ಮಂಗಳೂರು ಬಿಷಪ್ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ‘ಬಂಧುತ್ವ’ ಕಾರ್ಯಕ್ರಮವು ಪ್ರೀತಿ, ಶಾಂತಿ ಮತ್ತು ಏಕತೆಯ ಸಮಾಜವನ್ನು ಕಟ್ಟಲು ಆತ್ಯಗತ್ಯ. ಸರ್ಕಾರದ ಬೆಂಬಲದ ಮೂಲಕ ಅವರ ಕನಸನ್ನು ನನಸಾಗಿಸಲು ನಾನು ಶ್ರಮಿಸುತ್ತೇನೆ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಶ್ರೀ ಯು. ಟಿ. ಖಾದರ್ ಅವರು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಷಪ್ ಹೌಸ್‌ನಲ್ಲಿ ಹೇಳಿದರು.
ಶ್ರೀ ಯು. ಟಿ. ಖಾದರ್ ಅವರು ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ನೆರೆದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಕನ್ಯಾಶ್ರಿಯರನ್ನು ಮತ್ತು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕ್ರಿಶ್ಚಿಯನ್ ಸಮುದಾಯವು ರಾಷ್ಟ್ರ ಮತ್ತು ಸಮಾಜದ ಏಕತೆ, ಭ್ರಾತೃತ್ವ ಮತ್ತು ಸಮಗ್ರ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಗಳಲ್ಲಿ ಪಡೆದ ಶಿಕ್ಷಣ ಮತ್ತು ಉದಾತ್ತ ಮೌಲ್ಯಗಳು ನನಗೆ ಶಕ್ತಿಯ ಮೂಲವಾಗಿ ಮಾರ್ಪಟ್ಟಿವೆ ಮತ್ತು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿವೆ, ಎಂದು ಖಾದರ್ ಹೇಳಿದರು.
ತಮ್ಮ ಹಿಂದಿನ ಅಭಿವೃದ್ಧಿಯ ಪ್ರಯತ್ನಗಳನ್ನು ಪ್ರತಿಬಿಂಬಿಸಿದ ಖಾದರ್, ತಮ್ಮ ಯಶಸ್ಸಿಗೆ ದೇವರ ಕೃಪೆ ಮತ್ತು ಜನರ ಪ್ರಾರ್ಥನೆಯ ಬೆಂಬಲ ಕಾರಣವೆಂದು ಹೇಳಿದರು. ಪಾವೂರು-ಉಳಿಯ ತೂಗುಸೇತುವೆ ಯೋಜನೆಗೆ ಮೊದಲ ಆದ್ಯತೆ ನೀಡಿ ಸರ್ಕಾರದ ಧನಸಹಾಯದಿಂದ ಯೋಜನೆ ಜ್ಯಾರಿಯಾಗುವಲ್ಲಿ ತಮ್ಮ ಸಹಾಕಾರ ನೀಡುವುದಾಗಿ ಭರವಸೆ ನೀಡಿದರು. ಸಾಮಾನ್ಯ ಜನರ ಅಗತ್ಯತೆಗಳು ಮತ್ತು ಬೇಡಿಕೆಗಳಿಗೆ ನನ್ನ ಗಮನಕ್ಕೆ ತಂದರೆ, ನಿಮ್ಮ ಹಿರಿಯ ಸಹೋದರನಾಗಿ ನಾನು ಸಂತೋಷದಿಂದ ಸ್ಪಂದಿಸುತ್ತೇನೆ, ಎಂದು ಖಾದರ್ ಹೇಳಿದರು.
ಶ್ರೇಷ್ಠಗುರು ಅತೀ ವಂದನೀಯ ಮ್ಯಾಕ್ಸಿಮ್ ನೊರೊನ್ಹಾ ಅವರು ಶ್ರೀ ಖಾದರ್ ಅವರಿಗೆ ಅಭಿನಂದನಾ ಮಾತುಗಳೊಂದಿಗೆ ಶುಭಾಶಯಗಳನ್ನು ಸಲ್ಲಿಸಿದರು. ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶಾಲು, ಪೇಟಾ, ಹಾರ ಮತ್ತು ಪುಷ್ಪಗುಚ್ಛದೊಂದಿಗೆ ಶ್ರೀ ಯು ಟಿ ಖಾದರ್ ಅವರನ್ನು ಸನ್ಮಾನಿಸಿದರು. ಅತೀ ವಂ. ಮ್ಯಾಕ್ಸಿಮ್ ನೊರೊನ್ಹಾ, ಸಂಪರ್ಕಾಧಿಕಾರಿ ವಂದನೀಯ ಜೆ.ಬಿ. ಸಲ್ಡಾನ್ಹಾ ಮತ್ತು ಶ್ರೀ ರಾಯ್ ಕ್ಯಾಸ್ತೆಲಿನೊ, ಸಿ.ಆರ್.ಐ ಅಧ್ಯಕ್ಷೆ ಸೀ| ಸೆವ್ರಿನ್ ಮೆನೆಜಸ್, ಯಾಜಕರ ಕೌನ್ಸಿಲ್‌ನ ಕಾರ್ಯದರ್ಶಿ ವಂದನೀಯ ಜೋಸೆಫ್ ಮಾರ್ಟಿಸ್, ಧರ್ಮಕ್ಷೇತ್ರದ ಪಾಲನ್ ಪರಿಷತ್ತಿನ ಕಾರ್ಯದರ್ಶಿ ಡಾ. ಜಾನ್ ಡಿಸಿಲ್ವಾ ಮತ್ತು ಶ್ರೀ ಅಲ್ವಿನ್ ಡಿಸೋಜಾ, ಅಧ್ಯಕ್ಷರು, ಕಥೋಲಿಕ್ ಸಭಾ, ಮಂಗಳೂರು ಇವರುಗಳು ಸನ್ಮಾನ ಕಾರ್ಯದಲ್ಲಿ ವೇದಿಕೆಯಲ್ಲಿ ಜೊತೆ ಸೇರಿದರು.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶ್ರೀ ಖಾದರ್ ಅವರನ್ನು “ಕರಾವಳಿಯ ಉಕ್ಕಿನ ಮನುಷ್ಯ” ಎಂದು ಶ್ಲಾಘಿಸಿದರು. ಖಾದರ್ ಅವರು ಜನತೆಯ ಹೃದಯಗಳನ್ನು ಬೆಸೆದಿದ್ದಾರೆ. ಸಮುದಾಯದಲ್ಲಿ ಒಗ್ಗಟ್ಟಿನ ಬಂಧುತ್ವಗಳನ್ನು ಬಲಪಡಿಸಿದ್ದಾರೆ. ಮಂಗಳೂರಿನ ಕೀರ್ತಿಯನ್ನು ಹೊಸ ಎತ್ತರಕ್ಕೆ ಏರಿಸಿದ ಮಂಗಳೂರಿನ ಕಣ್ಮಣಿ, ಅವರನ್ನು ಗೌರವಿಸುವುದು ನನ್ನ ಪಾಲಿನ ಸೌಭಾಗ್ಯ, ಎಂದು ಹೇಳಿದರು.
ಶ್ರೀ ಖಾದರ್ ಅವರು ಸರಳ, ಸಹೃದಯಿ, ಸಹಾನೂಭೂತಿವುಳ್ಳವರು. ದೇವರಲ್ಲಿನ ಅಪಾರ ನಂಬಿಕೆಯಿಂದ ಅವರ ಪ್ರತಿ ಯಶಸ್ಸಿನಲ್ಲೂ, ಅವರು ದೇವರ ಆಶೀರ್ವಾದಕ್ಕಾಗಿ ನನ್ನನ್ನು ಭೇಟಿಯಾಗುತ್ತಿದ್ದರು.
ಮಂಗಳೂರಿನ ಹೃದಯಭಾಗದಲ್ಲಿರುವ ವಿಶಾಲವಾದ 24 ಎಕರೆವುಳ್ಳ ‘ನೆಹರು ಮೈದಾನವನ್ನು’ ಕಥೋಲಿಕ್ ಸಮುದಾಯದ ಶ್ರೀಮತಿ ರೊಜಿನಾ ಸಬಿನಾ ಕೊಯೆಲ್ಹೋ ಅವರು ದಾನ ಮಾಡಿದ್ದು ಅದು ಒಗ್ಗಟ್ಟು ಮತ್ತು ಏಕತೆಯ ಕೇಂದ್ರವಾಗಿದೆ ಎಂದು ಬಿಷಪ್ ಹೇಳಿದರು. ಈ ಮೈದಾನವನ್ನು ಕ್ರೀಡೆ ಮತ್ತು ಇತರ ಸಾಂಸ್ಕೃತಿಕ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗಿದೆ. ಇಲ್ಲಿ, ದ್ವೇಷದ ಸಂಸ್ಕೃತಿ ಮತ್ತು ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕುವಂತಹ, ಮುಕ್ತ ಮನಸ್ಸಿನ, ಶಾಂತಿ-ಪ್ರೀತಿಯಿಂದ ಭ್ರಾತೃತ್ವದ ಹಾಗೂ ಬಂಧುತ್ವದ ಭಾವನೆಗಳನ್ನು ಹೆಚ್ಚಿಸುವ ತಾಣವಾಗಬೇಕು” ಎಂದು ಬಿಷಪ್ ಹೇಳಿದರು.
ಶ್ರೀ ಅಲ್ವಿನ್ ಡಿಸೋಜ ಅವರು ಮಂಗಳೂರಿನ ಕಥೋಲಿಕ್ ಸಭಾದ ಎಲ್ಲಾ ಪದಾಧಿಕಾರಿಗಳೊಂದಿಗೆ ಶ್ರೀ ಖಾದರ್ ಅವರನ್ನು ಪುಷ್ಪಗುಚ್ಛವನ್ನು ನೀಡಿ ಗೌರವಿಸಿದರು.
ಮಂಗಳೂರಿನ ಬೆಥನಿ ಪ್ರಾಂತೀಯ ಸುಪೀರಿಯರ್ ಸಿಸಿಲಿಯಾ ಮೆಂಡೋನ್ಸಾ ಮತ್ತು ಧರ್ಮಭಗಿನಿ ಸಿ| ಮಾರ್ಸೆಲಿನ್ ಬ್ರ್ಯಾಗ್ಸ್ ಅವರು ಶ್ರೀ ಖಾದರ್ ಅವರನ್ನು ಪುಷ್ಪಗುಚ್ಛ ನೀಡಿ ಗೌರವಿಸಿದರು.
ಖಾದರ್ ಅವರು ಎಲ್ಲಾ ಗಣ್ಯರೊಂದಿಗೆ ಮಂಗಳೂರಿನ ಬಿಷಪ್ ಆದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಧರ್ಮಾಧ್ಯಕ್ಷರಾಗಿ 5 ನೇ ವರ್ಷಾಚರಣೆಯ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದರು.
ಅತೀ ವಂದನೀಯ ಡೇನಿಯಲ್ ವೇಗಸ್, ಶ್ರೀ ಜೆ ಆರ್ ಲೋಬೋ, ಮಾಜಿ ಶಾಸಕರು, ಪಾಲನಾ ಪರಿಷತ್ತಿನ ಸದಸ್ಯರು, ಧರ್ಮಗುರುಗಳು ಮತ್ತು ಧಾರ್ಮಿಕರು ಉಪಸ್ಥಿತರಿದ್ದರು.
ರಾಕ್ಣೊ ವಾರಪತ್ರಿಕೆಯ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ ಪ್ರಾರ್ಥನೆ ನಡೆಸಿಕೊಟ್ಟರು. ವಂದನೀಯ ಫಾದರ್ ಜೆ ಬಿ ಸ್ವಾಗತಿಸಿ, ರಾಯ್ ಕ್ಯಾಸ್ತಲಿನೊ ವಂದಿಸಿದರು. ಡಾ. ಜಾನ್ ಡಿಸಿಲ್ವಾ ಕಾರ್ಯಕ್ರಮವನ್ನು ನಿರೂಪಿಸಿದರು.
■ ವರದಿ/ ಚಿತ್ರ : ವಂ। ಅನಿಲ್ ಫೆನಾಂಡಿಸ್, ಕೆನರಾ ಕಮ್ಯುನಿಕೇಶನ್ ಸೆಂಟರ್, ಮಂಗಳೂರು