ಜೀವಮಾನದ ಸಾಧನೆಗಾಗಿ ನೇಕಾರರಿಗೆ ಕದಿಕೆ ಟ್ರಸ್ಟ್ ಕೊಡ ಮಾಡುವ ಅತ್ಯುನ್ನತ ಪ್ರಶಸ್ತಿ ನೇಕಾರ ರತ್ನ ವನ್ನು ಇತ್ತೀಚಿಗೆ ಕದಿಕೆ ಟ್ರಸ್ಟ್ ಮತ್ತು ಸೆಲ್ಕೋ ಇಂಡಿಯಾ ಸಹಯೋಗದಲ್ಲಿ ಉಡುಪಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಇಬ್ಬರು ಹಿರಿಯ ನೇಕಾರರಿಗೆ ನೀಡಲಾಯ್ತು.
ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ, ಕಳೆದ 74 ವರ್ಷ ಗಳಿಂದ ನಿರಂತರವಾಗಿ ಉಡುಪಿ ಸೀರೆ ನೆಯುತ್ತಿರುವ ಉಭಯ ಜಿಲ್ಲೆಗಳಲ್ಲಿ ಈಗ ಕೆಲವೇ ಜನ ಮಾತ್ರ ನೇಯುವ ಬಹು ಬೇಡಿಕೆಯ ಕಟ್ ಬಾರ್ಡರ್ 60 ಕೌಂಟ್ ಸೀರೆಯನ್ನು ಈಗಲೂ ನೆಯುತ್ತಿರುವ ಸೋಮಪ್ಪ ಜತ್ತನ್ನ (89) ಹಾಗೂ ಕಳೆದ 64 ವರ್ಷಗಳಿಂದ ಉಡುಪಿ ಸೀರೆ ನೇಯುತ್ತಿರುವ ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಸಂಜೀವ ಶೆಟ್ಟಿಗಾರ್ (86) , ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಈಗ ಅಳಿದು ಹೋದ ಪ್ರಖ್ಯಾತ ಮುತ್ತು ಬಾರ್ಡರ್ ಸೀರೆ ನೆಯುವುದರಲ್ಲಿ ಪರಿಣಿತ ರಾಗಿದ್ದ ಇವರು ಈಗಲೂ ಸಣ್ಣ ಚೌಕುಳಿಯ 60 ಕೌಂಟ್ ಸೀರೆ ನೆಯುತ್ತಿದ್ದಾರೆ.
ಪ್ರಶಸ್ತಿ ಪಾತ್ರರಿಗೆ ಬೈಂದೂರಿನ ಬಾಗಳ ಬಂಧುಗಳು ನೇಯ್ದ ಶಾಲು , ಫಲಕ ಮತ್ತು ಹತ್ತು ಸಾವಿರ ರೂಗಳನ್ನು ನೀಡಿ ಅತಿಥಿಗಳು ಗೌರವಿಸಿದರು. ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಂಸದ ಅನೀಲ್ ಹೆಗ್ಡೆ ಅವರು ನೇಕಾರ ದ್ವಯರ ನಿಸ್ವಾರ್ಥ ಸೇವಾ ಮಾದರಿಯ ಬದುಕನ್ನು ಶ್ಲಾಘಿಸಿ ಇಂತಹವರಿದಲೇ ಉಡುಪಿ ಸೀರೆ ನೇಕಾರಿಕೆ ಉಳಿದು ಈಗ ಕದಿಕೆ ಟ್ರಸ್ಟ್ ಗೆ ಅದನ್ನು ಪುನಃಶ್ಚೇತನ ಗೊಳಿಸುವ ಅವಕಾಶ ಸಿಕ್ಕಿತು ಅಂತ ಹೇಳಿದರು. ಸೆಲ್ಕೋ ಇಂಡಿಯದ ಡಿ ಜಿ ಎಂ ಗುರು ಪ್ರಕಾಶ್ ಶೆಟ್ಟಿ ಅವರು ಹಿರಿಯ ನೇಕಾರರನ್ನು ಅಭಿನಂದಿಸುತ್ತ ಸೆಲ್ಕೋ ಇಂಡಿಯ ಮುಂದೆಯೂ ಕದಿಕೆ ಟ್ರಸ್ಟ್ ಜೊತೆಗೆ ಇಂತಹ ಉತ್ತಮ ಕೆಲಸದಲ್ಲಿ ಕೈ ಜೋಡಿಸುತ್ತದೆ ಎಂದು ಹೇಳಿದರು.
ದೇಶದ ಪ್ರಖ್ಯಾತ ಖಾದಿ ಸಂಸ್ಥೆ ಜನಪದ ಖಾದಿಯ ಸಂತೋಷ ಕೌಲಗಿ ಅವರು ತಮ್ಮ ಉಪನ್ಯಾಸ ದಲ್ಲಿ ಸರ್ಕಾರದ ಅವಗಣಣೆ , ಗ್ರಾಹಕರ ನಿರ್ಲಕ್ಷ, ನಕಲಿ ಉತ್ಪನ್ನಗಳೆಲ್ಲ ಸೇರಿ ನೈಜ ಖಾದಿ ಕೈ ಮಗ್ಗ ನೇಕಾರಿಕೆ ಅವನತಿಯ ಅಂಚಿಗೆ ಬಂದಿದೆ. ಇದರಿಂದ ಮೂಲಕ ಸಾಮಾಜಿಕ ಅಂತರ, ಪರಿಸರ ಮಾಲಿನ್ಯ ಅತೀ ಹೆಚ್ಚಾಗಿದ್ದು, ಕದಿಕೆ ಟ್ರಸ್ಟ್ ಯಾವುದೇ ಸರ್ಕಾರದ ಸವಲತ್ತು ಪಡೆಯದೇ ಉಡುಪಿ ಕೈ ಮಗ್ಗ ನೇಕಾರಿಕೆ ಉಳಿಸಲು ಪ್ರಯತ್ನಿಸಿ ಯಶಸ್ವೀ ಆಗಿರುವುದಕ್ಕೆ ಅಭಿನಂದಿಸಿದರು.
ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಕದಿಕೆ ಟ್ರಸ್ಟ್ನ ಉಡುಪಿ ಸೀರೆ ಪುನಃಶ್ಚೇತನ 2018 ರಲ್ಲಿ ಆರಂಭಿಸಿದಾಗ ಐವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಬ್ಬ ನೇಕಾರರೂ ಇರಲಿಲ್ಲ ಎಂದು ತಿಳಿಸಿ ಕದಿಕೆ ಟ್ರಸ್ಟ್ ಮೂಲಕ ತರಬೇತಿ ಪಡೆದು ಯಶಸ್ವಿ ನೇಕಾರರಾಗಿರುವ ತಾಳಿಪಾಡಿ ನೇಕಾರ ಸಂಘದ ಯುವ ನೇಕಾರರನ್ನು ಪರಿಚಯಿಸಿದರು.
ಕದಿಕೆ ಟ್ರಸ್ಟ್ ಬೈಂದೂರಿನ ಕುಗ್ರಾಮ ಹೊಸೇರಿಯಲ್ಲಿ ಆರಂಭಿಸಿದ ತರಬೇತಿಯಲ್ಲಿ ತರಬೇತಿ ಗೊಂಡ 12 ಅತ್ಯಂತ ಕಿರಿಯ ವಯಸ್ಸಿನ ನೇಕಾರರನ್ನು ಸಭೆಗೆ ಪರಿಚಯಿಸಿದರು. ಪ್ರಾಥಮಿಕ ತರಬೇತಿ ನೀಡಿದ ಪ್ರಬುಲ ಚಂದ್ರನ್ ಅವರನ್ನು ಹಾಗೂ ತರಬೇತಿ ಕೇಂದ್ರಕ್ಕೆ ಅವಕಾಶ ಮಾಡಿಕೊಟ್ಟು ತರಬೇತಿ ಉಸ್ತುವಾರಿ ವಹಿಸಿರುವ ಸರೋಜ ಮತ್ತು ಅಣ್ಣಪ್ಪ ದಂಪತಿಗಳನ್ನು ಗೌರವಿಸಲಾಯ್ತು.
ತಾಳಿಪಾಡಿ ಸಂಘದ ಯುವ ನೇಕಾರರಾದ ಸಾಧನಾ ಗಣೇಶ್ ನೇಕಾರಿಕೆ ಬಗ್ಗೆ ಸ್ವರಚಿತ ಕವನ ವೊಂದನ್ನು ವಾಚಿಸಿದರು. ನಂತರ ವಿಪಂಚಿ ಬಳಗದ ವಿದುಷಿ ಪವನ ಆಚಾರ್ ಮತ್ತು ಬಳಗದವರು ಉಡುಪಿ ಸೀರೆ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರ ವಾದ ವೀಣಾವಾದನ ಕಛೇರಿ ನಡೆಸಿ ಕೊಟ್ಟರು. ಕಾರ್ಯಕ್ರಮವನ್ನು ಪರಿಸರ ಸ್ನೇಹಿಯಾಗಿ ಸರಳವಾಗಿ ಆಚರಿಸಲಾಯಿತು. ಮಂಗಳೂರಿನ ರಾಹುಲ್ ಆಡ್ಸ್ ನ ಟೈಟಸ್ ನೋರೋನ್ಹ ಅವರು ಕಾರ್ಯಕ್ರಮ ನಡೆಸಿ ಕೊಟ್ಟರು