ಸಂತ ಅನ್ನಾ ಚರ್ಚ್ ಕೆಲರಾಯ್, ಇಲ್ಲಿನ ‘ಭಾರತೀಯ ಕಥೋಲಿಕ್ ಯುವ ಸಂಚಾಲನ’ವು ಭಾನುವಾರ ಸಪ್ಟೆಂಬರ್ 1 ರಂದು ‘ಗಾದ್ಯಾಂತ್ ಗಮ್ಮತ್’ (ಗದ್ದೆಯಲ್ಲಿ ಗಮ್ಮತ್) ಎಂಬ ಕಾರ್ಯಕ್ರಮವನ್ನು ಕೆಲರಾಯ್ ತಾರಿಗುಡ್ಡೆ ಗದ್ದೆಯಲ್ಲಿ ಆಯೋಜಿಸಿತ್ತು. ಬೆಳಿಗ್ಗೆ 9.30 ಗಂಟೆಗೆ ಸಂತ ಅನ್ನಾ ದೇವಾಲಯದ ಧರ್ಮಗುರುಗಳಾದ ಫಾ| ಸಿಲ್ವೆಸ್ಟರ್ ಡಿಕೋಸ್ಟಾರವರು ಆಶೀರ್ವಚನದ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಐಸಿವೈಎಮ್ ಸಚೇತಕರಾದ ವಿನೋದ್ ಪಿರೇರಾ, ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸಂತೋಷ್ ಡಿಕೋಸ್ಟಾ, ಕಾರ್ಯದರ್ಶಿ ಸೆಲಿನ್ ಡಿಮೆಲ್ಲೊ, ಫಾ| ರೋಶನ್ ಫೆರ್ನಾಂಡಿಸ್, ಕಾರ್ಪರೇಟರ್ ರಘು ಸಾಲಿಯಾನ್, ಜಯಂತಿ ದೇವಸ ಮುಂತಾದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರ್ವಧರ್ಮಗಳ ಸಹಕಾರದಿಂದ ಈ ಕಾರ್ಯಕ್ರಮಕ್ಕೆ ಕಳೆಬಂದಿತ್ತು.
ಅನೇಕ ವರ್ಷಗಳಿಂದ ತೆನೆಹಬ್ಬಕ್ಕೆ ತೆನೆಯನ್ನು ದಾನ ಮಾಡುತ್ತಿರುವ ಕೃಷಿಕ ಜ್ಯೂಡ್ ಕರ್ನೆಲಿಯೊ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ‘ಪೆಪ್ಸಿ ಲಕ್ಕಿ ಡ್ರಾ’ದಲ್ಲಿ ಅನೇಕರು ಭಾಗವಹಿಸಿ ಬಹುಮಾನ ಗೆದ್ದರು. ಸರ್ವರಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸ್ಪರ್ಧೆಗಳನ್ನು ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ನಡೆಸಿ, ಸಂಜೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಬಂದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮನೀಶಾ ಡಿಸೋಜಾ ಸ್ವಾಗತಿಸಿ, ಅಲಿಷಾ ಕ್ರಾಸ್ತಾ ಧನ್ಯವಾದ ಸಮರ್ಪಣೆ ಗೈದರು.
ಕಾರ್ಯಕ್ರಮವನ್ನು ಸಂತೋಷ್ ಡಿಕೋಸ್ಟಾ ಹಾಗೂ ಬೆನೊಯ್ ಡಿಸೋಜಾ ನಡೆಸಿಕೊಟ್ಟರು. ಸಣ್ಣ ಮಕ್ಕಳಿಂದ ಹಿಡಿದು ವೃಯೋವೃದ್ಧರವರೆಗೆ ಎಲ್ಲರೂ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ಕೆಸರಿನ ಗದ್ದೆಯಲ್ಲಿ ಆನಂದಿಸಿದರು.