ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಇಂಟೆಲಿಜೆಂಟ್ ಕಂಪ್ಯೂಟಿಂಗ್ ಮತ್ತು ಬ್ಯುಸಿನೆಸ್ ಸಿಸ್ಟಮ್ಸ್ ವಿಭಾಗ, ಕ್ರೈಸ್ತ ವಿದ್ಯಾಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಮಂಗಳೂರು ಧರ್ಮಕ್ಷೇತ್ರದ ಸಾಮಾಜಿಕ ಸಂವಹನ ಆಯೋಗ ಇವುಗಳ ಜಂಟಿ ಅಶ್ರಯದಲ್ಲಿ ತೀವ್ರಗತಿಯ ತಂತ್ರಜ್ಞಾನಗಳು ಮತ್ತು ನಮ್ಮ ಭವಿಷ್ಯದ ಮೇಲೆ ಅವುಗಳ ಪ್ರಭಾವದ ಕುರಿತ ವಿಚಾರ ಸಂಕಿರಣವು ನವೆಂಬರ್ 09, 2023 ರಂದು ವಾಮಂಜೂರಿನ SJES ಕ್ಯಾಂಪಸ್‌ನಲ್ಲಿ ನಡೆಯಿತು. ಈ ವಿಚಾರ ಸಂಕಿರಣವು ಜಗತ್ತನ್ನು ತೀವ್ರಗತಿಯಲ್ಲಿ ಪರಿವರ್ತಿಸುತ್ತಿರುವ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಅವು ಮಾನವೀಯತೆಗೆ ಒಡ್ಡುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಅರಿವನ್ನು ಮೂಡಿಸಿತು.
ಕಾಲೇಜಿನ ನಿರ್ದೇಶಕರಾದ ವಂದನೀಯ ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ICBS ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಾಥ್ ಆಚಾರ್ಯ, ಕ್ರೈಸ್ತ ವಿದ್ಯಾಪೀಠದ ಮುಖ್ಯಸ್ಥರು ವಂದನೀಯ ಡಾ. ಐವನ್ ಡಿಸೋಜಾ, ಮಂಗಳೂರು ಧರ್ಮಕ್ಷೇತ್ರದ ಸಾಮಾಜಿಕ ಸಂವಹನ ಆಯೋಗದ ಕಾರ್ಯದರ್ಶಿ ವಂದನೀಯ ಅನಿಲ್ ಫೆನಾಂಡಿಸ್, ಕಾಲೇಜು ಪ್ರಾಂಶುಪಾಲ ಡಾ. ರಿಯೊ ಡಿಸೋಜಾ ಮತ್ತು ಕಾರ್ಕಳದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ರೋಶನ್ ಫೆನಾಂಡಿಸ್ ಉಪಸ್ಥಿತರಿದ್ದರು.
ವಿಚಾರ ಸಂಕಿರಣವನ್ನು ಎಸ್‌ಜೆಇಸಿ ಕಾಲೇಜಿನಯ ನಿರ್ದೇಶಕರಾದ ವಂದನೀಯ ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಉದ್ಘಾಟಿಸಿದರು, ಅವರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವಾಗ ಅವುಗಳ ನೈತಿಕ ಪರಿಣಾಮಗಳನ್ನು ಅರಿಯುವ ಅಗತ್ಯವನ್ನು ಒತ್ತಿ ಹೇಳಿದರು. ಅವರು ಮಾತಾನಾಡುತ್ತಾ “ನಾವು ಭವಿಷ್ಯದ ಪಾಲಕರಾಗಿ, ನ್ಯಾಯ, ಪಾರದರ್ಶಕತೆ, ಸತ್ಯಾಸತ್ತತೆ ಮತ್ತು ಮಾನವ ಘನತೆಯ ತತ್ವಗಳನ್ನು ಕೈಬಿಡದೆ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ತಂತ್ರಜ್ಞಾನಗಳನ್ನು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಬೇಕು” ಎಂದು ಹೇಳಿದರು.
ಈ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‌ಜೆಇಸಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಿಯೋ ಡಿಸೋಜಾ ಮತ್ತು ಕಾರ್ಕಳದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ರೋಶನ್ ಫೆನಾಂಡಿಸ್ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್‌ಚೈನ್ ಕಂಪ್ಯೂಟಿಂಗ್, ನ್ಯೂ ಜನರೇಷನ್ ಜಿನೋಮಿಕ್ಸ್, ದಿ ಇಂಟರ್ನೆಟ್ ಆಫ್ ಥಿಂಗ್ಸ್, ವೆಬ್ 3.0, ಆಗ್ಮೆಂಟೆಡ್/ವರ್ಚುವಲ್ ರಿಯಾಲಿಟಿ, ಮೆಟಾವರ್ಸ್, ಡಿಜಿಟಲ್ ಟ್ವಿನ್ಸ್ ಮತ್ತು ಸೈಬರ್ ಸೆಕ್ಯುರಿಟಿ ಮುಂತಾದ ವಿವಿಧ ವಿಷಯಗಳ ಕುರಿತು ತಿಳುವಳಿಕೆ ನೀಡಿದರು. ಪ್ರಸ್ತುತ ವಿವಿಧ ವಲಯಗಳಲ್ಲಿ ಈ ತಂತ್ರಜ್ಞಾನಗಳ ಪ್ರಸ್ತುತ ಪ್ರವೃತ್ತಿಗಳು, ಅಪ್ಲಿಕೇಶನ್‌ಗಳು ಮತ್ತು ಪರಿಣಾಮಗಳ ಕುರಿತು ಅವರು ಚರ್ಚಿಸಿದರು.
ವಿಚಾರ ಸಂಕಿರಣದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರು, ಗುರುಮಠದ ಸಹೋದರರು, ಯಾಜಕರು, ಕನ್ಯಾಸ್ತ್ರೀಯರು ಮತ್ತು ವಿವಿಧ ಕ್ಷೇತ್ರಗಳ ವೃತ್ತಿಪರರು ಸೇರಿದಂತೆ ಸುಮಾರು 200 ಜನರು ಭಾಗವಹಿಸಿದ್ದರು.
ಎಸ್‌ಜೆಇಸಿ ಕಾಲೇಜಿನ ICBS ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು. ವಿಚಾರ ಸಂಕಿರಣದ ಕೊನೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು. ಕಾಲೇಜಿನ ಪ್ರೊ. ಸೇವರ್ ಜಾನ್ ಡಿಸೋಜಾ ಮತ್ತು ಅನುಷ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.
■ ವರದಿ: ವಂದನೀಯ ಅನಿಲ್ ಫೆರ್ನಾಂಡಿಸ್
■ ಚಿತ್ರಗಳು: SJES