ಸಾಮಾಜಿಕ ಕಾರ್ಯಕರ್ತರೋ … ನಕಲಿ ಎನ್‌ಕೌಂಟರ್ ಸ್ಪೆಶಲಿಷ್ಟ್‌ಗಳೋ?

ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳು ಆಳುವ ಪಕ್ಷದ ಮುಖವಾಣಿಗಳಾಗಿ ತಮ್ಮ ಜವಾಬ್ದಾರಿಯನ್ನೇ ಮರೆತಿರುವ ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಬಲ ಅಸ್ತ್ರಗಳಾಗಿ ಬದಲಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ನಿತ್ಯದ ಆಗುಹೋಗುಗಳಿಗೆ ಕ್ಷಣಮಾತ್ರದಲ್ಲಿ ಸ್ಪಂದಿಸುವ ಅವಕಾಶ, ಆ ಸ್ಪಂದನೆ ಕೆಲವೇ ಸೆಕೆಂಡುಗಳೊಳಗೆ ಜಗತ್ತಿನ ಯಾವ ಮೂಲೆಗೂ ತಲುಪುವ ಕ್ಷಮತೆ, ತಲುಪಿದವರಿಗೆಲ್ಲಾ ಪರ ಅಥವಾ ವಿರೋಧ ಅಭಿಪ್ರಾಯ ದಾಖಲಿಸುವ ಮುಕ್ತ ಅವಕಾಶ – ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿದೆ. ಆದರೆ ಕೆಲವೊಂದು ವಿಷಯಗಳನ್ನು ಕೂಲಂಕುಷವಾಗಿ ಗಮನಿಸಿದಾಗ ಸಾಮಾಜಿಕ ಜಾಲತಾಣಗಳ ವೈಶಿಷ್ಟ್ಯಗಳೇ ಅದರ ದುರ್ಬಳಕೆಯ ಹಿಂದಿನ ಕಾರಣಗಳೇನೋ ಎಂಬ ಗುಮಾನಿ ಕಾಡುತ್ತಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಬಂದ ಸಂದೇಶಗಳನ್ನು ನಿಜವೆಂದು ನಂಬಿ ಈ ದೇಶದಲ್ಲಿ ನಡೆದ ದೊಂಬಿ ಗಲಾಟೆಗಳು, ಅದರಿಂದ ಉಂಟಾದ ಪ್ರಾಣ ಹಾನಿ, ಫೇಸ್ಬುಕ್ ಮುಖಾಂತರ ವ್ಯಾಪಕವಾಗಿ ಹಬ್ಬಿ ಅವಾಂತರ ಸೃಷ್ಟಿಸಿದ ಸುಳ್ಳುಸುದ್ದಿಗಳು, ಇತಿಹಾಸ ತಿರುಚುವಿಕೆ ಇತ್ಯಾದಿಗಳನ್ನು ಗಮನಿಸಿದಾಗ ನನಗನಿಸುತ್ತೆ – ಸಾಮಾಜಿಕ ಜಾಲತಾಣವೆಂಬುದು, ಕ್ಷೌರಕತ್ತಿಯಂತೆ – ಕ್ಷೌರಿಕನ ಕೈಯಲ್ಲಿದ್ದರೆ ಮುಖದ ಅಂದ ಹೆಚ್ಚಿಸುತ್ತದೆ, ಕೊಲೆಗಡುಕನ ಕೈ ಸೇರಿದರೆ ಗಂಟಲನ್ನು ಸೀಳುತ್ತದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಮಂಗಳೂರಿನ ಯುವಸಮುದಾಯಗಳ ನಡುವೆ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ಪ್ರಕರಣಗಳ ಕುರಿತು ಖ್ಯಾತ ಕೊಂಕಣಿ ಸಾಹಿತಿ/ ವಿಮರ್ಷಕ ಎಚ್ಚೆಮ್ ಪೆರ್ನಾಲ್ ಅವರ ಜತೆ ಚರ್ಚಿಸುತ್ತಿರುವಾಗ ಅವರು ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದರು. “ನಮ್ಮೂರಲ್ಲಿ ಸಾಮಾಜಿಕ ಜಾಲತಾಣಗಳನ್ನು ಧ್ವೇಶ ಬಿತ್ತಲು ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗೇ ಮುಂದುವರಿದರೆ ಉತ್ತರಭಾರತದ ರಾಜ್ಯಗಳಲ್ಲಿ ಕಾಣುತ್ತಿರುವ Mob Culture ಇಲ್ಲಿಗೂ ಒಂದು ದಿನ ಕಾಲಿಡಬಹುದು. ಹಾಗೊಂದು ವೇಳೆ ಆದರೆ ಅದು ನಮ್ಮ ಕಾಲದ ಅತೀ ದೊಡ್ಡ ದುರಂತವಾಗಲಿದೆ.”

ಅವರು ಅಂದು ವ್ಯಕ್ತಪಡಿಸಿದ್ದ ಆತಂಕ ಇಂದು ವಾಸ್ತವರೂಪ ತಳೆಯುತ್ತಿದೆಯೆನೋ ನನಗನಿಸುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಸೌರಾಜ್ ಮಂಗಳೂರು ಬ್ಯಾನರ್ ಪ್ರಕರಣ. ಸೌರಾಜ್ ಮಂಗಳೂರು ಬೆಳಕಿಗೆ ಬಂದದ್ದು ಸ್ವಚ್ಛ ಮಂಗಳೂರು ಎಂಬ ಅಭಿಯಾನದ ಮೂಲಕ ಎಂಬುದು ಎಲ್ಲರಿಗೆ ತಿಳಿದೇ ಇರುವ ವಿಷಯ. ಆದರೆ ಅದರ ಅಸಲಿ ಜಾಡನ್ನು ಹುಡುಕಿದರೆ, ಅದು ಶುರು ಮಾಡಿದ್ದು ಅವರಲ್ಲ, ಬದಲು ರಾಮಕೃಶ್ಣ ಮಿಶನ್ ಸಡೆಸುತ್ತಿದ್ದ ಅಭಿಯಾನದಲ್ಲಿ ಸ್ವಯಂ ಸೇವಕನಾಗಿ ಸೇರಿದ ಅವರು ಕ್ರಮೇಣ ಅದನ್ನು ತನ್ನದೇ ಮಿಶನ್ ಎಂಬಂತೆ ಬಿಂಬಿಸಿ ಪ್ರಚಾರಕ್ಕೆ ಬಂದರು. ಇದಕ್ಕೆ ಅವರು ಬಳಸಿಕೊಂಡದ್ದು ಫೇಸ್ಬುಕ್ ಜಾಲತಾಣವನ್ನು! ರಾಮಕೃಷ್ಣ ಮಿಶನ್ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯ ಮಾಡಿ ಶುಚಿಗೊಳಿಸಿದ ಜಾಗದಲ್ಲಿ ಯಾರೋ ದುಷ್ಕರ್ಮಿಗಳು ಮತ್ತೆ ಕಸ ತಂದು ಹಾಕಿದಾಗ ಅದನ್ನು ಫೇಸ್ಬುಕ್ ಲೈವ್ ಮುಖಾಂತರ ಎಲ್ಲರಿಗೂ ತೋರಿಸಿ ಮತ್ತೆ ಆ ಜಾಗವನ್ನು ಸ್ವಚ್ಛ ಮಾಡಿ ‘ಇನ್ನು ಮುಂದೆ ಇಲ್ಲಿ ಕಸ ಹಾಕಿದರೆ ಇನ್ನು ಅದನ್ನು ನಿಮ್ಮ ಮನೆ ಬಾಗಿಲಿಗೆ ತಂದು ಹಾಕುತ್ತೇವೆ’ ಎಂಬ ಎಚ್ಚರಿಕೆ ರವಾನಿಸಿದರು. ನಮ್ಮ ಜನ ಥ್ರಿಲ್ ಇಷ್ಟಪಡುತ್ತಾರೆ. ಅದರಲ್ಲೂ ವಿದೇಶಗಳಲ್ಲಿ ನೆಲೆಸಿರುವ ಊರಿನ ಅನಿವಾಸಿ ಬಾಂಧವರಿಗಂತೂ ವಿದೇಶದಲ್ಲಿ ಕೂತು ಊರಿನ ಬಗ್ಗೆ ಇಂತದ್ದೊಂದು ಸೆಂಟಿಮೆಂಟಲ್ ವೀಡಿಯೋ ನೋಡಿದಾಗ ಅದು ಇನ್ನಷ್ಟು ಥ್ರಿಲ್ ಕೊಡುತ್ತೆ! ಹಾಗಾಗಿ ಅವರು ಅದನ್ನು ಹಿಂದು ಮುಂದು ನೋಡದೆ ಮೆಚ್ಚಿಕೊಂಡರು, ಹಂಚಿಕೊಂಡರು. ಇದು ಎಲ್ಲಿಯ ಮಟ್ಟಿಗೆ ಬೆಳೆಯಿತೆಂದರೆ ಸೌರಾಜ್ ಇಲ್ಲದಿದ್ದರೆ ಇಡೀ ಮಂಗಳೂರು ನಗರವೇ ಕಸದ ತೊಟ್ಟಿಯಾಗುತಿತ್ತು ಎಂಬ ರೀತಿ ಜನರು ವರ್ತಿಸತೊಡಗಿದರು, ಒಂದು ದಿನದ ಸೇವಾಕಾರ್ಯಕ್ಕೆ ಒಂದು ವಾರದ ಪ್ರಚಾರ ಸಿಗಲಾರಂಭವಾಯ್ತು. ಸೌರಾಜ್ ದಾರಿತಪ್ಪಿದ್ದು ಇಲ್ಲೇ ಎಂದು ನನಗನಿಸುತ್ತದೆ.

ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ತೊಂಬತ್ತರ ದಶಕದ ಮುಂಬಯಿ ಭೂಗತ ಜಗತ್ತಿನ ಬಗ್ಗೆ ತಿಳಿದುಕೊಳ್ಳಬೇಕು. ವಾಣಿಜ್ಯ ನಗರಿಯಲ್ಲಿ ಮಾಫಿಯಾ ಡಾನ್ ಗಳ ಹಾವಳಿ ಮಿತಿ ಮೀರಿ ಹೋಗಿ, ಅಲ್ಲಲ್ಲಿ ಗ್ಯಾಂಗ್ ವಾರ್ ಗಳು ಆಗುತ್ತಿದ್ದ ಕಾಲವದು. ಅಲ್ಲಿಯವರೆಗೆ ಸ್ಮಗ್ಲಿಂಗ್ ಮಾಡಿಕೊಂಡಿದ್ದ ಚಿಲ್ಲರೆ ರೌಡಿಗಳೂ ಕೈಯಲ್ಲೊಂದು ರಿವಾಲ್ವರ್ ಹಿಡಿದುಕೊಂಡು ಡಾನ್ ಗಳಾಗಿ ಹಾಡುಹಗಲಿನಲ್ಲೇ ರಸ್ತೆಯಲ್ಲಿ ಹೆಣಗಳು ಬೀಳಲು ಶುರುವಾಗಿ ಪೊಲೀಸ್ ಇಲಾಖೆಗೆ ನಿತ್ಯದ ಕಿರಿಕಿರಿಯಾದಾಗ ಅದನ್ನು ಮಟ್ಟಹಾಕಲೆಂದೇ ಸ್ಪೆಷಲ್ ಕ್ರೈಂ ಬ್ರಾಂಚ್’ನ ಉಗಮವಾಯಿತು. ರೌಡಿಗಳನ್ನು ಬಂಧಿಸಿ ಜೈಲಿಗಟ್ಟಿದರೆ ರಾಜಕೀಯ ಸಂಪರ್ಕ ಬಳಸಿ ಸುಲಭವಾಗಿ ಹೊರಬರುತಿದ್ದರು ಮಾತ್ರವಲ್ಲ ತನ್ನನ್ನು ಬಂಧಿಸಿದ ಅಧಿಕಾರಿಯ ಮೇಲೆ ಸೇಡು ತೀರಿಸಿಕೊಳ್ಳುತಿದ್ದರು. ಆಗ ಇಲಾಖೆಗೆ ಹೊಳೆದ ಸುಲಭ ಹಾಗೂ ಶಾಶ್ವತ ಪರಿಹಾರವೇ – ಎನ್’ಕೌಂಟರ್! ಇದು ವ್ಯಾಪಕ ಪ್ರಶಂಸೆಯನ್ನು ಪಡೆಯಿತು ಮಾತ್ರವಲ್ಲ, ಅಲ್ಲಿಯವರೆಗೆ ಹಾಡುಹಗಲು ಆರಾಮವಾಗಿ ತಿರುಗುತ್ತಿದ್ದ ಡಾನ್ ಗಳೆಲ್ಲಾ ಭೂಗತರಾಗಿ ಬಿಲಗಳನ್ನು ಸೇರಿಕೊಳ್ಳುವಂತಾಯಿತು. ಆದರೆ ಕ್ರಮೇಣ ಇದಕ್ಕೂ ಕಳಂಕ ಮೆತ್ತಿಕೊಂಡಿತು. ಎದುರಾಳಿಯನ್ನು ತಾನು ಕೊಂದರೆ, ಅಥವಾ ಕೊಲ್ಲಲು ಇನ್ನೊಬ್ಬನಿಗೆ ಸುಪಾರಿ ಕೊಟ್ಟರೆ ಕಾನೂನು ಕುಣಿಕೆ ತನ್ನ ಕೊರಳಿಗೆ ಬಿಗಿದುಕೊಳ್ಳುತ್ತೆ, ಆದರೆ ಅದೇ ಎದುರಾಳಿ ಪೊಲೀಸ್ ಗುಂಡಿನಿಂದ ಸತ್ತರೆ ಎದುರಾಳಿಯ ಕಥೆಯೂ ಮುಗಿಯುತ್ತದೆ, ಕಾನೂನಿನ ತೊಂದರೆಯೂ ಇಲ್ಲ. ಹಾಗಾಗಿ ಡಾನ್’ಗಳು ಎನ್ ಕೌಂಟರ್ ಲೈಸೆನ್ಸ್ ಇರುವ ಪೊಲೀಸ್ ಅಧಿಕಾರಿಗಳಿಗೆ ಕಾಂಟ್ರ್ಯಾಕ್ಟ್ ಕೊಡಲು ಶುರುಮಾಡಿದರು. ತಮಗೆ ನೀಡಿರುವ ವಿಶೇಷ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಕೆಲವು ಅಧಿಕಾರಿಗಳು ಡಾನ್ ಗಳಿಂದ ದುಡ್ಡು ಪಡೆದು ಅವನು ಹೇಳಿದ ರೌಡಿಯನ್ನು ಎನ್’ಕೌಂಟರ್ ಮಾಡಿ ಮುಗಿಸುವ ಹೊಸ ಟ್ರೆಂಡ್ ಹುಟ್ಟಿಕೊಂಡಿತು!

ಮಂಗಳೂರಿನಲ್ಲಿ ಕೆಲವು ಸಮಯದ ಹಿಂದೆ ಅವರು ಹಾಕಿದ ಬ್ಯಾನರ್ ಇವರು ಹರಿಯುವುದು, ಇವರು ಹಾಕಿದ್ದನ್ನು ಅವರು ಹರಿಯುವುದು ಚಾಲ್ತಿಯಲ್ಲಿತ್ತು. ಇದರಿಂದಾಗಿ ಆಗಾಗ ಗುಂಪು ಘರ್ಷಣೆಗಳು, ಹೊಡೆದಾಟ ಇತ್ಯಾದಿಗಳಾಗುತಿತ್ತು. ಕೊನೆಗೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ರಾಜಿ ಸಂಧಾನದಲ್ಲಿ ಕೊನೆಗೊಳ್ಳುತಿತ್ತು. ಆದರೆ ಯಾರು ಎಷ್ಟೇ ಪ್ರಯತ್ನ ಪಟ್ಟರೂ ಇದರ ಹಿಂದಿರುವ ಕಾಣದ ಕೈಗಳ ಹೆಸರು ಅಲ್ಲಲ್ಲಿ ಬಹಿರಂಗಗೊಂಡು ಅವರಿಗೆ ಮುಜುಗರ ಉಂಟುಮಾಡುತಿತ್ತು, ನಾಲ್ಕು ಜನರ ಎದುರಿಗೆ ಸೌಹಾರ್ದತೆಯ ಭಾಷಣ ಬಿಗಿಯುವ ನಾಯಕರ ಅಸಲಿ ಮುಖಗಳು ಬೆಳಕಿಗೆ ಬರುತಿದ್ದವು. ಸೌರಾಜ್’ರ ‘ಕಸ’ದ ವೀಡಿಯೋಗಳು ಅವರಿಗೆ ತಂದುಕೊಟ್ಟ ಜನಪ್ರಿಯತೆಯನ್ನು ತಂದುಕೊಡುತ್ತಿರುವಾಗಲೇ ಅದನ್ನು ದುರ್ಬಳಕೆ ಮಾಡಿಕೊಳ್ಳಲು ಹೊಂಚಹುಹಾಕಿ ಕಾಯುತ್ತಿದ್ದ ಯಾರೋ ನಾಯಕರು ಅವರನ್ನು ಕರೆದು ಕಾಂಟ್ರ್ಯಾಕ್ಟ್ ಕೊಟ್ಟಂತೆ ಸೌರಾಜ್ ಕಸವನ್ನು ಬಿಟ್ಟು ಬ್ಯಾನರ್’ಗಳ ಕಡೆಗೆ ವಾಲಿದರು. ಬ್ಯಾನರ್ ಪ್ಲೆಕ್ಸ್ ಬೋರ್ಡ್’ಗಳನ್ನು ಕಿತ್ತು ಹಾಕಿ ವೀರಾವೇಶದಿಂದ ವಿಡಿಯೋಗಳನ್ನು ಹಂಚಿಕೊಳ್ಳಲು ಶುರುಮಾಡಿದರು. ಇದೂ ವ್ಯಾಪಕ ಪ್ರಶಂಸೆಗೊಳಗಾಯಿತು. ಅದರೆ, ಬ್ಯಾನರ್, ಫ್ಲೆಕ್ಸ್’ಗಳನ್ನು ಕಿತ್ತು ಹಾಕುವುದರಲ್ಲಿ ಸೌರಾಜ್ ಯಾಕೆ ಅಷ್ಟೊಂದು ಚ್ಯೂಸಿಯಾಗಿರುತ್ತಾರೆ? ಬಹುತೇಕ ಒಂದು ವಿಚಾರೆಧಾರೆಗೆ ಒಳಪಡುವ ವ್ಯಕ್ತಿ, ಪಕ್ಷಗಳಿಗೆ ಸಂಬಂಧ ಪಟ್ಟ ಬ್ಯಾನರ್ ಗಳನ್ನು ಮಾತ್ರ ಯಾಕೆ ಕೀಳುತ್ತಾರೆ? ಎಂದು ಕೆಲವು ಪ್ರಜ್ಞಾವಂತರು ಪ್ರಶ್ನಿಸಿದರೂ ಸೌರಾಜ್ ಜನಪ್ರಿಯತೆಯ ಮುಂದೆ ಈ ಪ್ರಶ್ನೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ, ‘ನಾನೇನು ಎಲ್ಲಾ ಫ್ಲೆಕ್ಸ್’ಗಳನ್ನು ಕಿತ್ತು ಹಾಕುವ ಕಾಂಟ್ರ್ಯಾಕ್ಟ್ ಪಡೆದಿದ್ದೇನೆಯೇ?’ ಎಂದು ಮರು ಪ್ರಶ್ನಿಸಿ ಸೌರಾಜ್ ಅವರೂ ನುಣುಚಿಕೊಂಡರು. ‘ಹಾಗಾದರೆ ನೀವು ಕೆಲವೇ ಕೆಲವು Selected ಬ್ಯಾನರ್’ಗಳನ್ನು ಮಾತ್ರ ಕಿತ್ತು ಹಾಕುವ ಕಾಂಟ್ರ್ಯಾಕ್ಟ್ ಪಡೆದುಕೊಂಡಿದ್ದೀರಾ?’ ಎಂದು ಅವರನ್ನು ಮರುಪ್ರಶ್ನಿಸುವ ಧೈರ್ಯವನ್ನೂ ಯಾರೂ ತೋರಿಸಲಿಲ್ಲ! ಅವರು ಸ್ವಚ್ಚತಾ ಕಾರ್ಯದಲ್ಲಿ ಗುರುತಿಸಿಕೊಳ್ಳಲು ಮೂಲ ಕಾರಣರಾದ ರಾಮಕೃಷ್ಣ ಮಿಶನ್’ನಿಂದಲೇ ಸೌರಾಜ್ ಹೊರದಬ್ಬಲ್ಪಟ್ಟಿದ್ದಾರೆ ಎಂಬ ವಿಚಾರ ಕೂಡಾ ಅವರನ್ನು ಬೆಂಬಲಿಸುವ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಈಗ ಪೊಲೀಸ್ ಠಾಣೆಯ ಮೆಟ್ಟಲೇರುವ ಬ್ಯಾನರ್ – ಬಂಟಿಂಗ್ ಪ್ರಕರಣಗಳ ಸಂಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಮೊನ್ನೆ ಸೌರಾಜ್ ಅವರು ಕನ್ಹಯ್ಯ ಕುಮಾರ್ ಬ್ಯಾನರ್’ಗಳನ್ನು ಹರಿದು ಹಾಕಿದ ವೀಡಿಯೋ ನೋಡಿದ ನಂತರ ಮಾತ್ರ ಮಂಗಳೂರಿನ ಜಾಲತಾಣ ಇಭ್ಭಾಗವಾಗಿದೆ. ವಾಟ್ಸಾಪ್ ಮೆಸೇಜ್ ಗಳನ್ನು ನಂಬಿಕೊಂಡು ದೇಶದ ಏಕತೆಯ ಬಗ್ಗೆ ಚರ್ಚೆ ಮಾಡುವವರು ಒಂದು ಕಡೆ, ದೇಶದ ಇತಿಹಾಸ, ಪರಂಪರೆಯನ್ನು ತಿಳಿದುಕೊಂಡು ದೇಶದ ಏಕತೆಯ ಬಗ್ಗೆ ಅರಿವು ಮೂಡಿಸಿಕೊಂಡವರು ಮತ್ತೊಂದು ಕಡೆ. ಸೌರಾಜ್ ವಿಡಿಯೋ ನೋಡಿದ ಯಾರಿಗೂ ತಿಳಿಯುತ್ತದೆ, ಅವರಿಗೆ ಬ್ಯಾನರ್’ಗಿಂತ ಬ್ಯಾನರ್,ನಲ್ಲಿ ಇರುವವರ ಬಗ್ಗೆ ಹೆಚ್ಚು ಕೋಪವಿತ್ತೆಂದು! ಒಬ್ಬ ಸಮಾಜ ಸೇವಕ ಎಂದು ಕರೆದುಕೊಳ್ಳುವವನಿಗೆ ಮೊತ್ತಮೊದಲು ತನ್ನ ನಡವಳಿಕೆಯ ಮೇಲೆ, ಭಾಷಾ ಪ್ರಯೋಗದ ಮೇಲೆ ಹಿಡಿತವಿರಬೇಕು. ತನ್ನ ನಡವಳಿಕೆಯನ್ನು ನೋಡಿ ಅದನ್ನು ಕೆಲವಷ್ಟು ಜನರಾದರೂ ಅನುಸರಿಸುತ್ತಾರೆ ಎಂಬ ಸಾಮಾನ್ಯ ಪ್ರಜ್ಞೆ ಇರಬೇಕು. ಆದರೆ ಮೊನ್ನೆ ಸೌರಾಜ್ ಹಾಕಿರುವ ವೀಡಿಯೋದಲ್ಲಿ ಇದ್ಯಾವುದೂ ಇರಲಿಲ್ಲ. ಇದ್ದದ್ದು ಬರೀ ಬರೀ ಆಕ್ರೋಶ, ಕೆಟ್ಟ ಭಾಷೆ ಅಷ್ಟೇ!

ಕನಯ್ಯ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ವೀಡಿಯೊ ನಕಲಿ, ಅದನ್ನು ತಿರುಚಲಾಗಿದೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಷಯ. ಆದರೂ ಕನ್ಹಯ್ಯ ವಿರೋಧಿಗಳು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಒಪ್ಪಿಕೊಂಡರೆ ಕನ್ಹಯ್ಯ ವಿರುಧ್ಧ ಅವರಿಗಿರುವ ಏಕೈಕ ಆಯುಧ ಅವರ ಕೈತಪ್ಪಿದಂತಾಗಿ ಕನ್ಹಯ್ಯರ ವಿಚಾರಗಳಿಂದ ಎದುರಿಸಬೇಕಾಗುತ್ತದೆ, ಅದು ಅವರಿಂದ ಈ ಜನ್ಮದಲ್ಲಿ ಸಾಧ್ಯವಿಲ್ಲದ ಮಾತು! ಅದಕ್ಕೇ ಆ ವೀಡಿಯೋ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಇಂದಿಗೂ ತನ್ನ ಬೆಲೆ ಕಳೆದುಕೊಂಡಿಲ್ಲ. ಆದರೆ ತಾನೊಬ್ಬ ಸಮಾಜಸೇವಕ ಎಂದು ಕರೆದುಕೊಳ್ಳುವ ಸೌರಾಜ್’ರಿಗೆ ಈ ವಾಟ್ಸಾಪ್ ಯುನಿವರ್ಸಿಟಿಯನ್ನು ಅನುಸರಿಸುವ ಅನಿವಾರ್ಯತೆ ಏನಿತ್ತು? ಸಾಮಾನ್ಯ ಜನರಿಗಾದರೆ ಕಾನೂನು ವ್ಯವಸ್ಥೆಯ ಬಗ್ಗೆ ಅಷ್ಟು ಜ್ಞಾನವಿರಲಿಕ್ಕಿಲ್ಲ, ಆದರೆ ತನ್ನನ್ನು ತಾನು ಸಮಾಜ ಸೇವಕ ಎಂದು ಕರೆದುಕೊಳ್ಳುವವನು ದೇಶದ ಅತ್ಯುನ್ನತ ನ್ಯಾಯಪೀಠವನ್ನು ವಿರೋಧಿಸಬಹುದೇ? ಸಂಶಯಿಸಹುದೇ? ಹೌದೆಂದಾದರೆ ತನ್ನ ಮೇಲೆ ನ್ಯಾಯಾಂಗ ನಿಂದನೆಯ ಆರೋಪ ಬರಬಹುದೆಂಬ ಅರಿವು ಆತನಿಗಿಲ್ಲವೇ? ಇಲ್ಲವೆಂದಾದರೆ, ಸುಪ್ರೀಂ ಕೋರ್ಟ್’ನಿಂದ ಕ್ಲೀನ್ ಚಿಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ ಒಬ್ಬ ಜನನಾಯಕನ ಮೇಲೆ ಸಾರ್ವಜನಿಕವಾಗಿ ಅದೇ ಆರೋಪವನ್ನು ಮತ್ತೆ ಹೊರಿಸಿ ಅವರ ತೇಜೋವಧೆ ಮಾಡಿದಂತಾಗುವುದಿಲ್ಲವೇ?

ಸೌರಾಜ್ ನ ಈ ಕೃತ್ಯವನ್ನು ವಿರೋಧಿಸಿ ಖ್ಯಾತ ಕನ್ನಡ ಕೊಂಕಣಿ ಕವಿ, ಗೀತೆರಚನೆಕಾರ ವಿಲ್ಸನ್ ಕಟೀಲ್ ಹಾಗೂ DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಇವರು ಹಾಕಿದ ಫೇಸ್ಬುಕ್ ಪೋಸ್ಟ್’ಗಳಿಗೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ಸೌರಾಜ್ ನನ್ನು ಬೆಂಬಲಿಸಿ ಬರೆದ ಎಲ್ಲರದೂ ಅದೇ ಭಾಷೆ – *ಳಿಮಗ ಸಾಬಿ, *ಳೆಮಗ ಪೊರ್ಬು! ಅದು ಬಿಟ್ಟರೆ ಒಂದೇ ಒಂದು ವೈಚಾರಿಕ ಮಾತಿಲ್ಲ. ಬ್ಯಾನರ್ ಹರಿದು ಹಾಕಿದ ವೀಡಿಯೋದಲ್ಲಿ ಸೌರಾಜ್ ಬಳಸಿದ ಭಾಷೆ, ಅವರ ಹಾವಭಾವ ಮತ್ತು ನಾನು ಮೇಲೆ ಉಲ್ಲೇಖಿಸಿದ ಪೋಸ್ಟ್’ಗಳಿಗೆ ಪ್ರತಿಕ್ರಿಯಿಸಿದವರು ಬಳಸಿದ ಭಾಷೆ, ಅವರ ನಡವಳಿಕೆ ಒಂದಕ್ಕೊಂದು ಸ್ಪಷ್ಟವಾಗಿ ತಾಳೆಯಾಗುತ್ತಿವೆ – ಇದು ಬರೀ ಕಾಕತಾಳೀಯ ಎನ್ನಲಾಗುವುದಿಲ್ಲ.

ಇರಲಿ, ವಿಚಾರಗಳ ಚರ್ಚೇಯನ್ನು ಬಿಟ್ಟು ಬ್ಯಾನರ್ ಚಳುವಳಿಯ ಕುರಿತು ಇನ್ನೊಂದಿಷ್ಟು ಹೇಳುವುದಿದೆ. ಯಾವುದೇ ಕಾರ್ಯಕ್ರಮದ ಆಯೋಜಕರು ತಮ್ಮ ಕಾರ್ಯಕ್ರಮಗಳ ಬ್ಯಾನರ್ ಕಟ್ಟುವಾಗ ತಮ್ಮ ಇಚ್ಛಾಪ್ರಕಾರ ಕಟ್ಟುವುದಿಲ್ಲ. ಮಹಾನಗರಪಾಲಿಕೆಯಿಂದ ಲಿಖಿತ ಅನುಮತಿ ಪಡೆದೇ ಕಟ್ಟುತ್ತಾರೆ. ಈ ಲಿಖಿತ ಅನುಮತಿಯ ನಿಯಮಗಳಂತೆ ಕಾರ್ಯಕ್ರಮ ಮುಗಿದ ನಂತರ ಅವುಗಳನ್ನು ತೆಗೆಯುವುದಕ್ಕೂ ಕಾರ್ಯಕ್ರಮದ ಆಯೋಜಕರೇ ಜವಾಬ್ದಾರರು. ಆದರೆ ಇಲ್ಲಿ ಸೌರಾಜ್ ವೀಡಿಯೋ ಮಾಡಿದಾಗ ಕಾರ್ಯಕ್ರಮ ಮುಗಿಯುವ ಮಾತು ಬಿಡಿ, ಕನ್ಹಯ್ಯ ಇನ್ನೂ ಮಂಗಳೂರಿಗೆ ಕಾಲಿಟ್ಟಿರಲಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ಮಂಗಳೂರು ತುಂಬಾ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಹಲವಾರು ಬ್ಯಾನರ್ ಗಳಿದ್ದವು, ಅಷ್ಟೊಂದು ಅವಸರದಿಂದ ಕನ್ಹಯ್ಯರ ಬ್ಯಾನರ್ ಮಾತ್ರ ಕಿತ್ತು ಹಾಕುವ ದರ್ದು ಸೌರಾಜ್’ಗೆ ಏನಿತ್ತು? ಅಂತ ಅವರೇ ಹೇಳಬೇಕು. ‘ಕಾರ್ಯಕ್ರಮ ಮುಗಿದ ಮೇಲೆ ಆಯೋಜಕರು ಬ್ಯಾನರ್ ತೆಗೆಯದೇ ಹಾಗೇ ಬಿಡುತ್ತಾರೆ, ಹಾಗಾಗಿ ಕಾರ್ಯಕ್ರಮ ಮುಗಿಯುವ ಮೊದಲೇ ನಾವು ಅದನ್ನು ಕಿತ್ತಾಕಿ ಅವರಿಗೆ ಎಚ್ಚರಿಕೆ ಕೊಡುತ್ತೇವೆ’ ಎಂಬ ಜಾಣ ಸಮರ್ಥನೆಯನ್ನು ಸೌರಾಜ್ ಹಾಗೂ ಆತನ ಬೆಂಬಲಿಗರು ಕೊಡಬಹುದು. ಒಂದು ವೇಳೆ ಆಯೋಜಕರು ಕಾರ್ಯಕ್ರಮ ಮುಗಿದ ಮೇಲೆ ಬ್ಯಾನರ್ ತೆಗೆಯುದಿಲ್ಲವೆಂದು ನೀವು ಕಾರ್ಯಕ್ರಮ ಆರಂಭವಾಗುದಕ್ಕೂ ಮೊದಲೇ ಅದನ್ನು ಕಿತ್ತಾಕುವುದಾದರೆ ಮಂಗಳೂರಿನ ವ್ಯಾಪ್ತಿಯೊಳಗೆ ಬರುವ ಪ್ರತೀ ಬ್ಯಾನರ್’ಗೂ ನೀವು ಅದೇ ಗತಿ ಕಾಣಿಸಬೇಕಲ್ಲವೆ? ಅದು ನಿಮಗೆ ಸಾಧ್ಯವಿಲ್ಲದಿದ್ದರೆ Selected ಬ್ಯಾನರ್’ಗಳನ್ನಷ್ಟೇ ಹರಿದುಹಾಕುವ ಕೆಟ್ಟಚಾಳಿಯನ್ನು ಬಿಟ್ಟುಬಿಡಬೇಕು. ಯಾಕೆಂದರೆ ನೀವು ನಿಜವಾಗಿ ಪರಿಸರ ಕಾಳಜಿ ಉಳ್ಳವರಾಗಿದ್ದರೂ ಕೂಡಾ ನೀವು ಒಂದೆರಡು ಬ್ಯಾನರ್’ಗಳನ್ನು ಕಿತ್ತಾಕುವುದರಿಂದ ನಿಮಗೆ ಒಂದಿಷ್ಟು ಪ್ರಚಾರ ಸಿಗಬಹುದೇ ಹೊರತು ನೀವು ಹೆಚ್ಚೇನೂ ಸಾಧಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಬ್ಯಾನರ್ ಕುರಿತು ನಿಮ್ಮ ಕಾಳಜಿ ನಿಜವಾಗಿದ್ದರೆ ಕಾರ್ಯಕ್ರಮದ ಆಯೋಜಕರಿಗೆ ಬ್ಯಾನರ್ ಹಾಕಲು ಅನುಮತಿ ನೀಡುವಾಗ ಅವರಿಂದ ಒಂದು ನಿರ್ದಿಷ್ಟ ಮೊತ್ತವನ್ನು ಠೇವಣಿ ಇರಿಸಿಕೊಂಡು ಕಾರ್ಯಕ್ರಮ ಮುಕ್ತಾಯವಾದ ನಂತರ ನಿಗದಿತ ಅವಧಿಯೊಳಗೆ ಆಯೋಜಕರು ಬ್ಯಾನರ್’ಗಳನ್ನು ತೆಗೆಯದಿದ್ದರೆ ಆ ಠೇವಣಿಯನ್ನು ಪಾಲಿಕೆ ಬಳಸಿಕೊಳ್ಳುವ ನಿಯಮವೊಂದನ್ನು ರೂಪಿಸುವಂತೆ ಮಾಡಲು ಪಾಲಿಕೆಯ ಮೇಲೆ ಒತ್ತಡ ಹೇರುವ ಕೆಲಸ ಮಾಡಿ. ಇದನ್ನು ಮಾಡಿಬಿಟ್ಟರೆ ಪ್ರತೀ ಬಾರಿ ಬ್ಯಾನರ್ ಗಳನ್ನು ಹರಿದು ಹಾಕುವ ಶ್ರಮದಿಂದ ನಿಮಗೂ ಮುಕ್ತಿ, ಬ್ಯಾನರ್ ನ ಕಸದಿಂದ ಮಂಗಳೂರಿಗೂ ಮುಕ್ತಿ, ನೀವು ಬ್ಯಾನರ್ ಬಿಚ್ಚುವಾಗ ಹಾಕುವ ವೀಡಿಯೋದಿಂದ ಮಂಗಳೂರಿನ ಜಾಲತಾಣಿಗರ ಮೊಬೈಲ್ ನಲ್ಲಿ ಉತ್ಪತ್ತಿಯಾಗುವ ‘ಡಿಜಿಟಲ್ ಕಸ’ಕ್ಕೂ ಮುಕ್ತಿ ದೊರೆತಂತಾಗುತ್ತದೆ. ಅದು ಬಿಟ್ಟು ಕೆಲವು ನಿರ್ದಿಷ್ಟ ಬ್ಯಾನರ್ ಗಳನ್ನೇ ಹುಡುಕಿಕೊಂಡು ಹೋಗಿ ವೀಡಿಯೋದಲ್ಲಿ ಅರಚಾಡಿದರೆ – ಎಲ್ಲಾ ಬಣ್ಣ ಮಸಿ ನುಂಗೀತು!

ಈ ‘ಡಿಜಿಟಲ್ ಕಸ’ ಅನ್ನುವ ವ್ಯಾಖ್ಯಾನ  ಸೌರಾಜ್ ಒಬ್ಬರಿಗೇ ಮಾತ್ರ ಸೀಮಿತವಾಗಿ ಉಳಿದಿಲ್ಲ. ತಾನೆಲ್ಲಿ ಹೋದರೂ ಏನೇ ಮಾಡಿದರೂ ಮೈಕ್ ಹಾಗೂ ಕ್ಯಾಮೆರಾವನ್ನು ಜತೆಗೇ ಒಯ್ಯುವ, ತಮ್ಮನ್ನು ತಾವೇ ಸಮಾಜ ಸುಧಾರಕರು ಎಂದು ಬಣ್ಣಿಸಿಕೊಳ್ಳುವ ಇನ್ನಷ್ಟು ಕೂಗುಮಾರಿಗಳು ಮಂಗಳೂರಿನಲ್ಲಿ ವಕ್ಕರಿಸಿದ್ದಾರೆ. ದೇಶದಲ್ಲಿ/ರಾಜ್ಯದಲ್ಲಿ ಏನೇ ಘಟನೆ ಆಗಲಿ, ಕಾನೂನು, ಸಂವಿಧಾನ, ಹಣಕಾಸು, ತೆರಿಗೆ, ಯುಧ್ಧ, ಭಯೋತ್ಪಾದಕ ದಾಳಿ ಏನೇ ಆಗಲಿ, ಇವರು ಒಂದು ಗಂಟೆ ನ್ಯೂಸ್ ಚಾನೆಲ್ ಸ್ಟುಡಿಯೊದಲ್ಲಿ ಕುಳಿತುಕೊಂಡು ಅರಚಾಡುತ್ತಾರೆ. ಆಡಳಿತಯಂತ್ರಕ್ಕೆ ಪ್ರತಿಯೊಂದು ವಿಚಾರದಲ್ಲೂ ಸಲಹೆ ಕೊಡುತ್ತಾರೆ, ಕೆಲವೊಮ್ಮೆ ಎಚ್ಚರಿಕೆಯನ್ನೂ, ಬೆದರಿಕೆಯನ್ನೂ ಕೊಡುತ್ತಾರೆ. ನ್ಯೂಸ್ ಆಂಕರ್’ಗಳಿಗೂ ಇವರನ್ನು ಕರೆದು ಕೂರಿಸುವುದೆಂದರೆ ಬಲು ಇಷ್ಟ. ಆತನಿಗಂತೂ ಮಾತನಾಡುವ ಶ್ರಮವೇ ಇಲ್ಲ, ಅವರು ಕೇಳುವ ಮುನ್ನವೇ ಶುರುಮಾಡಿದ ಇವರು ಮತ್ತೆ ನಿಲ್ಲಿಸುವ ಮಾತೇ ಇಲ್ಲ! ಕೆಲವೊಂದು ಉದಾಹರಣೆಗಳನ್ನು ಕೊಡುತ್ತೇನೆ.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಗರದ ಪದುವಾ ಕಾಲೇಜು ಮತಗಟ್ಟೆಯಲ್ಲಿ ಮಾಡಲಾದ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದವಂತೆ. ಅಲ್ಲಿಗೆ ಮತದಾನ ಮಾಡಲು ಹೋದ ಕೂಗುಮಾರಿ ಕಾರ್ಯಕರ್ತರೊಬ್ಬರು ಆ ಲೋಪದೋಷಗಳನ್ನು ಅಲ್ಲಿರುವ ಸಂಬಂಧ ಪಟ್ಟ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತರುವುದು ಬಿಟ್ಟು, ಅಲ್ಲಿಂದಲೆ ಫೇಸ್ಬುಕ್ ಲೈವ್ ವೀಡಿಯೋ ಮಾಡಿ ಕಿರುಚಾಡುತ್ತಾರೆ. ಅವರಿಗೆ ಅಲ್ಲಿನ ವ್ಯವಸ್ಥೆಯ ಕಾಳಜಿಯಿದ್ದದ್ದು ನಿಜವಾದರೆ ಅಲ್ಲಿ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳಿಗೆ ಅದನ್ನು ಹೇಳಿ ತದನಂತರವೂ ಅವರು ಕ್ರಮ ಕೈಗೊಳ್ಳದಿದ್ದರೆ ವಿಡಿಯೋ ಮಾಡಿದ್ದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಅವರಿಗೆ ಅಲ್ಲಿನ ವ್ಯವಸ್ಥೆ ಸರಿಯಾಗುವುದಕ್ಕಿಂತ ಹೆಚ್ಚು ‘ನಾನು ಅದನ್ನು ಪ್ರಶ್ನಿಸಿದ್ದೇನೆ’ ಎಂದು ನಾಲ್ಕು ಜನರಿಗೆ ತೋರಿಸುವುದು, ಪ್ರಚಾರ ಗಿತ್ಟಿಸಿಕೊಳ್ಳುವುದೇ ಮುಖ್ಯವಾಗಿತ್ತು. ಈ ಪ್ರಚಾರದ ಭರಾಟೆಯಲ್ಲಿ ಅವರು ಬಹುಮುಖ್ಯ ಸಂಗತಿಯೊಂದನ್ನು ಮರೆತಿದ್ದರು. ಕಳೆದ ಚುನಾವಣೆಯ ವೇಳೆ ಮತಗಟ್ಟೆಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು, ಉಲ್ಲಂಘನೆ ಮಾಡಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸುತ್ತೋಲೆ ನೀಡಲಾಗಿತ್ತು. ಆದರೆ ಇವರು ಮತಗಟ್ಟೆಯ ನಿರ್ಬಂಧಿತ ಆವರಣದೊಳಗೇ ನಿಂತು ವೀಡಿಯೋ ಮಾಡಿ ಹಾಕುತ್ತಾರೆ. ನಿಯಮಗಳ ಅರಿವು, ಕಾನೂನು ಪರಿಪಾಲನೆಯ ಕನಿಷ್ಟ ಜ್ಞಾನವೂ ಇಲ್ಲದ ಇವರು ಸಮಾಜವನ್ನು ಎಲ್ಲಿಂದ ಸರಿಮಾಡಲು ಹೊರಟವರು?

ಕೆಲ ತಿಂಗಳುಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿಧ್ಧರಾಮಯ್ಯನವರು ನಾಮಧಾರಿ ಗುತ್ತಿಗೆದಾರನೊಬ್ಬನಿಗೆ ಹೇಳಿದ ಮಾತುಗಳನ್ನು ಹಿಡಿದುಕೊಂಡು ಮಾಧ್ಯಮಗಳು ವಿವಾದವೊಂದನ್ನು ಸೃಷ್ಟಿಸಿದ್ದವು. ಈ ವಿವಾದ ಮಾಧ್ಯಮಗಳ TRP ಹಸಿವನ್ನೇನೋ ನೀಗಿಸಿತು ಬಿಡಿ. ಆದರೆ ಕೆಲವು ಮತಾಂಧರಿಗೆ ಸಿಧ್ದರಾಮಯ್ಯನವರು ಹೇಳಿದ ಮಾತಿನ ತಾತ್ಪರ್ಯ ಅರ್ಥವಾಗಲೆ ಇಲ್ಲ. ಸಿಧ್ಧರಾಮಯ್ಯನವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮಾಧ್ಯಮದವರು ಅವರನ್ನು ಸುತ್ತುವರೆದು ಇದೇ ವಿಚಾರವನ್ನು ಕೆಣಕಿದಾಗ, ಅವರು ಬಹಳ ತಾಳ್ಮೆಯಿಂದಲೇ ಮಾಜಿ ಸಚಿವ ರಮಾನಾಥ ರೈ ಹಾಗೂ ಹಾಲಿ MLC ಐವನ್ ಡಿಸೋಜಾರ ಹಣೆಯ ಮೇಲೆ ಬೆರಳಿನಿಂದ ಗುರುತು ಮಾಡಿ ತಾನು ಹೇಳಿದ ನಾಮಕ್ಕೂ ತುಳುವ ಹಿಂದೂಗಳು ಸಾಂಪ್ರದಾಯಿಕವಾಗಿ ಹಾಕಿಕೊಂಡು ಬಂದಿರುವ ತಿಲಕಕ್ಕೂ ಇರುವ ವ್ಯತ್ಯಾಸವನ್ನು ಹೇಳುತ್ತಾ, ನಾಮ ಎಲ್ಲಿಂದ ಬಂದಿದ್ದು? ಅದು ಹೇಗೆ ವ್ಯವಸ್ತಿತವಾಗಿ ತಿಲಕದ ಜಾಗವನ್ನು ಆಕ್ರಮಿಸಿಕೊಂಡು ಉದ್ದುದ್ದವಾಗಿ ಬೆಳೆಯಿತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದರು. ಆದರೆ ಇಂತಹ ವಿಚಾರಗಳಿಗೆ ‘ಧರ್ಮರಕ್ಷಣೆ’ಯ ಲೇಬಲ್ ಹಚ್ಚುವ ಗುಂಪಿಗೆ ಸೇರಿದ ಕೂಗುಮಾರಿಯೊಬ್ಬ ಲೋಕಲ್ ಚಾನೆಲ್ ಸ್ಟೂಡಿಯೋದಲ್ಲಿ ಕುಳಿತು ಇದರ ಬಗ್ಗೆ ಅರಚಿದ್ದೇ ಅರಚಿದ್ದು. ಅಂದಿನವರೆಗೆ ಸಾಮಾಜಿಕ ಕಾರ್ಯಕರ್ತನ ಸೋಗಿನಲ್ಲಿದ್ದ ಅವನಿಗೆ ಅಂದು ‘ಧರ್ಮರಕ್ಷಣೆ’ಯ ಹೊಣೆ ಹೊರಿಸಲಾಗಿತ್ತೇನೋ?! ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಹೇಗೆ ಸಂಬೋಧಿಸಬೇಕು ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲದೇ ಬೋರಿಬಸವ, ಹುಚ್ಚು ಹಿಡಿದವ, ನಾಯಿಯಂತೆ ಬೊಗಳುವವನು ಎಂದೆಲ್ಲಾ ಕಿರುಚಾಡಿದ. ಇವನ ಮಾತಿನ ಮಧ್ಯೆ Yes Yes Yes ಎಂದು ಹುರಿತುಂಬಿಸುತ್ತಿದ್ದ ಆಂಕರ್ ಗೆ ಮೈಮೇಲೆ ಪ್ರಜ್ಞೆ ಇತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ತಾನೊಬ್ಬ ಮಾಧ್ಯಮದ ಪ್ರತಿನಿದಿ, ತನಗೊಂದು ಸಾಮಾಜಿಕ ಜವಾಬ್ದಾರಿಯಿದೆ ಎಂಬುದನ್ನು ಮಾತ್ರ ಸಂಪೂರ್ಣವಾಗಿ ಮರೆತಿದ್ದ. ಈ ಕೂಗುಮಾರಿ ಕಾರ್ಯಕರ್ತ ಮಾತ್ರ ತಾನು ನ್ಯೂಸ್ ಚಾನೆಲ್ ಒಂದರ ಲೈವ್ ಕಾರ್ಯಾಕ್ರಮದಲ್ಲಿ ಕೂತು ಮಾತನಾಡುತ್ತಿದ್ದೇನೆ ಎಂಬುದನ್ನೂ ಮರೆತು ಅರಚುತಿದ್ದ – ಧರ್ಮವನ್ನು ರಸ್ತೆಗೆ ತರಬೇಡಿ, ನಿಮ್ಮ ಮನೆಯೊಳಗೆ ಆಚರಿಸಿ!

ಮೊನ್ನೆ ಮೊನ್ನೆ ಕರ್ನಾಟಕದ ರಾಜಕೀಯ ದೊಂಬರಾಟ ನಡೆಯುತ್ತಿರುವಾಗ, ಕಾಂಗ್ರೆಸ್ ಜೆಡಿಎಸ್ ಪಕ್ಷದ ಚುನಾಯಿತ ಶಾಸಕರು ಮುಂಬೈ ರೆಸಾರ್ಟ್ ವಾಸಕ್ಕೆ ತೆರಳಿದಾಗ ಅದೇ ಚಾನೆಲ್ ನಲ್ಲಿ ಕೂತು ಮತ್ತೆ ಅರಚಾಡುತಿದ್ದ. ಅರಚಾಡುತ್ತಲೇ ಮಾತಿನ ಮಧ್ಯೆ ಹೇಳಿದ – ನಮ್ಮ ರಾಜ್ಯಪಾಲರು ಸಂವಿಧಾನದಲ್ಲಿ ಬದಲಾವಣೆ ತರಬೇಕು! ಅದು ಸಾಲದೆಂಬಂತೆ ಒಂದು ಫೇಸ್ಬುಕ್ ಲೈವ್ ವೀಡಿಯೋ ಮಾಡಿ ರಾಜ್ಯದ ರಾಜ್ಯಪಾಲರಿಗೂ, ವಿಧಾನಸಭೆಯ ಸ್ಪೀಕರ್ ರವರಿಗೂ ಸಂವಿಧಾನವನ್ನು ಬದಲಾಯಿಸಲು ಅರಚಾಡಿಕೊಂಡು ಸಲಹೆ ನೀಡಿದ. ಸಂವಿಧಾನವನ್ನು ರಾಜ್ಯಪಾಲರು, ಸ್ಪೀಕರ್ ಅವರು ತಮಗೆ ಬೇಕಾದಂತೆ ಬದಲಾಯಿಸಲು ಅದೇನು ಜನತಾ ಡಿಲಕ್ಸ್ ಹೋಟೇಲಿನ ಮೆನು ಕಾರ್ಡ್ ಎಂದು ಈತ ತಿಳಿದುಕೊಂಡಿದ್ದಾನೋ? ತಿಳಿಯದು.

ಮೇಲಿನ ಎಲ್ಲಾ ಉದಾಹರಣೆಗಳೂ ಕೇವಲ ಸ್ಯಾಂಪಲ್ ಅಷ್ಟೇ. ಎಲ್ಲವನ್ನೂ ಪಟ್ಟಿ ಮಾಡುತ್ತಲೇ ಹೋದರೆ ಅದರ ಮೇಲೆಯೇ ಒಂದು ಪ್ರಬಂಧವನ್ನು ಮಂಡಿಸಬಹುದೇನೋ! ಆದರೆ ಸಮಾಜ ಸುಧಾರಕರೆಂಬ ಕೂಗುಮಾರಿಗಳ ಪೊಳ್ಳುತನ, ಆ ಪೊಳ್ಳುತನವನ್ನು ಶೃಂಗರಿಸಿ ತೋರಿಸುವ ಮಾಧ್ಯಮಗಳ ಬೌಧ್ಧಿಕ ದೀವಾಳಿತನವನ್ನು ಬಯಲು ಮಾಡಲು ಇಷ್ಟು ಸಾಕು. ಈಗ ಉಳಿದಿರುವುದು ಕೊನೆಯ ಹಾಗೂ ಮಹತ್ವದ ಪ್ರಶ್ನೆ. ಈ ಕೂಗುಮಾರಿಗಳನ್ನು ಚಾನೆಲ್ ಗಳಲ್ಲಿ ಕೂತು ಅರಚಾಡುವ ಮಟ್ಟಕ್ಕೆ, ಆ ಮೂಲಕ ಸಾಮಾಜಿಕ ನೆಮ್ಮದಿಯನ್ನು ಕೆಡಿಸುವ ಮಟ್ಟಕ್ಕೆ ಬೆಳೆಸಿದ್ದು ಯಾರು?

ಅವರನ್ನು ಆ ಮಟ್ಟಕ್ಕೆ ಬೆಳೆಸಿದ್ದು ನಾವೇ! ನಮಗೆ ಎಲ್ಲದಕ್ಕೂ ಒಬ್ಬ ಹೀರೋ ಬೇಕು. ಆ ಹೀರೋ ಬಂದು ಹೇಳಿದ್ದನ್ನು ಮಾಡುತ್ತೇವೆ, ಅವರು ಮಾಡಿದ್ದನ್ನು ಅಟ್ಟಕ್ಕೇರಿಸಿ ಹೊಗಳುತ್ತೇವೆ. ನಮ್ಮ ಮನೆಯ ಅಂಗಳವನ್ನು ಗುಡಿಸಿ ಶುಚಿಯಾಗಿಡಬೇಕು ಎಂಬುದನ್ನೂ ಈ ಹೀರೋಗಳೇ ಹೇಳಬೇಕು, ನಗರವನ್ನು ಸ್ವಚ್ಛವಾಗಿಡಬೇಕು ಎಂಬುದನ್ನೂ ಈ ಹೀರೋಗಳೇ ಬಂದು ಹೇಳಬೇಕು! ಈ ನಮ್ಮ ದೌರ್ಬಲ್ಯವನ್ನು ಬಳಸಿಕೊಂಡೇ ಇಂತಹ ಕೂಗುಮಾರಿಗಳು ಮುನ್ನೆಲೆಗೆ ಬರುತ್ತಾರೆ, ಜನರ ವಿಶ್ವಾಸ ಗಳಿಸುತ್ತಾರೆ, ತಮಗೆ ಬೇಕಾದ ಸಾಮಾಜಿಕ ವೇದಿಕೆ ಎಲ್ಲಾ ರೀತಿಯಲ್ಲೂ ಸಿಧ್ಧಗೊಂಡ ಮರುಕ್ಷಣವೇ ಇವರ ಸುಪ್ತ ಪ್ರಜ್ಞೆಯಲ್ಲಿದ್ದ ಅಜೆಂಡಾವನ್ನು ನಿಧಾನಕ್ಕೆ ಜಾರಿಗೊಳಿಸುತ್ತಾರೆ. ಒಪ್ಪುವವರು ಒಪ್ಪಬೇಕು, ಒಪ್ಪದವರನ್ನು ಒಪ್ಪಿಸುವ ಕೆಲಸವನ್ನು ಇವರ ಹಿಂಬಾಲಕರು/ಸಮರ್ಥಕರು ಮಾಡುತ್ತಾರೆ! ಸ್ವಚ್ಚತೆ – ಅದು ಮನೆಯಾಗಿರಬಹುದು, ನಗರವಾಗಿರಬಹುದು, ಮನಸ್ಸಾಗಿರಬಹುದು, ವಿಚಾರಗಳಾಗಿರಬಹುದು – ಅದೊಂದು ಸಂಕಲ್ಪವೇ ಹೊರತು ಅಭಿಯಾನವಲ್ಲ. ಅಭಿಯಾನ ತೋರ್ಪಡಿಕೆಯೊಂದಿಗೆ ಆರಂಭವಾಗಿ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸುವಲ್ಲಿ ಕೊನೆಗೊಳ್ಳುತ್ತದೆ, ಸಂಕಲ್ಪ ಎಂಬುದು ಬದುಕಿನ ಗುರಿಯಾಗಿ ಕೊನೆವರೆಗೂ ಜೊತೆಗಿರುತ್ತದೆ. ರಾಮಕೃಷ್ಣ ಮಿಶನ್ ಅವರ ಸ್ವಚ್ಛತಾ ಕಾರ್ಯ, ಹರೇಕಳ ಹಾಜಬ್ಬರವರ ಅಕ್ಷರಸೇವೆ, ಸ್ನೇಹಾಲಯ ಎಂಬ ಸಂಸ್ಥೆ ಮಾಡುವ ನಿರ್ಗತಿಕ ರೋಗಿಗಳ ಸೇವೆ – ಸಂಕಲ್ಪ ಎಂಬ ಪದಕ್ಕೆ ಮಂಗಳೂರಿನಲ್ಲಿ ಕಾಣಸಿಗುವ ಅತ್ಯುತ್ತಮ ಉದಾಹರಣೆಗಳು. ಆದರೆ ಕೂಗುಮಾರಿ ಕಾರ್ಯಕರ್ತರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಧಾರಾಳವಾಗಿ ಸಿಗುತ್ತಾರೆ. ಇನ್ನು ಕೆಲವರು ನಿಮ್ಮ ಇನ್ ‘ಬಾಕ್ಸಿಗೂ ಡಿಜಿಟಲ್ ಕಸವನ್ನು ತಂದು ಎಸೆದು  ಹೋಗುತ್ತಾರೆ.

ಅಭಿಯಾನಗಳಿಗೆ ಮನಸೋಲುವ ಮೊದಲು ಅವುಗಳ ವಿಚಾರಶುಧ್ಧಿಯನ್ನು ಪ್ರಶ್ನಿಸಲು ನಾವು ಕಲಿಯಬೇಕಿದೆ, ಇಲ್ಲವಾದರೆ ಇಂತಹ ಕೂಗುಮಾರಿಗಳು ಇಂದು ಬೆರಳೆಣಿಕೆಯ ಸಂಖ್ಯೆಯಲ್ಲಿವೆ, ನಾಳೆ ಗಲ್ಲಿಗೊಂದರಂತೆ ಸಿಗಬಹುದು. ನಾವು ಇಂದು ಉತ್ತರಭಾರತದ ರಾಜ್ಯಗಳಲ್ಲಿ ಕಾಣುವ Mob Culture ಅನ್ನು ನಮ್ಮ ಜಿಲ್ಲೆಯಲ್ಲೂ ಕಾಣಬೇಕಾಗಬಹುದು. ‘ನಮ್ಮ ಮಂಗಳೂರು ಯಾಕೆ ಹೀಗಾಯಿತು?’ ಎಂದು ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಪ್ರಶ್ನಿಸಿದರೆ ನಾವು ಏನೆಂದು ಉತ್ತರಿಸೋಣ? ನಮ್ಮ ಮಾನಸಿಕ ಗುಲಾಮತನದಿಂದ ಆದಷ್ಟು ಬಿಡುಗಡೆ ಹೊಂದೋಣ, ಸ್ವಾಂತತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್!

ಓಸ್ಕರ್ ವಗ್ಗ

DONATE
ಕಿಟಾಳ್ ತುಮ್ಕಾಂ ಮೊಗಾಚೆಂ? ಪಾಟ್ಲ್ಯಾ 10 ವರ್ಸಾಂ ಪಾಸುನ್ ಖಳಾನಾಸ್ತಾನಾ ನಿರಂತರ್ ಫಾಯ್ಸ್ ಜಾವ್ನ್ ಆಸ್ಚ್ಯಾ ಕಿಟಾಳಾರ್ ಹಜಾರೊಂ ಪಾನಾಂನಿ ವಿಂಚ್ಣಾರ್ ಕೊಂಕ್ಣಿ ಸಾಹಿತ್ಯ್ ಆಸಾ. ಪಾಟ್ಲ್ಯಾ ಧಾ ವರ್ಸಾಂನಿ ಬಾಂದುನ್ ಹಾಡ್ಲೆಲೆಂ ಕೊಂಕ್ಣಿ ಸಾಹಿತ್ಯಾಚೆಂ ದಾಯ್ಜ್ ಮುಕಾರುನ್ ವ್ಹರುಂಕ್ ತುಮ್ಚ್ಯಾ ಖುಶೆಚಿ ವರ್ಗಣಿ ದೀವ್ನ್ ಆಮ್ಕಾಂ ಪಾಟಿಂಬೊ ದಿಯಾ. ಸಕಯ್ಲೊ ಬುತಾಂವ್ ದಾಂಬುನ್ ಗೂಗಲ್ ಪೇ, ಪೋನ್ ಪೇ, ಬ್ಯಾಂಕ್ ಟ್ರಾನ್ಸ್‌ಪರ್, ಡೆಬಿಟ್ ಕ್ರೆಡಿಟ್ ಕಾರ್ಡಾ ಮಾರಿಫಾತ್ ವರ್ಗಣಿ ದಿವ್ಯೆತ್. ದೇವ್ ಬರೆಂ ಕರುಂ.

Join KITTALL WhatsApp Group, connect to KONKANI Literature

57% feel thumbs up. And how do you feel?
169 :thumbsup: Thumbs up
120 :heart: Love
0 :joy: Joy
2 :heart_eyes: Awesome
2 :blush: Great
0 :cry: Sad
0 :rage: Angry

One comment

  1. mm
    अरविंद शानभाग, कुमटा/मंगलूर

    ಸಾಮಾಜಿಕ ಕಾರ್ಯಕರ್ತರನ್ನು ಮೀರಿ Mob culture ಮುಂದೆ ಸಾಗಿದೆ. ಕಣ್ಣು ತೆರೆಸುವ ಉತ್ತಮ ಲೇಖನ.

    2
    1

Leave a Reply

Your email address will not be published. Required fields are marked *

Disclaimer : Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kittall.com will not be responsible for any defamatory message posted under this article. Please note that sending false messages to insult, defame, intimidate, mislead or deceive people or to intentionally cause public disorder is punishable under law. It is obligatory on kittall.com to provide the IP address and other details of senders of such comments, to the authority concerned upon request. Hence, sending offensive comments using kittall.com will be purely at your own risk, and in no way will kittall.com be held responsible.

Kindly Share ....Please do not COPY !