬಣ್ಣಿಸಿ ಮುಗಿಸುವುದರೊಳಗೆ ಗಂಟಲ ಪಸೆ ಆರಿ ಹೋಗುತ್ತಿತ್ತು. ಒಮ್ಮೆ ಹತ್ತು ಕಲಾವಿದರು ಭಾಗವಹಿಸಿದ್ದ “ಶ್ರುತಿ-ಲಯ”ವೆಂಬ ಲಯವಿನ್ಯಾಸ ಕಾರ್ಯಕ್ರಮದಲ್ಲಿ ಘಟಾನುಘಟಿ ಕಲಾವಿದರೇ ಇದ್ದು ಅಷ್ಟೂ ಜನರ ಸಾಧನೆಯ ಕಥೆಯನ್ನು ಹೇಳಲು ಅರ್ಧ ಘಂಟೆಗೂ ಹೆಚ್ಚಿನ ಹೊತ್ತು ನನಗೆ ತಗಲಿತ್ತು. ನನ್ನ ಮೂರೂವರೆ ದಶಕಗಳ ವೃತ್ತಿಜೀವನದಲ್ಲಿ ಹಲವಾರು ಇಂಥ ಕಾರ್ಯಕ್ರಮಗಳನ್ನು ವೇದಿಕೆಯ ಮೇಲೆ ನಿರೂಪಿಸಿದ್ದೇನೆ. ಅದುವರೆಗೆ ನಮ್ಮದಲ್ಲದ ಯಾವುದೋ ಪ್ರಾಸಬದ್ಧ ಹೆಸರಿನಿಂದ ಕರೆಸಿಕೊಂಡು ಗುರುತಿಸಲ್ಪಡುತ್ತಿದ್ದ ನಾವು ಉದ್ಘೋಷಕರು ನಮ್ಮ ನಿಜ ರೂಪವನ್ನು ವೇದಿಕೆಯ ಮೇಲೆ ತೋರಿಸಿದಾಗ ಶ್ರೋತೃಗಳು ನಮ್ಮನ್ನು ನಮ್ಮ ಧ್ವನಿಮಾತ್ರದಿಂದಲೇ ಗುರುತಿಸಿ “ಓ, ಇವರು ಅವರು, ಅವರು ಇವರು” ಎಂದು ಪುಲಕಗೊಳ್ಳುವುದನ್ನು ನೋಡುವುದೇ ನಮಗೆ ಆಗ ಸಿಗುತ್ತಿದ್ದ ಏಕೈಕ ಖುಷಿ. ಜೊತೆಗೆ ಉದ್ದಾಮ ಕಲಾವಿದರ ಸಂಗೀತ ಸೌಖ್ಯವನ್ನು ಹಾಗೂ ಕವಿಗಳ ಸಾಹಿತ್ಯ ಸಾಂಗತ್ಯವನ್ನು ಸವಿಯುವ ಭಾಗ್ಯ.

ಇಂಥ ಹೊರಾಂಗಣ ಕಾರ್ಯಕ್ರಮಗಳಲ್ಲಿ ನಾನು ಡಾ.ಬಾಲಮುರಳೀ ಕೃಷ್ಣ, ಎಂ.ಎಲ್.ವಸಂತಕುಮಾರಿ, ಸಿಕ್ಕಿಮ್ ಸಹೋದರಿಯರು, ಎನ್.ರಮಣಿ, ಡಾ.ಕದ್ರಿ ಗೋಪಾಲನಾಥ್, ಎ.ಕನ್ಯಾಕುಮಾರಿ, ಕುಮರೇಶ್ – ಗಣೇಶ್ ಮುಂತಾದ ಅಗ್ರ ಶ್ರೇಣಿಯ ಕಲಾವಿದರ ಪರಿಚಯ ಸಭಿಕರಿಗೆ ಮಾಡಿಕೊಟ್ಟಿದ್ದೇನೆ. ವಿದ್ಯಾಭೂಷಣ, ಶಾಂತಾ ಜಯತೀರ್ಥ, ಎಚ್.ಆರ್.ಲೀಲಾವತಿ, ಎಚ್.ಕೆ ನಾರಾಯಣ, ಇಂದು ವಿಶ್ವನಾಥ್, ಬಿ.ಕೆ.ಸುಮಿತ್ರಾ, ಸಂಗೀತಾ ಕಟ್ಟಿ, ಪುತ್ತೂರು ನರಸಿಂಹ ನಾಯಕ್, ಎಂ.ಎಸ್.ಶೀಲಾ, ಸುಮಾ ಶಾಸ್ತ್ರಿ, ಶ್ಯಾಮಲಾ ಜಾಗೀರ್ದಾರ್, ಶ್ರೀಕಾಂತ ಸೋಮಯಾಜಿ, ನಗರ ಶ್ರೀನಿವಾಸ ಉಡುಪ ಅಲ್ಲದೇ ಹಲವಾರು ಖ್ಯಾತ ನಾಮರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಈ ಎಲ್ಲರೊಡನೆ ಆತ್ಮೀಯವಾಗಿ ಸಂವಹನಿಸಲು ಸಾಧ್ಯವಾದುದು ಮಾತ್ರವಲ್ಲ ಅವರಿಂದ ಪ್ರಶಂಸೆಗೆ ಪಾತ್ರಳಾದುದು ನನ್ನ ಭಾಗ್ಯವೆಂದೇ ತಿಳಿದಿದ್ದೇನೆ. ಎಚ್.ಆರ್.ಲೀಲಾವತಿ, ಸಂಗೀತಾಕಟ್ಟಿ ಮುಂತಾದವರು ನನ್ನ ನಿರ್ವಹಣೆಯನ್ನು ಬಹುವಾಗಿ ಮೆಚ್ಚಿಕೊಂಡದ್ದೇ ಅಲ್ಲದೇ ನನ್ನನ್ನು ತಮ್ಮ ಊರಿನ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದರೂ ಕೂಡಾ.

ಇನ್ನು ಕವಿಗೋಷ್ಠಿಗಳಲ್ಲಿ ಕಯ್ಯಾರರು, ಡಾ.ಚಂದ್ರಶೇಖರ ಕಂಬಾರ, ಬಿ.ಎ.ಸನದಿ, ಸುಮತೀಂದ್ರ ನಾಡಿಗ, ಬಿ.ಆರ್.ಲಕ್ಷ್ಮಣ ರಾವ್, ಶ್ರೀಕೃಷ್ಣ ಆಲನಹಳ್ಳಿ, ಸುಬ್ರಾಯ ಚೊಕ್ಕಾಡಿ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಡಾ.ನಾ.ಮೊಗಸಾಲೆ, ಗುಂಡ್ಮಿ ಚಂದ್ರ ಶೇಖರ ಐತಾಳ, ಪಿ.ಎಸ್.ರಾಮಾನುಜಂ, ಎಚ್.ಡುಂಡಿರಾಜ್, ಭುವನೇಶ್ವರೀ ಹೆಗ್ಗಡೆ – ಇನ್ನೂ ಎಷ್ಟೋ ಖ್ಯಾತ ಕವಿಗಳನ್ನು ವೇದಿಕೆಯಲ್ಲಿ ಪರಿಚಯಿಸಿ ಸಭಾನಿರ್ವಹಣೆ ಮಾಡಿದ್ದೇನೆ.

 ವೇದಿಕೆಯ ಮೇಲೆ ಆಕಾಶವಾಣಿ ಆಯೋಜಿಸಿದ ನಾಟಕಗಳಲ್ಲಿ ವಿ. ಬಸವರಾಜ್ ನಿರ್ದೇಶನದ “ಭಗವದಜ್ಜುಕೀಯ”,ಅಬ್ದುಲ್ ರೆಹಮಾನ್ ಪಾಷಾ ನಿರ್ದೇಶನದ “ಆಷಾಡದ ಒಂದು ದಿನ”,ಕಾಸರಗೋಡು ಚಿನ್ನಾ ನಿರ್ದೇಶನದ ಪಿ.ಲಂಕೇಶರ “ಸಿದ್ಧತೆ’ ನಾಟಕಗಳನ್ನು ನಿರೂಪಿಸಿದ್ದೇನೆ.

 ಹೀಗೆ ಆಕಾಶವಾಣಿಯ ಹೊರಾಂಗಣ ಕಾರ್ಯಕ್ರಮಗಳ ನಿರ್ವಹಣೆ ಮಾಡುತ್ತಿದ್ದಂತೆಯೇ, ಹಲವಾರು ಪ್ರತಿಷ್ಠಿತ ಸಮಾರಂಭಗಳ ಕಾರ್ಯಕ್ರಮ ನಿರೂಪಣೆಗಾಗಿ ಒತ್ತಡಗಳು, ಆಹ್ವಾನಗಳು ಬರತೊಡಗಿದುವು. ಆಕಾಶವಾಣಿಯಿಂದ ಲಿಖಿತ ಒಪ್ಪಿಗೆ ಪಡೆದು, ಯಾವುದೇ ಶುಲ್ಕ ಪಡೆಯದೇ ಹಲವಾರು ಕಾರ್ಯಕ್ರಮಗಳನ್ನು ನಾನು ವೇದಿಕೆಯ ಮೇಲೆ ನಿರ್ವಹಿಸಿದೆ. ಹೆಚ್ಚಿನ ಕಡೆಯೂ ಕೊನೆಗೆ ಕಾರ್ಯಕ್ರಮ ನಿರೂಪಕರಿಗೊಂದು ಧನ್ಯವಾದ ಹೇಳಲೂ ಮರೆತ ಉದಾಹರಣೆಗಳೆ ಹೆಚ್ಚು. ಇನ್ನು ಕೆಲವು ಕಡೆ ಒಂದು ಹೂ, ಅಥವಾ ಹೂದಾನಿಯಂಥದ್ದೋ ಇಲ್ಲವೇ ಸ್ಮರಣಿಕೆಯೆಂಬ ಕಟ್ಟಿಗೆ ತುಂಡುಗಳು, ಕಾಲಿಗೆ ತಪ್ಪಿ ಬಿದ್ದರೆ ಬೆರಳೇ ತುಂಡರಿಸಿ ಹೋಗುವಂಥ ಅಲಗುಳ್ಳ ಅಗ್ಗದ ಲೋಹದ ಚಿತ್ರವಿಚಿತ್ರ ಆಕೃತಿಗಳನ್ನು ಪಡೆದು ಎಸೆಯಲೂ ಆಗದೆ, ಇಟ್ಟುಕೊಳ್ಳಲೂ ಆಗದೇ ಮನೆ ತುಂಬಾ ಅವೇ ತುಂಬಿ ಈಗ ನನ್ನನ್ನು ಅಣಕಿಸಿ ನಗುತ್ತಿವೆ. ಬುದ್ಧಿಹೀನಳಂತೆ ಕರೆದಲ್ಲೆಲ್ಲಾ ಹೋಗಿ ಇಂಥ ವಿಚಿತ್ರ ಆಕೃತಿಗಳನ್ನು ಪಡೆದು ಪಡೆದು ಸಾಕಾಗಿ ಕೊನೆಕೊನೆಗೆ ಇಂಥವರ ಬೋನಿಗೆ ಸಿಲುಕದೆ ತಪ್ಪಿಸಿಕೊಳ್ಳಲು ನಾನಾ ಪಿಳ್ಳೆ ನೆವಗಳನ್ನು ಹೇಳಿ ಮಹಾ ಸುಳ್ಳುಗಾತಿಯೂ ಆಗಿದ್ದೇನೆ.

ಆಕಾಶವಾಣಿ ನೇರ ಪ್ರಸಾರವೀಕ್ಷಕ ವಿವರಣೆ 

 ನಾನು ನಿರ್ವಹಿಸಿದ ನೂರಾರು ಕಾರ್ಯಕ್ರಮಗಳಲ್ಲಿ ಕೆಲವು ಇಂದಿಗೂ ನಾನು ನೆನಪಿಟ್ಟುಕೊಂಡು ಮತ್ತೆ ಮತ್ತೆ ಚಪ್ಪರಿಸಿ ಸವಿಯುವಂಥವು. ಪುತ್ತೂರಿನ ವಿವೇಕಾನಂದ ಕಾಲೇಜಿನ ರಜತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಅವರು ಪಂಡಿತ್ ಭೀಮಸೇನ್ ಜೋಷಿಯವರಿಂದ ಅಭಂಗವಾಣಿಯನ್ನು ಮಂಗಳೂರಿನ ಪುರಭವನದಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಆ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಪುತ್ತೂರು ನರಸಿಂಹ ನಾಯಕರು ನನಗೆ ವಹಿಸಿದ್ದು, ವಿವರಗಳನ್ನು ಪಡೆದು ಕೊಳ್ಳಲು ನಾನು ನನ್ನ ಯಜಮಾನರೊಡನೆ, ಜೋಷಿಯವರು ಉಳಿದುಕೊಂಡಿದ್ದ ವಸತಿಗೃಹಕ್ಕೆ ಹೋಗಿದ್ದಾಗ, ಜೋಷಿಯವರು ಬಹು ಪ್ರೀತಿಯಿಂದ ಮಾತನಾಡಿಸಿ ಹಾಡಿನ ವಿವರಗಳನ್ನು ಕೊಟ್ಟದ್ದಲ್ಲದೇ, ನಮ್ಮಿಬ್ಬರಿಗೂ ತಮ್ಮ ಕೈಯಾರೆ ಡಿಕಾಕ್ಷನ್, ಸಕ್ಕರೆ.ಹಾಲು ಬೆರೆಸಿ ಕಾಫಿ ಮಾಡಿಕೊಟ್ಟಿದ್ದರು. ಮರುದಿನದ ನನ್ನ ನಿರೂಪಣೆಯನ್ನು ಮೆಚ್ಚಿ “ಛಲೋ ಆತ್ರಿ” ಅಂತ ಕೊಂಡಾಡಿದ್ದಲ್ಲದೆ ಗ್ರೂಪ್ ಫೋಟೋಗೆ ನಿಂತಾಗ ಯಜಮಾನರನ್ನೂ ಕರೆಯಿರಿ ಅಂತ ವೇದಿಕೆಗೆ ಕರೆಯಿಸಿಕೊಂಡುದನ್ನು ಎಂದೂ ಮರೆಯೆ. ನನ್ನಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ತುಂಬಿದ, ತೃಪ್ತಿಯನ್ನು ಕೊಟ್ಟ ಕಾರ್ಯಕ್ರಮವದು. ಇಂದು ಸಭಾನಿರ್ವಹಣೆಯ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಶ್ರೀ ಮನೋಹರ ಪ್ರಸಾದ್ ಅವರು “ನಿಮ್ಮಂತೆ ನಾನೂ ಯಶಸ್ವೀ ಎಂ.ಸಿ ಆಗುವುದು ಯಾವಾಗ?” ಎಂದು ಆ ಕಾರ್ಯಕ್ರಮವನ್ನು ಆಲಿಸಿ ಕೇಳಿದ ನೆನಪು.

 ಇನ್ನೊಂದು ಸ್ಮರಣೀಯ ಕಾರ್ಯಕ್ರಮ 1995 ರಲ್ಲಿ ಮಂಗಳೂರಿನಲ್ಲಿ ನಡೆದ ವಿಶ್ವಕೊಂಕಣಿ ಸಮ್ಮೇಳನ. ಒಂದುವಾರಗಳ ಕಾಲ ನಡೆದ ಈ ಸಮ್ಮೇಳನದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳ ಸಭಾನಿರ್ವಹಣೆ ನಡೆಸಿದ್ದು ನಾನು ಮತ್ತು ನನ್ನ ಸಹೋದ್ಯೋಗಿ ಶ್ರೀಮತಿ ಕನ್ಸೆಪ್ಟಾ ಫೆರ್ನಾಂಡಿಸ್ ಅವರು. ಬಹು ದೊಡ್ಡ ಮಟ್ಟದಲ್ಲಿ ನಡೆದ ಈ ಸಮ್ಮೇಳನದ ಮೂರು ಬೃಹತ್ ಸಮಾನಾಂತರ ವೇದಿಕೆಗಳು, ಕಾರ್ಯಕ್ರಮ ಉದ್ಘಾಟಿಸಲು ಬಂದ ಕರ್ನಾಟಕ ರಾಜ್ಯದ ಆಗಿನ ಮುಖ್ಯ ಮಂತ್ರಿ ಶ್ರೀ ಎಚ್.ಡಿ.ದೇವೇಗೌಡರನ್ನು ಅದುವರೆಗೆ ಕೊಂಕಣಿ ಭಾಷೆಯಲ್ಲೇ ನಡೆಯುತ್ತಿದ್ದ ಸಭಾನಿರ್ವಹಣೆಯ ನಡುವೆ ನಾನು ಕಾರ್ಯಕ್ರಮ ಉದ್ಘಾಟಿಸುವಂತೆ ಕನ್ನಡ ಭಾಷೆಯಲ್ಲಿ ಅವರನ್ನು ಕೋರಿದಾಗ ನನ್ನನ್ನು ನೋಡಿ ನಗುತ್ತಾ “ನೀವೊಬ್ಬರಾದ್ರೂ ಸಧ್ಯ ಕನ್ನಡ ಮಾತನಾಡಿದಿರಲ್ಲ” ಎಂದು ಹೇಳಿದ್ದು, ಈ ಸಮಾರಂಭದ ನಮ್ಮ ಸಭಾನಿರ್ವಹಣೆಯನ್ನು ದೇಶವಿದೇಶಗಳಿಂದ ಬಂದ ಅತಿಥಿ, ಅಭ್ಯಾಗತರು ಮುಕ್ತಕಂಠದಿಂದ ಹೊಗಳಿದ್ದು ಎಲ್ಲವೂ ನೆನಪಿನಲ್ಲಿಟ್ಟುಕೊಳ್ಳುವಂಥದ್ದು. ನೃತ್ಯ ವಿದುಷಿ ಜಯಲಕ್ಷ್ಮೀ ಆಳ್ವ ಅವರ ಶಿಷ್ಯೆಯಂದಿರ ಆರಂಗ್ರೇಟಂಗೆ ಅತಿಥಿಯಾಗಿ ಬಂದಿದ್ದ ಖ್ಯಾತ ನೃತ್ಯವಿದುಷಿ ಪದ್ಮಾ ಸುಬ್ರಹ್ಮಣ್ಯಂ ಅವರು ನನ್ನ ನಿರೂಪಣಾ ಶೈಲಿಯನ್ನು ತುಂಬ ಮೆಚ್ಚಿಕೊಂಡು ನನ್ನ ಬಳಿ ಹುಡುಕಿಕೊಂಡು ಬಂದು ಮಾತನಾಡಿ ಹೋಗಿದ್ದರು. ಈ ಎಲ್ಲ ಪ್ರಶಂಸೆಗಳನ್ನೂ ನಾನು ಆಕಾಶವಾಣಿಗೇ ಅರ್ಪಿಸ ಬಯಸುತ್ತೇನೆ.

ನನ್ನ ನಿವೃತ್ತಿಯ ಅಂಚಿನ ಕೊನೆಕೊನೆಯ ಮೂರ್ನಾಲ್ಕು ವರ್ಷಗಳಲ್ಲಿ ನಾನು ಹಲವಾರು ನೇರ ಪ್ರಸಾರದ ಹೊರಾಂಗಣ ಕಾರ್ಯಕ್ರಮಗಳ ವೀಕ್ಷಕವಿವರಣೆಗಾರಳಾಗಿ ಭಾಗವಹಿಸಿದೆ. 2 -3 ಬಾರಿ ಮೂಡಬಿದಿರೆಯ ಆಳ್ವಾಸ್ ನುಡಿಸಿರಿ, ಅಡ್ಯಾರಿನಲ್ಲಿ ನಡೆದ ವಿಶ್ವ ತುಳು ಸಮ್ಮೇಳನ, ಕಟೀಲಿನಲ್ಲಿ ನಡೆದ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ತುಂಬೆಯಲ್ಲಿ ನಡೆದ ಅಬ್ಬಕ್ಕರಾಣಿ ಉತ್ಸವ, ಪುತ್ತೂರಿನಲ್ಲಿ ನಡೆದ ಕೃಷಿಯಂತ್ರ ಮೇಳ, ಕಾರ್ಕಳದ ಶ್ರೀ ಗೊಮ್ಮಟೇಶ್ವರನಿಗೆ ನಡೆದ ಮಹಾ ಮಸ್ತಕಾಭಿಷೇಕ ಸಮಾರಂಭಗಳ ನೇರಪ್ರಸಾರದ ವೀಕ್ಷಕವಿವರಣೆ ನೀಡುವ ಮೂಲಕ ಹೊಸ ಅನುಭವವನ್ನು ಪಡೆದೆ. ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡುವ ನಡುನಡುವೆ ವಿಶೇಷ ವ್ಯಕ್ತಿಗಳ ಸಂದರ್ಶನ, ವೇದಿಕೆಯ ಸುತ್ತಮುತ್ತಲ ಆಗುಹೋಗುಗಳ ಬಗ್ಗೆ ನೋಡನೋಡುತ್ತಲೇ ವಿವರಣೆ ನೀಡುವುದು ತುಂಬಾ ಛಾಲೆಂಜಿಂಗ್ ಎನ್ನಬಹುದಾದ ಕೆಲಸ. ಸರ್ವ ಶ್ರೀ ಚೆನ್ನವೀರ ಕಣವಿ, ಕೆ.ಎಸ್.ನಿಸಾರ್ ಅಹಮದ್, ಸಿ.ಎನ್.ರಾಮಚಂದ್ರನ್, ನಾ.ಡಿಸೋಜ, ಶಶಿಧರ ನರೇಂದ್ರ, ಮುನಿರಾಜ ರೆಂಜಾಳ, ಶ್ರೀಮತಿ ಹೇಮಾವತಿ ಹೆಗ್ಗಡೆ, ಧಾರವಾಡ, ಬೆಳಗಾಂ,ಗುಲ್ಬರ್ಗಾ ಕಡೆಗಳಿಂದ ಬಂದ ನೂರಾರು ಸಾಹಿತಿಗಳು, ಕಲಾವಿದರು – ಹೀಗೆ ಬಹಳಷ್ಟು ಮಂದಿಯನ್ನು ಮಾತಿಗೆಳೆದು ನೇರಪ್ರಸಾರಗೈದ ತೃಪ್ತಿ. ಹಿಂದೆ ತೂಕ ಮಾಡಿ, ಇಂತಿಷ್ಟೇ ಪದಗಳನ್ನು ಗಾಳಿಯಲ್ಲಿ ತೂರಿಬಿಡುತ್ತಿದ್ದ ನಾವು ಈಗ ಈ ನೇರಪ್ರಸಾರವೆಂಬ ರಾವಣನ ಹೊಟ್ಟೆ ತುಂಬಿಸಲು ಹರಕುಬಾಯಿ ದಾಸರಂತೆ ಮಾತನಾಡುತ್ತಲೇ ಹೋಗಬೇಕಾದ ಅನಿವಾರ್ಯತೆಯಿಂದಾಗಿ ಆಯಾ ಕಾರ್ಯಕ್ರಮಗಳ ಕುರಿತು ದಟ್ಟವಾದ ವಿಷಯ ಸಂಗ್ರಹ, ಆಳವಾದ ಅಧ್ಯಯನಗಳ ಜೊತೆಗೆ, ಅಂಕಿಅಂಶಗಳ ನಿಖರತೆಗಾಗಿ ಬಹಳಷ್ಟು ಶ್ರಮಪಡಬೇಕಾಯಿತು. ಒಂದು ಸಲ ಏನೂ ವಿಷಯ ತೋಚದೇ ಅಂದು ಮಧ್ಯಾನ್ಹ ಉಂಡಿದ್ದ ಊಟದ ಮೆನುವಿನಲ್ಲಿದ್ದ ದೇಸೀತನದ ಬಗ್ಗೆ ನನ್ನ ಸಹ ವೀಕ್ಷಕ ವಿವರಣೆಗಾರರೊಡನೆ ಹರಟಿದ್ದೆ ಕೂಡಾ.

 ಒಂದು ಕಾಲದಲ್ಲಿ ವಾತಾನುಕೂಲಿ ಕೋಣೆಯೊಳಗೆ ಹೇಳಿಕೊಟ್ಟದ್ದನ್ನು ಗಿಣಿಮರಿಯಂತೆ ಉಲಿಯುತ್ತಿದ್ದ ನಾವು, ಇದೀಗ ತೆರೆದ ಬಯಲಿನಲ್ಲಿ ಮೈಕನ್ನು ಹಿಡಿದು ಸದ್ದುಗದ್ದಲಗಳ ನಡುವೆ ಅವರಿವರನ್ನು ಗಬಕ್ಕನೆ ಹಿಡಿದು ಮಾತನಾಡಿಸುತ್ತಾ ಅಥವಾ ನಮ್ಮ ಮೊಬೈಲ್ ಮೂಲಕ ನೇರ ಪ್ರಸಾರದ ಕೊಠಡಿಗೆ ವೀಕ್ಷಕ ವಿವರಣೆಯನ್ನು ರವಾನಿಸುತ್ತ, ಅಥವಾ ಹೊರಾಂಗಣ ಪ್ರಸಾರಕ್ಕಾಗಿ ನಿರ್ಮಿಸಿದ ಗಾಜಿನ ತಾತ್ಕಾಲಿಕ ಸ್ಟುಡಿಯೋದೊಳಗೆ ಕುಳಿತು ಅಸಾಧ್ಯ ಸೆಖೆಗೆ ಬೆವರುತ್ತಾ ಮಾತಿನ ಬಂಡಿಯನ್ನೇರಿ ಸಾಗಿಬಂದ ಹಾದಿ ರೋಚಕವಾದದ್ದು, ವಿಸ್ಮಯಕಾರಿಯಾದದ್ದು, ಅದ್ಭುತವಾದದ್ದು ಮತ್ತು ಈ ಹಾದಿಯಲ್ಲಿ ನನ್ನನ್ನು ಮುನ್ನಡೆಸಿದ ನನ್ನ ಪ್ರೀತಿಯ ಆಕಾಶವಾಣಿಯ ಎಲ್ಲಾ ಪೂರ್ವಸೂರಿಗಳಿಗೆ, ನೇರಪ್ರಸಾರದ ಕಕ್ಷೆಯೊಳಗೆ ನನ್ನನ್ನು ಸೇರ್ಪಡಿಸಿದ ಡಾ.ವಸಂತ್ ಕುಮಾರ್ ಪೆರ್ಲ, ಹಿರಿಯಣ್ಣನಂತಿದ್ದ ಡಾ.ಸದಾನಂದ ಹೊಳ್ಳ ಹಾಗೂ ಸಲಹೆ, ಮಾರ್ಗದರ್ಶನಗಳ ಮೂಲಕ ಪ್ರೋತ್ಸಾಹವಿತ್ತ ಎಲ್ಲ ಸಹ ವೀಕ್ಷಕವಿವರಣೆಗಾರರಿಗೆ, ತಾಂತ್ರಿಕವಿಭಾಗದ ಎಲ್ಲ ಮಿತ್ರರಿಗೆ ನನ್ನ ಹೃದಯ ತುಂಬಿದ ವಂದನೆಗಳು.

ಮುಂದಿನ ವಾರಕ್ಕೆ  

Leave a Reply

Your email address will not be published. Required fields are marked *

*

code

Don\'t COPY....Please Share !