ಸಂತ ಜೆರೋಸಾ ಶಾಲೆಯ ಮೇಲೆ ನಡೆದ ದಾಳಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ‘ಟೂಲ್‌ಕಿಟ್’ ಇರಬಹುದು ಎಂಬ ತರ್ಕ ಒಪ್ಪಿಕೊಂಡರೂನೇ, ಸ್ಥಳೀಯ ಶಾಸಕರುಗಳ ಮತ್ತು ಜನಸಾಮಾನ್ಯರ ಆಕ್ರೋಶಕ್ಕೆ ಇಷ್ಟೇ ಕಾರಣವಿರಬಹುದೇ ? ಎಂಬ ಪ್ರಶ್ನೆ; ಘಟನೆ ವರದಿಯಾದ ದಿನದಿಂದ ನನ್ನನ್ನು ನಿರಂತರವಾಗಿ ಕಾಡುತ್ತಿದೆ. ಘಟನೆಗೆ ಒಟ್ಟಾರೆ ಸಮಾಜ ಮತ್ತು ನಿರ್ದಿಷ್ಟವಾಗಿ ಕ್ರೈಸ್ತ ಸಮುದಾಯದ ಸ್ಪಂದನೆಯನ್ನು ಕೂಲಂಕುಷವಾಗಿ ಗಮನಿಸಿದರೆ – ಚರ್ಚ್ ವ್ಯವಸ್ಥೆಯಲ್ಲಿ ಅವ್ಯಾಹತವಾಗಿರುವ ಲಿಂಗ ತಾರತಮ್ಯ ಮತ್ತು ಸಿಸ್ಟರ್‌ಗಳನ್ನು ನಿಯಂತ್ರಿಸುವ ಪುರುಷ ಯಜಮಾನಿಕೆ ಕಣ್ಣಿಗೆ ರಾಚುತ್ತದೆ.
ರಾಜ್ಯ ಶಿಕ್ಷಣ ಇಲಾಖೆ ರಚಿಸಿರುವ ಪಠ್ಯಪುಸ್ತಕದಲ್ಲಿರುವ ‘ಕಾಯಕವೇ ಕೈಲಾಸ’ ಠಾಗೋರರ ಕವಿತೆಯನ್ನು ಸಿಸ್ಟರ್‌ಗಳು ನಡೆಸುತ್ತಿರುವ ಸಂತ ಜೆರೋಸಾ ಶಾಲೆಯಲ್ಲಿ ಮಾತ್ರ ಬೋಧಿಸುತ್ತಿರಲಿಲ್ಲ. ಪಾದ್ರಿಗಳು ಹಾಗೂ ಇತರ ಅಲ್ಪಸಂಖ್ಯಾತರು ನಡೆಸುತ್ತಿರುವ ಕರಾವಳಿಯ ಬಹುತೇಕ ಶಾಲೆಗಳಲ್ಲೂ ಇದೇ ಪಠ್ಯವನ್ನು ಬೋಧಿಸುತ್ತಿದ್ದರು. ಆದರೂ ಸಿಸ್ಟರ್‌ಗಳು ನಡೆಸುತ್ತಿರುವ ಸಂತ ಜೆರೋಸಾ ಶಾಲೆಯನ್ನೇ ಯಾಕೆ ದಾಳಿಗೆ ಆಯ್ದುಕೊಳ್ಳಲಾಯಿತು ? ಎನ್ನುವುದೇ ಈಗ ಜಿಜ್ಞಾಸೆಯ ವಿಷಯ.
ರಾಜ್ಯದ ಕರಾವಳಿ ಭಾಗ, ಅದರಲ್ಲೂ ನಿರ್ದಿಷ್ಟವಾಗಿ ಮಂಗಳೂರು, ಈಗಲೂ ಬಿಜೆಪಿಯ ಭದ್ರಕೋಟೆ. ಪುತ್ತೂರು ವಿದಾಸಭಾ ಕ್ಷೇತ್ರ, ಪಕ್ಷದ ಆಂತರಿಕ ಕಲಹದಿಂದ ಕಾಂಗ್ರೆಸ್ ಪಾಲಾಗಿದ್ದು ಬಿಟ್ಟರೆ, ಉಳ್ಳಾಲ ಕಾಂಗ್ರೆಸ್ ಶಾಸಕರ ಗೆಲುವಿಗೆ ಅಲ್ಪಸಂಖ್ಯಾತರ ಮತಗಳಷ್ಟೇ ಕಾರಣವಲ್ಲ ಎಂಬುದು ಈಗ ಸ್ಪಷ್ಟ. ಅಷ್ಟರ ಮಟ್ಟಿಗೆ ಕರಾವಳಿಯ ರಾಜಕೀಯ ಹೊಂದಾಣಿಕೆಯ ಸಮೀಕರಣಗಳನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆಂದು ‘ಟೂಲ್‍ಕಿಟ್’ ವಿನ್ಯಾಸಗೊಳಿಸುವ ಅನಿವಾರ್ಯತೆ ಭದ್ರ ಬಿಜೆಪಿಗೆ ನಿಜವಾಗಿಯೂ ಇತ್ತೇ ? ಇಲ್ಲವಾದರೆ … ಸಿಸ್ಟರ್‌ಗಳು ನಡೆಸುತ್ತಿರುವ ಶಾಲೆಯ ಮೇಲೆ ದಾಳಿಯ ಹಿಂದಿನ ಕಾರಣ ಏನಿರಬಹುದು ?
ಸಿಎಎ, ಎನ್ನಾರ್‌ಸಿ, ಮತಾಂತರ ನಿಷೇಧ ಕಾಯ್ದೆ ಅಥವಾ ಮಣಿಪುರ ಹಿಂಸಾಚಾರ – ಈ ಬಗ್ಗೆ ಕಳೆದ ಒಂದೆರಡು ವರ್ಷಗಳಿಂದ ಮಂಗಳೂರಿನಲ್ಲಿ ಸಾಕಷ್ಟು ಸಭೆ – ಪ್ರತಿಭಟನೆಗಳು ನಡೆದಿವೆ. ಈ ಎಲ್ಲಾ ಸಭೆ – ಪ್ರತಿಭಟನೆಗಳಿಗೆ ಪ್ರವಾಹದಂತೆ ಹರಿದು ಬಂದು ಭಾಗವಹಿಸುವುದು ಇದೇ ಸಿಸ್ಟರ್‌ಗಳು. ಇಷ್ಟು ಮಾತ್ರವಲ್ಲ ಸಮಾನ ಮನಸ್ಕರು – ಸಾಮಾಜಿಕ ಕಾರ್ಯಕರ್ತರು ಎಂದು ಗುರುತಿಸಿಕೊಂಡವರು ನಡೆಸುವ ಪ್ರತಿಭಟನಾ ಸಭೆಗಳಗೆ ಈ ಸಿಸ್ಟರ್‌ಗಳನ್ನು ಕರೆದುಕೊಂಡು ಬರುವ ಕೆಲವು ಮಧ್ಯವರ್ತಿಗಳು ಇದ್ದಾರೆಂದು ಪ್ರಗತಿಪರ ಭಾಷಣಕಾರರೊಬ್ಬರು ಮುಲಾಜಿಲ್ಲದೇ ಹೇಳಿದ್ದುಂಟು. “ಒಂದು ವೇಳೆ ನಾವು ಸಂತ ಅಲೋಶಿಯಸ್ ಅಥವಾ ಸಂತ ಆಗ್ನೇಸ್ ನಂತಹ ದೊಡ್ಡ ಕಾಲೇಜಿನ ವಿದ್ಯಾರ್ಥಿ ಸಮೂಹವನ್ನೋ, ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಸಿಸ್ಟರ್‌ಗಳ ಸಮೂಹವನ್ನೋ ಉದ್ದೇಶಿಸಿ ಮಾತನಾಡಬೇಕಾದರೆ ಅದು ಸುಲಭ ಸಾಧ್ಯವಲ್ಲ. ಆದುದರಿಂದ ಅವರನ್ನೆಲ್ಲ ತಂದು ಒಂದು ಜಾಗದಲ್ಲಿ ಸೇರಿಸಿ ನಮಗೆ ಭಾಷಣ ಮಾಡಲು ಅವಕಾಶ ಮಾಡಿಕೊಡುವ ಕ್ರೈಸ್ತರು ಕಟ್ಟಿದ ‘ವೇದಿಕೆ’ ಗಳು ಇರುವಾಗ ನಾವು ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತೇವೆ. ನಮ್ಮ ವಿಚಾರ ಅವರ ತಲೆಯಲ್ಲಿ ತುಂಬುತ್ತೇವೆ ” ಇದು ಖ್ಯಾತ ಪ್ರಗತಿಪರ ಭಾಷಣಕಾರರ ತರ್ಕ.
ಆದರೆ ಇಂತಹ ಸಾಕಷ್ಟು ಸಭೆ – ಸಂಕಿರಣಗಳನ್ನು ಉಗ್ರಭಾಷಣಕಾರರು ಮತ್ತು ಪ್ರಗತಿಪರರು ದೇಶದ ಪ್ರಧಾನಿಯನ್ನು ಬಯ್ಯುವುದಕ್ಕೋ ಅಥವಾ ಹೀಯಾಳಿಸುವುದಕ್ಕೋ ಬಳಸಿದ ಸಾಕಷ್ಟು ಉದಾಹರಣೆಗಳಿವೆ. ಇದೇ ಸಿಸ್ಟರ್‌ಗಳಿಂದ ಚಪ್ಪಾಳೆ ಹೊಡೆಸಿದ್ದೂ ಇದೆ. ಇಂತಹ ಸಭೆಗಳಲ್ಲಿ ಬಿಸಿಲು – ಮಳೆ ಲೆಕ್ಕಿಸದೇ ಕೊಡೆ ಹಿಡಿದಾದರೂ ನಿಲ್ಲುವುದು – ಇದೇ ಸಿಸ್ಟರ್‌ಗಳು! ಈ ಎಲ್ಲ ಸಿಸ್ಟರ್‌ಗಳನ್ನು ಇಂತಹ ಸಭೆ – ಸಂಕಿರಣಗಳಿಗೆ ಕರೆದುಕೊಂಡು ಬರುವುದು ಡಯಾಸಿಸ್‌ನ ಅಧಿಕೃತ ಪ್ರತಿನಿಧಿಗಳೆನಿಸಿಕೊಂಡವರು. ವಿಪರ್ಯಾಸವೆಂದರೆ ಇಂತಹ ಸಭೆ – ಪ್ರತಿಭಟನೆ – ಸಂಕಿರಣಗಳನ್ನು ಡಯಾಸಿಸ್ ಖುದ್ದಾಗಿ ಆಯೋಜಿಸುವುದೂ ಇಲ್ಲ, ಅದರಲ್ಲಿ ನೇರವಾಗಿ ಭಾಗವಹಿಸುವುದೂ ಇಲ್ಲ. ಉಗ್ರ ಭಾಷಣ ಮಾಡಿ ದೇಶದ ಪ್ರಧಾನಿಯನ್ನು ಗೇಲಿ ಮಾಡಿ ಹೋಗುವ ಪ್ರಗತಿಪರರಿಗಾಗಲೀ, ಸಿಸ್ಟರ್‌ಗಳನ್ನು ಕರೆತರುವ ಡಯಾಸಿಸ್‌ನ ಪ್ರತಿನಿಧಿಗಳೆಂದು ಪೋಸು ಕೊಡುವವರಿಗಾಗಲೀ ಸ್ವಂತದ ಒಂದು ಸಣ್ಣ ಗೂಡಂಗಡಿಯೂ ಇರುವುದಿಲ್ಲ. ಅವರು ಬಂದು – ಮಾತನಾಡಿ, ಪೋಟೊಗೆ ಪೋಸ್ ಕೊಟ್ಟು ಹೋಗ್ತಾರೆ. ಆದರೆ ಮಳೆ – ಗಾಳಿ ಲೆಕ್ಕಿಸದೇ ಪ್ರತಿಭಟನೆಯಲ್ಲಿ ಭಾಗವಹಿಸುವ ಸಿಸ್ಟರ್‌ಗಳಿಗೆ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳೂ ಇರುತ್ತವೆ.
ಉದಹರಣೆಗೆ ಸಿಎಎ, ಎನ್ನಾರ್‌ಸಿ, ಮತಾಂತರ ನಿಷೇಧ ಕಾಯ್ದೆ ವಿರುದ್ದ ಪ್ರತಿಭಟನೆಗಳು ನಡೆಯುವಾಗ ಡಯಾಸಿಸ್ ನೇರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಇಂತದ್ದೇ ಒಂದು ಸಭೆಗೆ ಭಾಷಣ ಮಾಡಲು ಬಂದ ಡಯಾಸಿಸ್ ಪಿ.ಆರ್.ಒ. ತಾನು ಖಾಸಗೀ ನೆಲೆಯಲ್ಲಿ ಬಂದಿದ್ದೇನೆ ಎಂದು ಹೇಳಿ … ದೊಡ್ಡ ಸಂಖ್ಯೆಯಲ್ಲಿ (90%) ಪ್ರತಿಭಟನೆಗೆ ಹಾಜರಾದ ಸಿಸ್ಟರ್‌ಗಳಿಗೆ “ಅಭಿನಂದಿಸುತ್ತೇನೆ, ಧೈರ್ಯವನ್ನು ಮೆಚ್ಚುತ್ತೇನೆ” ಎಂದು ಹೇಳಿ ನಾಲ್ಕು ಚಪ್ಪಾಳೆ ಕೊಡಿಸಿ ಸಿಸ್ಟರ್‌ಗಳನ್ನು ‘ಹೈಲೈಟ್’ ಮಾಡಿದರು. ಅಲ್ಲಿಗೆ ಬಿಜೆಪಿ ಮಾತ್ರವಲ್ಲ, ಜನಸಾಮಾನ್ಯರಲ್ಲೂ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಿಸ್ಟರ್‌ಗಳು ‘ನೋಟೆಡ್’ ಆದರು. (ಈ ಕೆಳಗಿನ ವಿಡಿಯೊ ನೋಡಿ)
ಈ ವಿಡಿಯೋದಲ್ಲಿ ದಾಖಲಾದ ಪ್ರತಿಭಟನೆಯನ್ನು ಆಯೋಜಿಸಿದವರನ್ನು ಅಭಿನಂದಿಸುತ್ತೇನೆ ಎಂದು ಡಯಾಸಿಸ್ ಪಿ.ಆರ್.ಒ ಹೆಸರು ಕರೆದು ಹೇಳುತ್ತಾರೆ. ಪ್ರತಿಭಟನೆಗೆ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ಸಿಸ್ಟರ್‌ಗಳನ್ನೂ ಅಭಿನಂದಿಸುತ್ತಾರೆ. ಕಳೆದ ವರ್ಷಗಳಲ್ಲಿ ಮಂಗಳೂರಿನ ಪರಿಸರದಲ್ಲಿ ಡಯಾಸಿಸ್, ಕಥೊಲಿಕ್ ಸಭಾ, ವಿವಿಧ ಸಾಮರಸ್ಯ – ಜಾತ್ಯಾತೀತ – ಸೌಹಾರ್ದ ಸಂಘಟನೆಗಳು ಸಿಸ್ಟರ್‌ಗಳನ್ನು ದೊಡ್ಡಸಂಖ್ಯೆಯಲ್ಲಿ ಪ್ರತಿಭಟನೆ, ರ‍್ಯಾಲಿ, ವಿಚಾರ ಸಂಕಿರಣಗಳಿಗೆ ನಿರಂತರವಾಗಿ ಬಳಸುತ್ತಲೇ ಬಂದಿದ್ದಾರೆ. ಈ ಸಭೆ – ಪ್ರತಿಭಟನೆ – ಸಂಕಿರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಭಟನೆಗೆ ಸಿಸ್ಟರ್‌ಗಳನ್ನು ಹೊರತುಪಡಿಸಿದರೆ ಹಾಜರಾಗುವುದು ಹತ್ತಿಪ್ಪತ್ತು ತಲೆಗಳು ಮಾತ್ರ. ಡಯಾಸಿಸ್‌ನಿಂದ ಪಾದ್ರಿಗಳು ಬಂದರೂ ಅವರು ಪ್ಯಾಂಟ್ – ಶರ್ಟ್ ನಲ್ಲಿ ಬರುವುದರಿಂದ ‘ನೋಟೆಡ್’ ಆಗುವುದು ಕಡಿಮೆ.
ಈಗ ಪ್ರಶ್ನೆ – ಸಿಸ್ಟರ್‌ಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಸಭೆ – ಸಂಕಿರಣ – ಪ್ರತಿಭಟನೆಗೆ ಬಳಸಿದ ಸಾಮರಸ್ಯ – ಸೌಹಾರ್ದ – ಜಾತ್ಯಾತೀತ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ವೇದಿಕೆಗಳು ಮತ್ತು ಸಮಾನ ಮನಸ್ಕರು ಇಂದು ಸಿಸ್ಟರ್‌ಗಳ ಮೇಲೆ ದಾಳಿಯಾದಾಗ ಒಂದು ಸಣ್ಣ ಮೌನ ಪ್ರತಿಭಟನಾ ಸಭೆಯನ್ನೂ ಯಾಕೆ ಮಾಡಲಿಲ್ಲ? ಸಂತ ಜೆರೋಸಾ ಶಾಲೆಯ ಘಟನೆ ನಡೆದದ್ದು ಶನಿವಾರ ದಿನಾಂಕ 10 ರಂದು. ಸಿಸ್ಟರ್‌ಗಳು ಹೇಗೂ ಆಘಾತದಲ್ಲಿದ್ದರು, ಅವರನ್ನು ತಮ್ಮ ಸಭೆ – ಪ್ರತಿಭಟನೆ – ಸಂಕಿರಣಗಳಿಗೆ ಬಳಸಿಕೊಂಡವರು “ಇದು ಸುಳ್ಳು ವದಂತಿ, ಇದನ್ನು ನಂಬಬೇಡಿ” ಎಂದು ಒಂದು ಹೇಳಿಕೆಯನ್ನೂ ಯಾಕೆ ಕೊಡಲಿಲ್ಲ ? ಮಂಗಳೂರಿನ ಭಿಷಪ್ ಕೂಡಾ ಯಾಕೆ ಮಾತನಾಡಲಿಲ್ಲ ? ಡಯಾಸಿಸ್‌ನಿಂದ ಅಧಿಕೃತ ಪ್ರಕಟಣೆ ಹೊರ ಬಿದ್ದದ್ದೇ ಬುಧವಾರ ದಿನಾಂಕ 14 ರಂದು, ಅದೂ ಪತ್ರಕರ್ತರು ಸತತ ಒತ್ತಡ ಹಾಕಿದ ಮೇಲೆ! ಪಿ. ಆರ್. ಒ ಗಳಿಬ್ಬರು ಬರೆದು, ಸಹಿ ಮಾಡಿ ಕಳುಹಿಸಿದರು. ಒಂದು ಅನಾಮಧೇಯ ವದಂತಿಯನ್ನು “ಅದು ಸುಳ್ಳು, ನಂಬಬೇಡಿ” ಎಂದು ಹೇಳುವ ಧೈರ್ಯ ಯಾರಿಗೂ ಯಾಕಿಲ್ಲವಾಯಿತು ?
ಆದರೆ ಯಾವಾಗ ದಿನಾಂಕ 15 ರಂದು ವಾರ್ತಾಭಾರತಿ ಯೂ ಟ್ಯೂಬ್ ಚಾನೆಲಿನಲ್ಲಿ ಶಾಲಾ ಮುಖ್ಯೋಪಾಧ್ಯಾಯನಿಯವರ ಸ್ಪಷ್ಟೀಕರಣದ ವಿಡಿಯೊ ಪ್ರಸಾರವಾಗಿ ಎರಡು – ಮೂರು ಲಕ್ಷ ವೀಕ್ಷಣೆಯ ಜೊತೆಗೆ, ಕಮೆಂಟ್‌ಗಳ ಮಹಾಪೂರ ಹರಿದು ಬಂತೋ, ಮಂಗಳೂರಿನ ಬಿಷಪ್ ಏಕಾಏಕಿ ಜಾಗೃತರಾಗಿ ” ದ. ಕ. ದ ಯಾವ ಶಾಲೆಯಲ್ಲಿ ಮತಾಂತರ ಮಾಡುತ್ತಾರೆ ? ದಾಖಲೆ ಇದೆಯಾ . . .” ಎಂದು ಬಹಾದೂರಿಯ ವಿಡಿಯೊ ಬೈಟ್ ನೀಡಿದರು. ಈ ವರೆಗೆ ನಾನಂತೂ ಹೆಸರು ಕೇಳರಿಯದ ಸಂಘಟನೆಯೊಂದು ಸಭೆ ನಡೆಸಿ ಮತ್ತೆ ಸಿಸ್ಟರ್‌ಗಳನ್ನು ಜಮಾಯಿಸಿಲಾಯಿತು. ಮತ್ತೆ ವೇದಿಕೆಯಲ್ಲಿ ಅದೇ ಡಯಾಸಿಸ್ ಪಿ.ಆರ್.ಓ. ಗಳು; ಸಿಸ್ಟರ್‌ಗಳಿಂದ ಹೇಳಿಕೆಗಳು. ಇಂದು – ನಾಳೆ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆಗಳ / ಖಂಡನೆಗಳ ಮಹಾಪೂರ ಹರಿದು ಬಂದರೂ ಬರಬಹುದು.
ಅಚ್ಚರಿಯ ಸಂಗತಿಯೆಂದರೆ ಶಾಲಾ ಮುಖ್ಯೋಪಾಧ್ಯಾಯನಿಯವರ ವಿಡಿಯೊ ಬರುವವರೆಗೆ ಸುಮ್ಮನಿದ್ದ ಇವರೆಲ್ಲ ಈಗ ಏಕಾಏಕಿ ಮುನ್ನೆಲೆಗೆ ಬಂದು ಈ ಪರಿ ವಿಡಿಯೋ ಬೈಟ್ ಕೊಡುವಂತಾಗಲು ಈ ಹಿಂದೆ ಇಲ್ಲದ ಧೈರ್ಯ ಈಗ ಬಂದದ್ದಾದರೂ ಹೇಗೆ ? ಇದು ನಿಜವಾಗಿ ಧೈರ್ಯವೋ ಅಥವಾ ಮೊದಲು ಬೇರೆ ಯಾರಾದರೂ ಮಾತನಾಡಲಿ, ಅಲ್ಲಿ ಕಲ್ಲು ಬಿದ್ದರೆ ನಾವು ಸುಮ್ಮನಿರೋಣ, ಅವರ ವಿಡಿಯೊ ‘ರಿಸ್ಕ್’ ಇಲ್ಲದೇ ‘ಪಾಸ್’ ಆದರೆ ಮತ್ತೆ ನಾವೂ ‘ಮೈಲೇಜ್’ ತೆಗೆದುಕೊಳ್ಳೊಣ ಎಂಬ ಗೋಡೆಯ ಮೇಲೆ ಕಾದು ಕೂತು, ಆ ಕಡೆ ಅಥವಾ ಈ ಕಡೆ . . . ಹಾರುವ ಜಾಣನಡೆಯೊ ?
ಡಯಾಸಿಸ್ ಪಿ. ಆರ್.ಒ. ಗಳು ಪತ್ರಿಕಾ ಪ್ರಕಟನೆ ಕೊಟ್ಟದ್ದು ಆಯಿತು; ಶಾಲಾ ಮುಖ್ಯೋಪಾಧ್ಯಾಯನಿಯವರೇ ಪತ್ರಿಕಾ ಪ್ರಕಟಣೆ / ಹೇಳಿಕೆ ಕೊಟ್ಟದ್ದು ಆಯಿತು; ಬಿಷಪ್ ವಿಡಿಯೋ ಹೇಳಿಕೆ ಕೊಟ್ಟದ್ದೂ ಆಯಿತು; ಇನ್ನು ಈ ಸಿ. ಆರ್.ಐ, ಇನ್ನೊಂದು … ಮಗದೊಂದು … ಎಷ್ಟೆಂದು ಪತ್ರಿಕಾ ಪ್ರಕಟನೆಗಳು ? ಯಾಕೆ ? ಇವರು ಇದ್ದಾರೆಂದು ತೋರಿಸಲೋ ಅಥವಾ ಇವರು ಸಿಸ್ಟರ್‌ಗಳ ಜೊತೆ ಇದ್ದಾರೆಂದು ತೋರಿಸಲು ? ಇವರು ಇದ್ದಾರೆಂದು ತೋರಿಸಲು ಅಂದರೆ ಸರಿ, ಆದರೆ ಇವರೆಲ್ಲ . . . ಸಿಸ್ಟರ್‌ಗಳ ಜೊತೆ ಇದ್ದೇವೆ ಎಂದು ‘ಸಾಲಿಡಾರಿಟಿ’ ತೋರಿಸಲು ಹೆಣಗಾಡುತ್ತಿದ್ದರೆ; ಪತ್ರಿಕಾ ಪ್ರಕಟನೆ, ವಿಡಿಯೊ ಬೈಟ್ ಖಂಡಿತ ಸೂಕ್ತ ಮಾರ್ಗವಲ್ಲ! ಸಿಎಎ, ಎನ್ನಾರ್‌ಸಿ, ಮತಾಂತರ ನಿಷೇಧ ಕಾಯ್ದೆ, ಮಣಿಪುರ ಹಿಂಸಾಚಾರ ಸಂದರ್ಭದಲ್ಲಿ ಹೇಗೆ ಬೃಹತ್ ಸಭೆ ನಡೆಸಿ ಅರ್ಭಟಿಸಿ ಇದೇ ಮುಗ್ಧ ಸಿಸ್ಟರ್‌ಗಳನ್ನು ಬಳಸಿ ಘೋಷಣೆಗಳನ್ನು ಕೂಗಿ ಪ್ರತಿರೋಧ ದಾಖಲಿಸಿದ್ದಾರೋ, ಆ ರೀತಿಯಲ್ಲಿ ಅಲ್ಲವಾದರೂ, ಸಾರ್ವಜನಿಕವಾಗಿ ಸಣ್ಣ ಮೌನ ಪ್ರತಿರೋಧವನ್ನಾದರೂ ದಾಖಲಿಸುವ ಕೆಲಸ ಇಂದು ಯಾಕಾಗುತ್ತಿಲ್ಲ ? ಈ ಪ್ರಶ್ನೆ ಕಾಡುತ್ತಿದೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೇಗೆ ಹೊಂದಾಣಿಕೆಯ ರಾಜಕೀಯ ಇದೆಯೋ, ಅಷ್ಟೇ ಆಳವಾಗಿ ಡಯಾಸಿಸ್ ಮತ್ತು ಬಿಜೆಪಿ ನಡುವೆಯೂ ಒಂದು ಹೊಂದಾಣಿಕೆ ಇರುವುದು ಕಂಡು ಬರುತ್ತದೆ. ಅದು ಧರ್ಮ ರಾಜಕಾರಣದ ಹೊಂದಾಣಿಕೆ. ಆದುದರಿಂದ ಸಿಎಎ, ಎನ್ನಾರ್‌ಸಿ ಮುಂತಾದ ಪ್ರತಿಭಟನಾ ಸಭೆಗಳನ್ನು ಡಯಾಸಿಸ್ ತಾನು ಖುದ್ದಾಗಿ ಆಯೋಜಿಸುವುದೂ ಇಲ್ಲ, ನೇರವಾಗಿ ಭಾಗವಹಿಸುವುದೂ ಇಲ್ಲ. ಈ ಕುರಿತು ಧರ್ಮಸಭೆಯ ಮುಖ್ಯಸ್ಥರು ಯಾವುದೇ ಹೇಳಿಕೆಯನ್ನು ನೀಡುವ ಉಸಾಬರಿಗೆ ಹೋಗುವುದಿಲ್ಲ. ಜನರ ಕೈಗೆ ಮೋಂಬತ್ತಿ ಕೊಟ್ಟು ಜನರನ್ನು ರಸ್ತೆ ಬದಿ ನಿಲ್ಲಿಸುತ್ತಾರೆ. ತಾವು ಮಾತ್ರ ಆರಾಮ ಕುರ್ಚಿಯಲ್ಲಿ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಸ್ಟ್ಯಾನ್ ಸ್ವಾಮಿಯಂತಹ ಪಾದ್ರಿಯನ್ನು ಬಂದನದಲ್ಲಿಟ್ಟು ಹಂತ ಹಂತವಾಗಿ ಕೊಲ್ಲುತ್ತಿರುವಾಗ, ಡಯಾಸಿಸ್, ಪಾದ್ರಿಗಳು ಪ್ರತಿಭಟನೆ ಮಾಡುವ ಧೈರ್ಯ ತೋರಲಿಲ್ಲ. ತಮ್ಮ ಓರಗೆಯವರ ಬಗ್ಗೆಯೇ ಮಾತನಾಡಲು ಧೈರ್ಯ ಇಲ್ಲದವರು ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಅನ್ಯಾಯವಾದಾಗ ಹೇಗೆ ಮಾತನಾಡಿಯಾರು ? ಇದಕ್ಕೆ ವ್ಯತಿರಿಕ್ತವಾಗಿ ಕೇರಳದಲ್ಲಿ ಚುನಾವಣೆ ನಡೆಯುವಾಗ ಬಿಜೆಪಿ ಪರವಾಗಿ ಚರ್ಚ್ ಮುಖ್ಯಸ್ಥರೇ ಲಾಭಿಗೆ ಸಹಕರಿಸಲು ಮುಂದಾಗುತ್ತಾರೆ ಮತ್ತು ಇವರ ಪಿ.ಆರ್. ಒ. ಗಳು ಇದಕ್ಕೆ ಸಹಕಾರ ನೀಡಿ, ‘ಭೇಟಿ’ಯನ್ನು ನಾಜೂಕಾಗಿ ನಿರ್ವಹಿಸುತ್ತಾರೆ. ಈ ಕೆಳಗಿನ ದಾಖಲೆ ಗಮನಿಸಿ.
ಇಷ್ಟು ಮಾತ್ರವಲ್ಲ … ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಡಯಾಸಿಸ್ ತಾನು ಮಾತ್ರ ಸಂಘ – ನಿಕೇತನಕ್ಕೆ ಭೇಟಿ ನೀಡಿ ಪೂಜೆಯನ್ನೂ ಸಲ್ಲಿಸುತ್ತದೆ. ಇದು ಖಂಡಿತ ತಪ್ಪಲ್ಲ. ಆದರೆ ಚರ್ಚುಗಳಲ್ಲಿ ಇದೇ ಡಯಾಸಿಸ್‌ನ ಪಾದ್ರಿಗಳು ಕ್ರೈಸ್ತ ಭಕ್ತಾಧಿಗಳಿಗೆ ಮೂರ್ತಿಪೂಜೆ ಮಾಡಬಾರದು, ಪ್ರಸಾದ ತೆಗೆದುಕೊಳ್ಳಬಾರದು, ದೈವಾರಾಧನೆ ನೋಡಬಾರದು ಎಂದು ಬೋಧಿಸುತ್ತಾರೆ. ಇದು ಎಷ್ಟು ಸರಿ ? ಸಾಮಾನ್ಯ ಕ್ರೈಸ್ತರನ್ನು ಗಣೇಶೋತ್ಸವ, ನೇಮ – ಕೋಲಕ್ಕೆ ಹೋಗದಂತೆ ಇವರು ತಡೆಯುವುದು ಯಾಕೆ ? ನೀವು ಮಾತ್ರ ಸೌಹಾರ್ದ – ಸಾಮರಸ್ಯ ಮೆರೆದರೆ ಸಾಕೆ ? ನಗರದ ಚರ್ಚಿನ ಪಾದ್ರಿಯೊಬ್ಬರು ಹೆಣ್ಣುಮಗಳೊಬ್ಬಳು ಕಾಲಿಗೆ ಕಪ್ಪುದಾರ ಕಟ್ಟಿದ್ದಕ್ಕೆ ಗೇಲಿ ಮಾಡಿದ ವಿಡಿಯೋಗಳು ಈಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ತಾವು ಮಾತ್ರ ಬಹುಸಂಖ್ಯಾತರ ಜೊತೆ ಚೆನ್ನಾಗಿದ್ದರೆ ಸಾಕು, ಸಾಮಾನ್ಯ ಜನರು ಪರಸ್ಪರ ಹೊಡೆದಾಡಿಕೊಂಡು ಸಾಯಲಿ ಎಂಬ ನಿಲುವು ಎಷ್ಟು ಸರಿ ?
ಒಂದೆರಡು ವರ್ಷಗಳ ಹಿಂದೆ ಯಾವುದೋ ಒಂದು ಕಾನ್ವೆಂಟಿನ ಸಿಸ್ಟರ್‌ಗಳು ಗಣೇಶೋತ್ಸವ ಮಂಟಪಕ್ಕೆ ಭೇಟಿ ನೀಡಿ ಫಲ ಫುಷ್ಪ ಅರ್ಪಿಸಿದಾಗ ಡಯಾಸಿಸ್ ಮುಖ್ಯಸ್ಥರು ದೊಡ್ಡ ರಾದ್ದಾಂತವನ್ನೇ ಮಾಡಿ ಸಿಸ್ಟರ್‌ಗಳನ್ನು ತೀವೃ ತರಾಟೆಗೆ ತೆಗೆದುಕೊಂಡು ಬೆದರಿಸಿದ ಘಟನೆಯೂ ನಡೆದದ್ದಿದೆ. ಆದರೆ ಸಿಎಎ, ಎನ್ನಾರ್‌ಸಿ, ಮತಾಂತರ ನಿಷೇದ, ಮಣಿಪುರ ಹಿಂಸಾಚಾರ ಮುಂತಾದ ಪ್ರತಿಭಟನೆಗಳಿಗೆ ಇದೇ ಮುಗ್ಢ ಸಿಸ್ಟರ್‌ಗಳನ್ನು ನಿರಂತರ ಬಳಸಿಕೊಳ್ಳಲಾಗುತ್ತಿದೆ. ಮಾತ್ರವಲ್ಲ ಯಾರೋ ಮಾಡುವ ಪ್ರತಿಭಟನೆಗಳಿಗೆ ಇದೇ ಸಿಸ್ಟರ್‌ಗಳನ್ನು ಕಳುಹಿಸಿ ಕೊಡಲಾಗುತ್ತಿದೆ. ಡಯಾಸಿಸ್ ಪ್ರಮುಖರು ಮಾತ್ರ ಸರಕಾರದ ವಿರುದ್ದ ಇಂತಹ ಯಾವುದೇ ಪ್ರತಿಭಟನೆಗಳಲ್ಲಿ ತಾವು ಖುದ್ದಾಗಿ ಭಾಗವಹಿಸುವುದಿಲ್ಲ; ಅಕಸ್ಮಾತ್ ಭಾಗವಹಿಸಿದರೂ ತಾನು ಡಯಾಸಿಸನ್ನು ಪ್ರತಿನಿಧಿಸುತ್ತಿಲ್ಲ, ಖಾಸಗೀ ನೆಲೆಯಲ್ಲಿ ಬಂದಿದ್ದೇನೆ ಎಂದು ಹೇಳಿ ನಾಜೂಕಾಗಿ ಕೈ ತೊಳೆದುಕೊಳ್ಳುತ್ತಾರೆ. ಪರ್ಯಾಯವಾಗಿ ಸಂಘ – ನಿಕೇತನದ ಗಣೇಶೋತ್ಸವಕ್ಕೋ, ಕುದ್ರೋಳಿ ದಸರಾಕ್ಕೋ ಸೌಹಾರ್ದತೆಯ, ಬಂದುತ್ವದ, ಸಾಮರಸ್ಯದ ಹೆಸರಿನಲ್ಲಿ ಬಿಷಪ್ಪರೊಡನೆ ಭೇಟಿ ನೀಡಿ ‘ಸೆಟಪ್’ ಮಾಡಿಕೊಳ್ಳುತ್ತಾರೆ.
ಕರಾವಳಿಯ ಕಾಂಗ್ರೆಸ್ ಮತ್ತು ಬಿಜೆಪಿಯ ಹೊಂದಾಣಿಕೆ ರಾಜಕಾರಣಕ್ಕೆ ಹೇಗೆ ಬಿಲ್ಲವ, ಬಂಟ ಮತ್ತು ಇತರ ಹಿಂದುಳಿದ ವರ್ಗದ ಜನರೂ, ಮಧ್ಯಮ ವರ್ಗದ ಮುಸಲ್ಮಾನರೂ ಬಲಿಯಾಗುತ್ತಿದ್ದಾರೋ, ಹಾಗೆಯೇ ಡಯಾಸಿಸ್ ಮತ್ತು ಬಿಜೆಪಿಯ ಹೊಂದಾಣಿಕೆ ರಾಜಕಾರಣಕ್ಕೆ ಮುಗ್ಧ ಸಿಸ್ಟರ್‌ಗಳು ಮತ್ತು ಸಾಮಾನ್ಯ ಕ್ರೈಸ್ತ ಭಕ್ತಾಧಿಗಳು ಬಲಿಯಾಗುತ್ತಿದ್ದಾರೆ. ಚರ್ಚ್ ಎಟ್ಯಾಕ್ ಎಂದು ಹೆಸರಾದ 2008 ರ ದಾಳಿ ಕೂಡಾ ನಡೆದದ್ದು ಇದೇ ಸಿಸ್ಟರ್‌ಗಳ ಮಿಲಾಗ್ರಿಸ್ ಅಡೊರೇಶನ್ ಮೊನೆಸ್ಟ್ರಿ ಮೇಲೆ, ಇಂದು ದಾಳಿಯಾಗಿರುವುದೂ ಇದೇ ಸಿಸ್ಟರ್‌ಗಳ ಸಂತ ಜೆರೋಸಾ ಶಾಲೆಯ ಮೇಲೆ ಎಂಬುದನ್ನು ಮರೆಯಬಾರದು. ಈಗಲಾದರೂ ಮುಗ್ಧ ಸಿಸ್ಟರ್‌ಗಳು ಎಚ್ಚೆತ್ತುಕೊಳ್ಳಬೇಕು.
ಇತ್ತೀಚೆಗೆ ಹಾಲಿ ವಿದಾನಸಭಾ ಸ್ಪೀಕರ್ ಖಾದರ್ ಅವರ ಒಂದು ರೀಲ್ ನೋಡಿದ್ದೆ – “ನಾವು ಸದನದೊಳಗೆ ಜಗಳ ಮಾಡುವುದನ್ನು ಟಿ. ವಿ. ಯಲ್ಲಿ ನೋಡಿ ನೀವು – ನೀವು ಪೆಟ್ಟ್ ಮಾಡ್ಲಿಕ್ಕೆ ಹೋಗಬೇಡಿ ಮಾರಾಯ್ರೇ. ನಾವು ಸದನದಿಂದ ಹೊರಗೆ ಬರುವಾಗ ಎಲ್ಲ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಬರುತ್ತೇವೆ – ಚೆನ್ನಾಗಿರುತ್ತೇವೆ. ನೀವು ಜಾಗ್ರತೆ ಮಾಡಿಕೊಳ್ಳಿ.”
ಶಾಸಕ ಕಾಮತರು ಅಮಾಯಕ ಸಿಸ್ಟರ್‌ಗಳನ್ನು ಕಣ್ಮುಂದೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುವಾಗ ಕೈಕಟ್ಟಿ ತುಟಿ ಪಿಟಕ್ ಅನ್ನದೇ ಅಲ್ತಾರ್ ಬೊಯ್ ತರ ನಿಂತ ಡಯಾಸಿಸ್‌ನ ವ್ಯಕ್ತಿಯ ಚಿತ್ರವನ್ನು ನೋಡಿ, ಸಿಸ್ಟರ್‌ಗಳು ಮಾತ್ರವಲ್ಲ ಸಮಸ್ತ ಕ್ರೈಸ್ತರು ಇಂದು ಅತ್ಮಾವಲೋಕನ ಮಾಡಿಕೊಳ್ಳಲೇಬೇಕಾಗಿದೆ.
12 comments